ಔರಾದ್ ತಾಲೂಕಿನ ಜೀರ್ಗಾ(ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಮಕ್ಕಳು ಶಾಲಾವರಣದಲ್ಲಿರುವ ಮರದ ಕೆಳಗೆ ಕುಳಿತು ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ, ಬಿಸಿಯೂಟ, ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಉಚಿತವಾಗಿ ಜಾರಿಗೊಳಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ಶ್ರಮಿಸುತ್ತಿದೆ. ಆದರೆ, ಗಡಿ ತಾಲೂಕಿನ ಜೀರ್ಗಾ(ಬಿ) ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯವಿಲ್ಲದೇ ಪರದಾಡುತ್ತಿದ್ದಾರೆ.
1ರಿಂದ 7ನೇ ತರಗತಿವರೆಗೆ ಈ ಶಾಲೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಖಾಯಂ ಶಿಕ್ಷಕರಿದ್ದು, ಓರ್ವ ಅತಿಥಿ ಶಿಕ್ಷಕರಿದ್ದಾರೆ. ಒಟ್ಟು 4 ಕೊಠಡಿಗಳಿವೆ. ಆದರೆ, ಎಲ್ಲವೂ ಶಿಥಿಲಾವಸ್ಥೆಗೆ ತಲುಪಿದ ಕಾರಣ, ಕೆಲ ವಿದ್ಯಾರ್ಥಿಗಳು ಆಲದ ಮರದ ನೆರಳಿನಲ್ಲಿ ಕುಳಿತುಕೊಂಡು ಪಾಠ ಕಲಿಯುತ್ತಿದ್ದರೆ, ಇನ್ನು ಕೆಲವು ವಿದ್ಯಾರ್ಥಿಗಳು ಶಾಲೆಯ ವರಾಂಡದಲ್ಲಿ ಕುಳಿತು ಜೀವ ಭಯದಲ್ಲೇ ಪಾಠ ಕೇಳುವಂತಹ ಸ್ಥಿತಿ ಬಂದೊದಗಿದೆ.

ಅರ್ಧ ಶತಮಾನ ಹಳೆಯ ಕೊಠಡಿ
1975ರಲ್ಲಿ ನಿರ್ಮಿಸಿದ ತರಗತಿ ಕೋಣೆಯೊಂದು ಸಂಪೂರ್ಣವಾಗಿ ಹಾಳಾಗಿದೆ. ಯಾವ ಸಮಯದಲ್ಲಿ ಬಿದ್ದು ಹೋಗುತ್ತದೆ ಎಂಬುದನ್ನು ಕೂಡ ಊಹಿಸಲಾಗುತ್ತಿಲ್ಲ. ಆದರೆ, ಬೋಧನೆಗೆ ಕೋಣೆಗಳೇ ಇಲ್ಲದ ಕಾರಣ ಮೇಲ್ಛಾವಣಿ ಕಿತ್ತು ಬಂದ ಕೋಣೆಯ ವರಾಂಡ ಹಾಗೂ ಮರವೇ ಸದ್ಯ ಮಕ್ಕಳಿಗೆ ಆಶ್ರಯವಾಗಿದೆ.
ಮಳೆಗೆ ಸೋರುವ, ಅಲ್ಲಲ್ಲಿ ಬಿರುಕು ಬಿಟ್ಟ ಮೇಲ್ಛಾವಣಿ ಕೊಠಡಿಯೇ ಅಡುಗೆ ಕೋಣೆಯಾಗಿ ಪರಿವರ್ತನೆ ಮಾಡಿಕೊಂಡಿರುವ ಅಡುಗೆ ಸಹಾಯಕಿಯರು, ಯಾವಾಗ ತಮ್ಮ ತಲೆಯ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಬಿಸಿಯೂಟ ತಯಾರಿಸುತ್ತಾರೆ.

ʼಶಾಲೆಯ ಹಿಂಭಾಗದಲ್ಲಿ ಹೊಲ, ಮುಂದೆ ರಸ್ತೆ ಇದೆ. ಆದರೂ, ಶಾಲೆ ಈ ಮೊದಲಿನಿಂದಲೂ ಸುತ್ತುಗೋಡೆ(ಕಾಂಪೌಂಡ್) ಕಂಡೇ ಇಲ್ಲ. ಹೀಗೆ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ಮೂಲಭೂತ ಸೌಕರ್ಯದ ಕೊರತೆಯಿಂದ ಪೋಷಕರು ಮಕ್ಕಳನ್ನು ಸೇರಿಸಲು ಮುಂದಾಗದೇ; ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಹೀಗಾಗಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಗೆ 5 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಇನ್ನು 5ನೇ ತರಗತಿಯಲ್ಲಿ ಕೇವಲ 5 ಮಕ್ಕಳು ಓದುತ್ತಿದ್ದಾರೆ. ಮೂಲಭೂತ ಸೌಕರ್ಯವೇ ಇಲ್ಲದ ಈ ಶಾಲೆಯಲ್ಲಿ, ಪ್ರತಿವರ್ಷ ಮಕ್ಕಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದೆ.
“ಶಿಕ್ಷಕರು ಉತ್ತಮ ರೀತಿಯಲ್ಲಿ ಬೋಧಿಸುತ್ತಿದ್ದಾರೆ. ಹಾಗಾಗಿ, ನಮ್ಮ ಮಕ್ಕಳನ್ನು ಅದೇ ಶಾಲೆಗೆ ಕಳುಹಿಸುತ್ತಿದ್ದೇವೆ. ಆದರೆ, ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯವೇ ಇಲ್ಲದಂತಾಗಿದೆ” ಎನ್ನುತ್ತಾರೆ ಗ್ರಾಮದ ಪೋಷಕರು.
ಮಳೆ ಬಂದರೆ ಶಾಲೆಗೆ ರಜೆ
ಶಾಲೆಯ ಕೊಠಡಿಗಳು ಬೀಳುವ ಹಂತಕ್ಕೆ ತಲುಪಿದ ಕಾರಣ ಮಕ್ಕಳಿಗೆ ಕೊಠಡಿಯೊಳಗಡೆ ಪಾಠ ಮಾಡಲು ಶಿಕ್ಷಕರೇ ಆತಂಕ ಪಡುತ್ತಿದ್ದಾರೆ. ಹೀಗಾಗಿ, ಇಬ್ಬರು ಶಿಕ್ಷಕರು ಎರಡು ಕೊಠಡಿ ಹೊರಗಡೆ ಪಾಠ ಮಾಡಿದರೆ, ಇನ್ನೊಬ್ಬ ಶಿಕ್ಷಕರು ಬಯಲಿನಲ್ಲಿ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ. ಇನ್ನು ಹೆಚ್ಚು ಮಳೆ ಬಂದರೆ ಶಾಲೆಗೆ ರಜೆ ನೀಡುತ್ತಾರೆ.

ಶಾಲೆಯ ಹಳೆ ವಿದ್ಯಾರ್ಥಿ ಶಿವಾನಂದ ಕೋಟೆ ಅವರನ್ನು ಈ ಬಗ್ಗೆ ವಿಚಾರಿಸಿದಾಗ, “ನಾವು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೇವೆ. ಆವಾಗ ನೂರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳಾದ ಕೊಠಡಿ, ಆಟದ ಮೈದಾನ, ವಿದ್ಯುತ್ ಕೂಡ ಇಲ್ಲ. ಹೀಗಾಗಿ ಕ್ರಮೇಣ ದಾಖಲಾತಿ ಇಳಿಕೆಯಾಗಿ ಎರಡಂಕಿಗೆ ಬಂದಿದೆ. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರಿಗೆ ಕಾಂಪೌಂಡ್ ನಿರ್ಮಿಸುವಂತೆ ಕೇಳಿದರೆ ಜಾಗದ ಸಮಸ್ಯೆ ಎಂದಿದ್ದರು. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಕೋಟೆ ಈದಿನ.ಕಾಮ್ ಜೊತೆಗೆ ಮಾತನಾಡಿ, “ನಮ್ಮೂರಿನ ಶಾಲೆಯ ಪರಿಸ್ಥಿತಿಯ ಬಗ್ಗೆ ಶಿಕ್ಷಣ ಇಲಾಖೆ, ತಹಶೀಲ್ದಾರ್ ಸೇರಿದಂತೆ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದೇವೆ. ಆದರೆ, ಯಾರೊಬ್ಬರೂ ಇತ್ತ ಗಮನಹರಿಸಿಲ್ಲ. ಮಕ್ಕಳಿಗೆ ಕೋಣೆಗಳಿಲ್ಲದ ಕಾರಣ ಹೊರಗಡೆ ನೆಲದ ಮೇಲೆ ಕುಳಿತು ಪಾಠ ಕೇಳುತ್ತಾರೆ. ಇನ್ನು ಮಳೆಯಾದರೆ ಶಾಲೆಗೆ ರಜೆ ಕೊಡಲಾಗುತ್ತಿದೆ. ಪ್ರತಿನಿತ್ಯ ಆತಂಕದಲ್ಲೇ ಇರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಏನಾದರೂ ಅನಾಹುತ ಸಂಭವಿಸಿರೆ ಯಾರು ಹೊಣೆ? ಈಗಲಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ತೆರೆದು ಮಕ್ಕಳ ಭವಿಷ್ಯಕ್ಕಾಗಿ ಹೊಸ ಕೋಣೆಗಳು ನಿರ್ಮಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ಈದಿನ.ಕಾಮ್ ಜೊತೆಗೆ ಮಾತನಾಡಿ, “ಶಾಲೆಯ ಸ್ಥಿತಿಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಶಾಲೆಯ ನಾಲ್ಕು ಕೋಣೆ ನೆಲಸಮ ಮಾಡಿ ನಾಲ್ಕು ಹೊಸ ಕೋಣೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ. ಆಡಳಿತಾತ್ಮಕ ಅನುಮೋದನೆ ಪಡೆದು ಬಳಿಕ ಕಾಮಗಾರಿ ಪ್ರಾರಂಭವಾಗುತ್ತದೆ. ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಮಳೆಯಾದರೆ ಶಾಲೆಗೆ ರಜೆ ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದೇನೆ” ಎಂದು ಮಾಹಿತಿ ನೀಡಿದರು.


ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




