ಧೈರ್ಯ, ದೇಶಭಕ್ತಿ ಮತ್ತು ಸ್ತ್ರೀಶಕ್ತಿಯ ಪ್ರತೀಕವಾದ ವೀರವನಿತೆ ಒನಕೆ ಓಬವ್ವ. ಅವರ ತ್ಯಾಗ ಮತ್ತು ಸಾಹಸವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು. ಅವರಂತಹ ಮಹಿಳೆಯರನ್ನು ನಾವು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
ನವೆಂಬರ್ 11ರ ಬೆಳಿಗ್ಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ವೀರವನಿತೆ ಒನಕೆ ಓಬವ್ವ ಜಯಂತಿಯ ಅಂಗವಾಗಿ ಒನಕೆ ಓಬವ್ವಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಒನಕೆ ಓಬವ್ವ ಅವರು ತಮ್ಮ ಬುದ್ದಿಶಕ್ತಿ ಮತ್ತು ಧೈರ್ಯದಿಂದ ತಮ್ಮ ಕಾಲದ ಆಕ್ರಮಣಕಾರರಿಗೆ ತಕ್ಕ ಪ್ರತಿರೋಧ ನೀಡಿದರು. ಶಾಲೆ-ಕಾಲೇಜುಗಳಲ್ಲಿ ಅವರ ಜೀವನದ ಕುರಿತು ವಿಶೇಷ ಚರ್ಚೆಗಳನ್ನು ನಡೆಸಿದರೆ ಮಕ್ಕಳಿಗೂ ಅವರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಒನಕೆ ಓಬವ್ವ ಅವರ ಸಾಹಸ ಕೇವಲ ಇತಿಹಾಸದ ಒಂದು ಘಟನೆ ಅಲ್ಲ, ಅದು ಮಹಿಳಾ ಶಕ್ತಿಯ ಶಾಶ್ವತ ಚಿಹ್ನೆ. ಒನಕೆ ಓಬವ್ವ ನಮಗೆ ತೋರಿಸಿದ ಮಾರ್ಗ ದಿವ್ಯದೃಷ್ಠಿಯದ್ದಾಗಿದೆ. ನಾವೆಲ್ಲರೂ ಅವರ ಧೈರ್ಯ, ನಿಷ್ಠೆ ಮತ್ತು ದೇಶಭಕ್ತಿಯ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಹಾಗೂ ಸಾಹಿತಿ ಡಾ. ಸದಾಶಿವ ಮರ್ಜಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ, ಗೌರವಿಸಿದರು. ಸುಶೀಲಮ್ಮ ಚಲವಾದಿ ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು. ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ್, ಸಮಾಜದ ಮುಖಂಡರುಗಳಾದ ಆನಂದ ಮುಶನ್ನವರ, ಮೇಘರಾಜ ಗುಡಿಮನಿ, ಯಲ್ಲಪ್ಪ ಮಂಟೂರ, ದೇವಾನಂದ ರತ್ನಾಕರ, ಶಿವಪುತ್ರಪ್ಪ ಚಿಕ್ಕಪ್ಪ ಹಾಗೂ ಇತರರು ವೇದಿಕೆಮೇಲಿದ್ದರು.
ಇದನ್ನೂ ಓದಿ ಧಾರವಾಡ | ಮಹಿಳೆಯರು, ಶೋಷಿತರಿಗೆ ನ್ಯಾಯ ದೊರೆತಾಗ ಸ್ವಾತಂತ್ರ್ಯಕ್ಕೆ ಅರ್ಥಬರುತ್ತದೆ: ಎ.ಎಸ್. ಬಳ್ಳಾರಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





