ʼಕೊಂದವರುಳಿವರೇ ಜಗದೊಳಗೆ?' ಎಂದು ಪ್ರಶ್ನಿಸುವ ಮೂಲಕ ಬಸವಣ್ಣ, ಕೊಲ್ಲುವ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಖಂಡಿಸುತ್ತ, 'ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ' ಎಂದು ಸಾರುತ್ತಾರೆ. ಇದನ್ನು ಅರ್ಥೈಸಿಕೊಳ್ಳುವುದರಲ್ಲಿ ನಾವು ಸೋತಿದ್ದೇವೆ. ಜೀವ ಹೋದರೂ ಚಿಂತೆ ಇಲ್ಲ, ಜಾತಿಯನ್ನು ಬಿಡಬಾರದು ಎನ್ನುವ ಅಜ್ಞಾನದ ಕೂಪದಲ್ಲಿಯೇ ಬಿದ್ದು ಒದ್ದಾಡುತ್ತಿದ್ದೇವೆ.
ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾದ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣವು ರಾಜ್ಯದ ಜನತೆಯ ಶಾಂತಿಯನ್ನೇ ಕಿತ್ತುಕೊಂಡಿದೆ. ಬಸವಣ್ಣ 12ನೇ ಶತಮಾನದಲ್ಲೇ ಜಾತೀಯತೆಯ ಬೇರನ್ನೇ ಕಿತ್ತೆಸೆಯುವಲ್ಲಿ ಯಶಸ್ವಿ ಕಂಡಿದ್ದರು. ಆದರೆ; ಅವರ ಸಾಮಾಜಿಕ ಚಿಂತನೆ, ಜಾತಿರಹಿತ ಸಮಾಜದ ಪರಿಕಲ್ಪನೆಯ ಬಗ್ಗೆ ಅರಿವಿಲ್ಲದ ಜಾತಿವಾದಿಗಳು ಇವತ್ತಿಗೂ ಬಸವಣ್ಣನವರನ್ನು ಅರ್ಥೈಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ.
‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುವ ಮೂಲಕ ಬಸವಣ್ಣ ಕೆಳ-ಜಾತೀಕರಣಕ್ಕೆ, ಕೆಳ-ವರ್ಗೀಕರಣಕ್ಕೆ ಒಳಗಾದರು. ಬಸವಣ್ಣನವರ ಇಂತಹ ಕ್ರಾಂತಿಕಾರಿ ವಿಚಾರಗಳು ಅಸ್ಪೃಶ್ಯತೆಯಂತಹ ಅನಿಷ್ಟ ಪದ್ದತಿಗಳನ್ನು ಆಚರಿಸುವ, ಜಾತೀಯತೆಯಲ್ಲಿಯೇ ಮುಳುಗಿರುವ ಜಾತಿವಾದಿ ಲಿಂಗಾಯತರಿಗೆ ಇಂದಿಗೂ ಅರ್ಥವಾಗದಿರುವುದು ಅತ್ಯಂತ ಖೇದಕರ ಸಂಗತಿ. ‘ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ, ರಾಶಿ ಕೂಟ, ಋಣ ಸಂಬಂಧ, ಚಂದ್ರಬಲ, ತಾರಾಬಲ ಉಂಟೆಂದು ಹೇಳಿರಯ್ಯ’ ಎನ್ನುವ ಮೂಲಕ ವಿವಾಹಕ್ಕೆ ಎರಡು ಮನಸ್ಸುಗಳ ಮಿಲನವಾಗಬೇಕೇ ಹೊರತು, ಮನುಷ್ಯ ನಿರ್ಮಿತ ಎರಡು ಜಾತಿಗಳಲ್ಲವೆಂದು ಬಸವಣ್ಣ ಸಾರಿದ್ದರು. ‘ಜಾತಿ ಸಂಕರವಾದ ಬಳಿಕ ಕುಲವನರಸುವರೇ?’ ಎಂದಿದ್ದರು. ಆದರೂ; ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ, ತಾವು ಇಷ್ಟಪಟ್ಟು ಪ್ರೀತಿಸಿದವರ ಜತೆಗೆ ಮದುವೆಯಾಗುವ ಸ್ವಾತಂತ್ರ್ಯ ಇವತ್ತಿಗೂ ದೊರೆತಿಲ್ಲವೆಂದು ಹೇಳಬಹುದು.
ನಾನು ಬಸವಣ್ಣನ ಕುಲದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾತ ಕೇವಲ ಜಾತಿಯ ಸಲುವಾಗಿ ತಾನೇ ಸಾಕಿ-ಸಲುಹಿದ, ಹೆತ್ತ ಮಗಳನ್ನೇ ಕೊಲ್ಲುವಷ್ಟರ ಮಟ್ಟಿಗೆ ದುಷ್ಟನಾಗುತ್ತಾನೆಂದರೆ ಅಂತಹ ಮನಸ್ಸುಳ್ಳುವರು ಕೇವಲ ಜಾತಿವಾದಿ ಲಿಂಗಾಯತರೆಂದು ಪರಿಗಣಿಸಬೇಕಾಗುತ್ತದೆ. ಅಸಲಿಗೆ ಲಿಂಗಾಯತ ಎನ್ನುವುದು ಜಾತಿಯೇ ಅಲ್ಲ. ಬಸವಣ್ಣ ಎಲ್ಲ ಜಾತಿ, ಸಮುದಾಯಗಳನ್ನು ಒಟ್ಟುಗೂಡಿಸಿ, ಲಿಂಗಾಯತ ಎನ್ನುವ ಶರಣ-ಸಂಕುಲವನ್ನು ಕಟ್ಟುತ್ತಾರೆ. ಬಸವ ಪೂರ್ವದಲ್ಲಿ ಇವತ್ತಿನ ಎಲ್ಲ ಲಿಂಗಾಯತರು ತಳ ಸಮುದಾಯದವರೇ ಆಗಿದ್ದರು. ಹಾಗಂತ ಈಗೇನು ಮೇಲ್ವರ್ಗದವರಾಗಿದ್ದಾರೆ ಎಂದು ಹೇಳಲಾಗುವುದಿಲ್ಲ. ಮೊದಲು ‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ?’ ಅನ್ನುವ ಸರ್ವಜ್ಞರ ಪ್ರಶ್ನೆ ನಮಗೆಲ್ಲ ಅರ್ಥವಾಗಬೇಕಿದೆ.
‘ದಯವೇ ಧರ್ಮದ ಮೂಲ’, ‘ಕೊಲ್ಲದಿಪ್ಪುದೇ ಧರ್ಮ’, ‘ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಎಂದೆನಿಸಯ್ಯ’, ‘ಸಕಲ ಜೀವಾತ್ಮರಿಗೆ ಲೇಸ ಬಯಸುವಾತನೇ ಕುಲಜನು’ ಎಂಬ ಶರಣರ ಈ ವಿಚಾರಗಳು ಜಾತಿವಾದಿಗಳಿಗೆ ಅರ್ಥವಾಗಿದ್ದರೆ; ಅಥವಾ ಅರ್ಥಮಾಡಿಸಿದ್ದರೆ; ಇವತ್ತು ‘ಮಾನ್ಯ’ ಎನ್ನುವ ಗರ್ಭಿಣಿ ಹೆಣ್ಣುಮಗಳು ಮರ್ಯಾದೆಗೇಡು ಹತ್ಯೆ ಹೆಸರಿನಲ್ಲಿ ಕೊಲೆಯಾಗುತ್ತಿರಲಿಲ್ಲ. ಬಸವಣ್ಣ ‘ಅಂತರ್ಜಾತಿ ವಿವಾಹ’ ಮಾಡುವ ಮೂಲಕ ಗಡಿಪಾರು ಶಿಕ್ಷೆಗೆ ಒಳಗಾದರು. ಮುಂದುವರೆದು ಶರಣರ ಕಗ್ಗೊಲೆ ಆಯಿತು. ಸರ್ವ ಸಮಾನತೆಯನ್ನು ಸಾರುವ ವಚನ ಕಟ್ಟುಗಳು ಬೆಂಕಿಗೆ ಆಹುತಿಯಾದವು. ಅದಕ್ಕೂ ಮೊದಲು ಮತ್ತು ಜಾತಿಯ ವಿಚಾರದಲ್ಲಿ ಅದೆಷ್ಟೋ ಕೊಲೆಗಳು ನಡೆದಿವೆ. ಅವುಗಳಲ್ಲಿ ತಳಸಮುದಾಯದವರೇ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
15ನೇ ಶತಮಾನದ ಕಾಲಘಟ್ಟದಲ್ಲಿ ಲಿಂಗಾಯತರು ಲಿಂಗಿ ಬ್ರಾಹ್ಮಣರಾದರು. ಮತ್ತೆ 300 ವರ್ಷಗಳ ನಂತರ ಜಮೀನ್ದಾರಿ ಪದ್ಧತಿಗಳು, ಊಳಿಗಮಾನ್ಯ ಪದ್ದತಿ ಚಾಲ್ತಿಗೆ ಬಂದವು. ಇದರಿಂದ ತಾವು ಮೇಲ್ವರ್ಗದವರು ಎಂದೆನಿಸಿಕೊಂಡು, ತಳಸಮುದಾಯಗಳ ಮೇಲೆ ದೌರ್ಜನ್ಯ ಎಸುಗುತ್ತ ಬಂದರು. ಇವತ್ತಿಗೂ ಬಹುತೇಕ ಹಳ್ಳಿಗಳಲ್ಲಿ ಜಾತೀಯತೆ ಜೀವಂತವಾಗಿದೆ. ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಆಗಮನದಿಂದ ಅಜ್ಞಾತವಾಸದಲ್ಲಿದ್ದ ವಚನಗಳು ಜನ ಸಮುದಾಯಗಳ ಕೈಗೆ ಸಿಕ್ಕವು. ಅಲ್ಲಿಂದ ಇತ್ತೀಚಿಗೆ ಕೆಲವು ಪ್ರತಿಶತ ಲಿಂಗಾಯತರು ಜಾಗೃತರಾದರು. ಸಮಾನ ಮನಸ್ಕರ ಪಟ್ಟಿಗೆ ಸೇರಿದರು. ಆದರೆ; ಹಲವರು ಜಾತಿಯ ವಿಷದ ವರ್ತುಲದಲ್ಲಿಯೇ ಬಿದ್ದು, ಬಾವಿಯೊಳಗಿನ ಕಪ್ಪೆಗಳಂತಾಗಿಯೇ ಉಳಿದಿದ್ದೇ ಇವತ್ತಿನ ಮರ್ಯಾದೆಗೇಡು ಹತ್ಯೆಗೆ ಕಾರಣವಾಯಿತು.
ಧಾರ್ಮಿಕ ಮುಖಂಡರು, ಸ್ವಾಮೀಜಿಗಳು ‘ನಮ್ಮ ಕುಲದ ನೆಲೆ’ಯ ಬಗ್ಗೆ ಸರಿಯಾಗಿ ಅರಿವು ಮೂಡಿಸಿದ್ದರೆ, ಜಾಗೃತ ಸಭೆ, ಸಮಾರಂಭಗಳನ್ನು ಹೆಚ್ಚೆಚ್ಚು ರೂಪಿಸಿದ್ದರೆ; ಇಂತಹ ಅನಾಹುತಗಳನ್ನು ತಪ್ಪಿಸಬಹುದಿತ್ತೇನೋ!. ‘ನೆಲವೊಂದೇ ಹೊಲಗೇರಿ ಶಿವಾಲಯಕೆ’ ಎಂದು ಬಸವಣ್ಣ ಹೇಳುತ್ತಾರೆ. ನಾವೆಲ್ಲ ‘ಜೀವಿಸುವ ನೆಲವೊಂದೇ, ಕುಡಿಯುವ ನೀರೊಂದೇ, ಸೇವಿಸುವ ಗಾಳಿಯೊಂದೇ’. ಭೂಮಿ ಗೋಲಾಕಾರ ಆಗಿರುವ ಕಾರಣ ನಾವಾರೂ ಒಬ್ಬರನ್ನು ಬಿಟ್ಟು ಒಬ್ಬರಿಲ್ಲ ಎನ್ನುವ ಈ ಸತ್ಯ ಸಂಗತಿ ನಮಗೆ ತಿಳಿದಿದ್ದರೂ; ಜಾತಿ ತಾರತಮ್ಯ, ಜಾತಿ ವೈಶಮ್ಯಗಳು ಇವತ್ತಿಗೂ ನಡೆಯುತ್ತಿವೆ.
ಇದನ್ನೂ ಓದಿದ್ದೀರಾ? ʼಸ್ತನ್ಯಪಾನʼ ಅಮೃತ ಸಮಾನ: ತಾಯಿ-ಮಗು ಬಾಂಧವ್ಯಕ್ಕೆ ಅಡಿಗಲ್ಲು
ʼಕೊಂದವರುಳಿವರೇ ಜಗದೊಳಗೆ?’ ಎಂದು ಪ್ರಶ್ನಿಸುವ ಮೂಲಕ ಬಸವಣ್ಣ, ಕೊಲ್ಲುವ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಖಂಡಿಸುತ್ತ, ‘ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು ಸಾರುತ್ತಾರೆ. ಇದನ್ನು ಅರ್ಥೈಸಿಕೊಳ್ಳುವುದರಲ್ಲಿ ನಾವು ಸೋತಿದ್ದೇವೆ. ಜೀವ ಹೋದರೂ ಚಿಂತೆ ಇಲ್ಲ, ಜಾತಿಯನ್ನು ಬಿಡಬಾರದು ಎನ್ನುವ ಅಜ್ಞಾನದ ಕೂಪದಲ್ಲಿಯೇ ಬಿದ್ದು ಒದ್ದಾಡುತ್ತಿದ್ದೇವೆ. ಇದರಿಂದ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಒಟ್ಟಾರೆಯಾಗಿ ಇಂತಹ ಅಸ್ಪೃಶ್ಯತೆ, ಜಾತೀಯತೆ ಆಚರಿಸುವ ಮೂಲಕ ಮರ್ಯಾದೆಗೇಡು ಹತ್ಯೆಗೆ ಮಾಡುವ ಮನಸ್ಸುಗಳಿಗೆ ಸರಿಯಾದ ಮಾರ್ಗದರ್ಶನ ಬೇಕಿದೆ. ಜಾಗೃತಿಯ ಅವಶ್ಯವಿದೆ. ಆ ನಿಟ್ಟಿನಲ್ಲಿ ಸರ್ಕಾರವೂ ಮೊನ್ನೆಚ್ಚರಿಕೆ ವಹಿಸುವ ಅನಿವಾರ್ಯತೆ ಇದೆ.





