ದೇಶದ ಘನತೆಯನ್ನು ಪ್ರಪಂಚಮುಖದಲ್ಲಿ ಎತ್ತಿಹಿಡಿದ ವೀರಸನ್ಯಾಸಿಯ ಬದುಕಿನ ಆದರ್ಶಗಳು ಪಠ್ಯಪುಸ್ತಕಗಳಿಂದ ತೊಡಗಿ ನಾನಾ ಬಗೆಯ ಗ್ರಂಥಗಳವರೆಗೆ ಅಡಿಗಡಿಗೆ ನೆನಪಿಸಲ್ಪಡುತ್ತಲೇ ಸ್ವಾಮಿ ವಿವೇಕಾನಂದರ ವಿಚಾರಗಳು ಸಮಾಜಕ್ಕೆ ದಾರಿದೀಪವಾಗಿವೆ. ಮತ್ತು ಅವರು ದೇಶದ ಯುವ ಸಮುದಾಯಕ್ಕೆ ‘ನಿತ್ಯಸ್ಫೂರ್ತಿ’ ಮಹಾಸಂತ ಎಂದು ಜಾನಪದ ವಿದ್ವಾಂಸ ಮಲ್ಲಯ್ಯ ಸ್ವಾಮಿ ತೋಟಗಂಟಿ ಹೇಳಿದರು.
ಜಿಲ್ಲೆಯ ಕಲಘಟಗಿ ಪಟ್ಟಣದ ವಿದ್ಯಾಸಾಗರ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಹಾಗೂ 2026 ವರ್ಷದ ಕ್ಯಾಲೆಂಡರ್ ಲೋಕಾರ್ಪಣೆ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 2026 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಭಾರತದ ಆಧ್ಯಾತ್ಮಿಕ ಸಂಸ್ಕೃತಿ-ಸಂಸ್ಕಾರ- ಉತ್ಕೃಷ್ಟ ವಿಚಾರಗಳನ್ನು ವಿವೇಕಾನಂದರು ಜಗತ್ತಿಗೆ ಪರಿಚಯಿಸಿದ ಸಂದರ್ಭವಾಗಿ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಭಾಷಣ ಕಂಡುಬರುತ್ತದೆ. ‘ಅಮೇರಿಕದ ಸಹೋದರ ಸಹೋದರಿಯರೇ’ ಎಂಬ ಅವರ ಭಾಷಣದ ಆರಂಭ ಇಂದಿಗೂ ರೋಮಾಂಚನಕಾರಿ ಅನುಭವವಾಗಿ ಅಂತರಂಗದಲ್ಲಿ ಸಂಚಲನ ಮೂಡಿಸುತ್ತದೆ. ಭಾರತೀಯರಿಗೆ ಇದು ಹೆಮ್ಮೆ ತರುವ ವಿಚಾರ ಎಂದರು.
ಹಿರಿಯ ಸಾಹಿತಿ ಕೆ. ಬಿ. ಪಾಟೀಲ್ ಕುಲಕರ್ಣಿ ಮಾತನಾಡಿ, ವಿವೇಕಾನಂದರು ನೂರಾರು ವರ್ಷಗಳ ಹಿಂದೆಯೇ ಆದರ್ಶಗಳನ್ನು ಬಿತ್ತಿ, ನಮ್ಮೊಳಗಿನ ಉತ್ಸಾಹವನ್ನು ಹೊರಹೊಮ್ಮಿಸುವ ಕಾಯಕ ಮಾಡಿದ್ದಾರೆ. ಅವರ ಪ್ರೇರಣೆ ನಮ್ಮೆಲ್ಲರಲ್ಲೂ ಸದಾ ಜಾಗೃತಿ ಹಾಗೂ ‘ದೇಶ ಮೊದಲು’ ಎಂಬ ಭಾವನೆಯನ್ನು ಮೂಡಿಸಬೇಕಿದೆ ಎಂದರು. ಈ ವೇಳೆ ವಿದ್ಯಾಸಾಗರ ಸ್ಕೂಲಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವೇಕಾನಂದರ ವೇಷ ಭೂಷಣ ಉಡುಗೆ ತೊಟ್ಟು ವಿದ್ಯಾರ್ಥಿಗಳು ಗಮನ ಸೆಳೆದರು. ವಿದ್ಯಾಸಾಗರ್ ಸ್ಕೂಲ್ ಪ್ರಾಂಶುಪಾಲರಾದ ಸುನೀತಾ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ ಧಾರವಾಡ | ಬಾಲ್ಯ ವಿವಾಹ ನಿರ್ಮೂಲನೆ ಮಾಡುವಲ್ಲಿ ಶ್ರಮವಹಿಸಬೇಕು: ನ್ಯಾ. ಪರುಶುರಾಮ ದೊಡ್ಡಮನಿ
ಕ. ಸಾ. ಪ ತಾಲೂಕು ಅಧ್ಯಕ್ಷ ರಮೇಶ ಸೋಲಾರಗೋಪ್ಪ, ಕಸಾಪ ಗೌರವ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ರಂಗಾಪುರ. ಕೇಂದ್ರ ಪ್ರಶಸ್ತಿ ಪುರಸ್ಕೃತ ಅಶೋಕ ಅರ್ಕಸಾಲಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಎಚ್ ಎನ ಸುನಗದ, ಕಜಾಪ ಅಧ್ಯಕ್ಷ ವೀರಣ್ಣ ಕುಬಸದ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಲಿಂಗ ಒಡೆಯರ, ಕರ್ನಾಟಕ ಸಂಗ್ರಾಮ ಸೇನೆಯ ತಾಲೂಕಾಧ್ಯಕ್ಷ ಸಾತಪ್ಪ ಕುಂಕೂರ, ಅರುಣ್ ಪಾಟೀಲ ವಿನಾಯಕ ಭಟ್, ಸೌಮ್ಯ ಪಾಟೀಲ, ಸುಭಾಸ ಕಂಪ್ಲಿಕೋಪ್ಪ, ಸೇರಿದಂತೆ ಕ ಸಾ ಪ ಪದಾಧಿಕಾರಿಗಳು, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಸಿಬ್ಬಂದಿ ಉಪಸ್ಥಿತರಿದ್ದರು.





