ಧಾರವಾಡದ ಕಡಪಾ ಮೈದಾನದಲ್ಲಿರುವ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನವು ಇಂದಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿ ತೀರಾ ದಯನೀಯ ಸ್ಥಿತಿ ತಲುಪಿದೆ. ಸುಮಾರು 20 ವರ್ಷಗಳಿಂದ ಈ ಭವನದಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿಲ್ಲ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಿದ್ದ ಈ ಸ್ಥಳ ಇದೀಗ ಉಪಯೋಗವಿಲ್ಲದ ವಸ್ತುಗಳನ್ನು ಇಡುವ, ಕಸ ತುಂಬಿರುವ ಗೋದಾಮಾಗಿ ಬದಲಾಗಿದೆ.
ಖ್ಯಾತ ಸಂಗೀತಗಾರ ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ನೆನಪಿಗಾಗಿ ಲೋಕಸಭೆ ಸದಸ್ಯ ಡಿ ಕೆ ನಾಯ್ಕರ ಅವರ ಅಧಿಕಾರವಾಧಿಯಲ್ಲಿ ನಿರ್ಮಾಣಗೊಂಡ ಈ ಕಲಾಭವನದಲ್ಲಿ ಇದೀಗ ಜನಪ್ರತಿನಿಧಿಗಳ ಹಳೆಯ ಬ್ಯಾನರ್, ಗಣೇಶನ ವಿಗ್ರಹಗಳು ಮತ್ತು ಇತ್ಯಾದಿ ಹಾಳಾಗಿರುವ ವಸ್ತುಗಳನ್ನು ಕಾಣಬಹುದಷ್ಟೆ. ಕಲಾಭವನದ ಒಳಭಾಗದಲ್ಲಿ ಬಹಳ ವರ್ಷಗಳಿಂದ ಕಸ ಗುಡಿಸದೆ ಧೂಳು ತುಂಬಿದೆ. ನಿರ್ವಹಣೆ ಕೊರತೆಯಿಂದ ಒಳಗಿರುವ ಕುರ್ಚಿಗಳು ಜಂಗು ಹಿಡಿಯುತ್ತಿವೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಗೋಡೆಗೆ ಹೊಂದಿಸಿದ ಮತ್ತು ಕಿಟಕಿಗಳ ಗ್ಲಾಸ್’ಗಳು ಒಡೆದು ಹಾಳಾಗಿವೆ. ಕಬ್ಬಿಣದ ರಾಡ್‌ಗಳು ಯಾರಿಗಾದರೂ ಚುಚ್ಚುವಂತೆ ಎದ್ದು ಕಾಣುತ್ತಿವೆ. ಮೇಲ್ಛಾವಣಿ ಬೀಳುವ ಸ್ಥಿತಿಯಲ್ಲಿದೆ. ಲೈಟ್ಗಳು ಗೋಡೆಯಿಂದ ಕಿತ್ತು ಜೋತುಬಿದ್ದಿವೆ. ಕಲಾವಿದರಿಗೆ ಉಪಯೋಗವಾಗಬೇಕಿದ್ದ ಭವನವು ಸಂಪೂರ್ಣ ಪ್ರಯೋಜನಕ್ಕೆ ಬಾರದೇ ಬಾಗಿಲು ಮುಚ್ಚಿಕೊಂಡಿದೆ.
ಈ ಕಟ್ಟಡದ ನಿರ್ವಹಣೆಗೆ ಯಾವುದೇ ಇಲಾಖೆಯ ಆಸಕ್ತಿ ಕಾಣಿಸುತ್ತಿಲ್ಲ. ಸ್ಥಳೀಯರು ಹೇಳುವಂತೆ, ಒಂದು ಕಾಲದಲ್ಲಿ ಸಂಗೀತ, ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಯಾಗಿದ್ದ ಈ ಭವನವು ಇಂದು ಅಪರೂಪದ ಕಲಾವಿದನ ಹೆಸರಿಗೆ ಧಕ್ಕೆಯಾಗುವಂತ ಸ್ಥಿತಿ ತಲುಪಿದೆ.

ಇದೀಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕಲಾಭವನದ ಮುಂಭಾಗದಲ್ಲಿ ಭವ್ಯವಾದ ವೇದಿಕೆ ನಿರ್ಮಾಣಗೊಂಡಿದ್ದು, ಇಂದು (ಅ.31) ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದೇ ಹಣವನ್ನು ಖರ್ಚು ಮಾಡಿ ಕಲಾಭವನದ ಸಭಾಮಂಟಪದಲ್ಲಿ ಕಾರ್ಯಕ್ರಮ ರೂಪಿಸಬಹುದಾಗಿತ್ತು. ಈ ನೆಪದಲ್ಲಿಯಾದರೂ ಕಲಾಭವನದ ಬಾಗಿಲು ತೆರೆಯುತ್ತಿತ್ತು, ಭವನವು ಸ್ವಚ್ಛವಾಗುತ್ತಿತ್ತು. ಮತ್ತು ಅದಕ್ಕೆ ಮರುಜೀವ ಕೊಟ್ಟಂತಾಗುತ್ತಿತ್ತು. ಒಳಗಡೆ ಕಾರ್ಯಕ್ರಮ ಮಾಡಿದರೆ ಮಳೆ, ಬಿಸಿಲು, ಗಾಳಿಯಿಂದಾಗುತ್ತಿದ್ದ ಅಸ್ತವ್ಯಸ್ತತೆಯನ್ನು ತಡೆಯಬಹುದಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಈದಿನದೊಂದಿಗೆ ಮಾತನಾಡಿ, “ಈ ದೇಶದ ಪ್ರಸಿದ್ಧ ಸಂಗೀತಗಾರರಾದ ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು ಮತ್ತು ಧಾರವಾಡದ ಜನತೆ ಅವರನ್ನು ನಿರಂತರ ಸ್ಮರಣೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕಲಾಭವನ ನಿರ್ಮಾಣಗೊಂಡಿತು. ಆದರೆ, ಕಳೆದ ಇಪ್ಪತ್ತು ವರ್ಷಗಳಿಂದ ಕಲಾಭಾವನದಲ್ಲಿ ಯಾವುದೇ ರೀತಿಯ ಸಮಾರಂಭಗಳು ನಡೆದಿಲ್ಲ. ಒಂದು ಕಾಲದಲ್ಲಿ ಪ್ರತಿಯೊಂದು ಸಾಂಸ್ಕೃತಿಕ, ಸಂಗೀತ ಮತ್ತು ಸರ್ಕಾರಿ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ರಾಜಕೀಯ ಅಥವಾ ಹೋರಾಟಗಳು ಇದೇ ಕಲಾಭವನದ ಮೈದಾನದಲ್ಲಿ ನಡೆಯುತ್ತಿದ್ದವು. ಇಂದು ಭವನವು ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ಮೇಲ್ನೋಟಕ್ಕೆ ಮಲ್ಲಿಕಾರ್ಜುನ ಮನ್ಸೂರ ಅವರ ಹೆಸರು ಎದ್ದುಕಾಣುತ್ತದೆ. ಆದರೆ, ನೋಡಲೆಂದು ಒಳಗೆ ಹೋದರೆ ಸಂಕಟ ಅನುಭವಿಸಬೇಕಾಗುತ್ತದೆ. ಒಂದು ರೀತಿ ದೊಡ್ಡ ಗೋಡೌನ್ ಆಗಿ ಪರಿವರ್ತನೆಯಾಗಿದೆ. ಈ ಕುರಿತು ಅನೇಕ ಬಾರಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಿಪೇರಿ ನೆಪದಲ್ಲಿ ಮುಂದೂಡಲಾಗುತ್ತಿದೆ. ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದ ಕಲಾಭವನ ಇಂದು ಅನಾಥವಾಗಿರುವುದು ನೋವಿನ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿ ಬಿ ಐ ಈಳಿಗೇರ್ ಮಾತನಾಡಿ, “ಒಂದು ಕಾಲದಲ್ಲಿ ಧಾರವಾಡದಲ್ಲಿ ಬಹಳ ಒಳ್ಳೆಯ ರಂಗಮಂದಿರ ಎಂಬ ಹೆಗ್ಗಳಿಕೆಗೆ ಇದೇ ಕಲಾಭವನ ಪಾತ್ರವಾಗಿತ್ತು. ಈ ಹಿಂದೆ ಹೈಟೆಕ್ ನವೀಕರಣ ಮಾಡಲಾಗಿದೆ. ಇದರಿಂದ ರಂಗಾಸಕ್ತರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಪುನರುಜ್ಜೀವನಗೊಳಿಸಿದ್ದರೂ ಸಹಿತ, ಮಳೆಗಾಲದಲ್ಲಿ ಈ ಭವನವು ಸೋರುತ್ತದೆ. ಮಹಾನಗರ ಪಾಲಿಕೆಯವರು ಕನಿಷ್ಠ 11,000 ದಿಂದ ಗರಿಷ್ಠ 50,000 ಸಾವಿರದವರೆಗೆ ವಿವಿಧ ಹಂತಗಳಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ. ಧಾರವಾಡದ ಹೆಸರಾಂತ ಸಂಗೀತಗಾರರಾದ ಮಲ್ಲಿಕಾರ್ಜುನ್ ಮನ್ಸೂರ್ ಅವರ ಹೆಸರಿಟ್ಟು, ಅವರಿಗೆ ಮರ್ಯಾದೆ ಇಲ್ಲದಂತಾಗಿದೆ. ಏಕೆಂದರೆ ಕಡಪ ಮೈದಾನವು ಸಂಪೂರ್ಣವಾಗಿ ವ್ಯಾಪಾರೀಕರಣಗೊಂಡಿದೆ. ಅನೇಕ ಬೇಡದ ಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಅವರ ಹೆಸರು ತೆಗೆದು ಹಾಕಿಬಿಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಗ ಕಲಾವಿದ ಜೋಸೆಫ್ ಮಲ್ಲಾಡಿ ಮಾತನಾಡಿ, “ಕಲಾ ನಗರ, ಕಲಾಪೋಷಕ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲಾ ಹೆಸರಾದಂತಹ ಧಾರವಾಡದಲ್ಲಿ, ಕಲಾಭವನ ಎಂಬ ವೇದಿಕೆ ಇದ್ದು, ಆ ವೇದಿಕೆಯು ಸಾವಿರಾರು ಕಲಾವಿದರಿಗೆ ಭವಿಷ್ಯ ಕಟ್ಟಿಕೊಟ್ಟಿದೆ. ಆದರೆ ಇಂದಿಗೆ ಸಾಮಾನ್ಯ ಕಲಾವಿದನಿಗೂ ಕಲಾ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡುವಷ್ಟು ಯೋಗ್ಯವಾಗಿ ಇಲ್ಲದೇ ಇರುವ ಸ್ಥಿತಿಗೆ ಬಂದು ತಲುಪಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿದರು ಕೂಡ ಯಾವುದೇ ರೀತಿಯಲ್ಲಿ ಕಲಾವಿದರಿಗೆ ಅನುಕೂಲವಾಗಿಲ್ಲ. ಸರ್ಕಾರವು ಮಲ್ಲಿಕಾರ್ಜುನ್ ಮನ್ಸೂರ್ ಅವರ ಹೆಸರು ಕೊಟ್ಟು ಅವರ ಹೆಸರಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ. ವಸ್ತು ಪ್ರದರ್ಶನಗಳನ್ನು ಮಾಡುವ ಮೂಲಕ ವ್ಯಾಪಾರದ ಮಳಿಗೆಗಳು ನಡೆಯುತ್ತಿವೆಯೇ ಹೊರತು, ಈ ಭವನ ಕಲಾ ಪ್ರಕಾರದ ಮನರಂಜನೆಯ ಪ್ರದೇಶವಾಗಿ ಉಳಿದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಲಾಭವನವನ್ನು ಜೀರ್ಣೋದ್ಧಾರಗೊಳಿಸಿದರೆ, ಮಲ್ಲಿಕಾರ್ಜುನ ಮನ್ಸೂರರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಇಲ್ಲದಿದ್ದರೆ ಒಬ್ಬ ಮಹಾನ್ ಸಂಗೀತಗಾರನ ಹೆಸರು ನಿರ್ಲಕ್ಷ್ಯದಿಂದ, ಉದ್ದೇಶಪೂರ್ವಕವಾಗಿಯೇ ಅಳಿಸಿದಂತಾಗುತ್ತದೆ. ಕಲಾವಿದರಿಂದ ಒಂದು ಸುಸಜ್ಜಿತ ವೇದಿಕೆಯನ್ನು ಮರೆ ಮಾಚಿದಂತೆ ಆಗುತ್ತದೆ. ಈ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಕೂಡಾ ಗಮನಹರಿಸುತ್ತಿಲ್ಲ. ಮಹಾನಗರ ಪಾಲಿಕೆಯೂ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರಜ್ಞಾವಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಧಾರವಾಡ | ಜಿಲ್ಲಾ ಪೊಲೀಸ್ ಅಧಿಕಾರಿಗಳ ವಿಮರ್ಶನಾ ಸಭೆ
ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದ ಇಂದಿನ ಸ್ಥಿತಿ ಕಲಾ ನಗರಿಯ ನಿಜ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ. ಕಲೆಗಾಗಿ ನಿರ್ಮಿಸಿದ ಭವನ ಇಂದು ಕಸ, ನಿರ್ಲಕ್ಷ್ಯ ಮತ್ತು ವ್ಯಾಪಾರದ ನೆರಳಿನಲ್ಲಿ ಕಳೆದು ಹೋಗಿದೆ. ಸರ್ಕಾರ, ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿ ಕಲೆಯ ಕುರಿತ ಗೌರವದ ಕೊರತೆಯನ್ನು ತೋರಿಸುತ್ತದೆ. ಒಂದು ಕಾಲದಲ್ಲಿ ಸಾವಿರಾರು ಕಲಾವಿದರಿಗೆ ವೇದಿಕೆಯಾದ ಈ ಮಂದಿರ ಈಗ ಮೌನದ ಸ್ಮಾರಕವಾಗಿದೆ. ಮನ್ಸೂರರ ಹೆಸರು ಕೇವಲ ಫಲಕದಲ್ಲೇ ಉಳಿಯದಂತೆ, ಕಟ್ಟಡಕ್ಕೂ ಜೀವ ತುಂಬಿ, ನಿಜವಾದ ಕಲಾಭವನವಾಗಿ ರೂಪಾಂತರಗೊಳ್ಳಬೇಕಿದೆ. ಇದಕ್ಕೆ ಸಂಬಂಧಪಟ್ಟವರ ಇಚ್ಛಾಶಕ್ತಿ ಅಗತ್ಯವಿದೆ. ರಂಗಭೂಮಿ ಕಲೆ ಮಾಯವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಇರುವ ಕಲಾ ಸಾಕ್ಷಿಗಳಿಗೂ ರಕ್ಷಣೆ ಇಲ್ಲದಂತಾದರೆ ಕಲಾವಿದರ ಪಾಡೇನು? ಎನ್ನುವುದನ್ನು ಗಂಭೀರವಾಗಿ ಚಿಂತಿಸಬೇಕಿದೆ.





