ಬಾಗೇಪಲ್ಲಿ:-ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಸವಾಲಾಗಿದ್ದು ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು ಎಂದು ಶಿಡ್ಲಘಟ್ಟ ನಿವೃತ್ತ ಯೋಧ ಎಸ್. ವಿ.ಅಯ್ಯರ್ ಕಿವಿಮಾತು ಹೇಳಿದರು.
ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಸರ್ಕಾರಿ ಪ್ರೌಢಶಾಲೆ ಘಂಟಂವಾರಿಪಲ್ಲಿಯಲ್ಲಿ ನಿವೃತ್ತ ಯೋಧ ಎಸ್. ವಿ.ಅಯ್ಯರ್ ತನ್ನ ದಿವಂಗತ ಧರ್ಮಪತ್ನಿ ಹೆಚ್.ಎಸ್ ಪ್ರಭಾವತಿ ರವರ ಜ್ಞಾಪಕಾರ್ಥವಾಗಿ ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷಾ ಲೇಖನಗಳಾದ ಪೆನ್ನು ಪುಸ್ತಕ ಹಾಗೂ ರೈಟಿಂಗ್ ಪ್ಯಾಡ್ ಗಳನ್ನು ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು.
ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ .ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲಗೊಳಿಸಲು ಈ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಧೈರ್ಯ ತುಂಬುವುದರ ಜೊತೆಗೆ,ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ಸ್ವಾಗತಾರ್ಹ. ಮುಖ್ಯ ಪರೀಕ್ಷೆಗಳು ಕೆಲವೇ ದಿನಗಳು ಇದ್ದು ವಿದ್ಯಾರ್ಥಿಗಳು ಒಂದು ನಿಮಿಷವನ್ನು ವ್ಯರ್ಥ ಮಾಡದೆ ವ್ಯಾಸಂಗದತ್ತ ಗಮನ ಹರಿಸಬೇಕು. ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದರು.
ವಿದ್ಯಾರ್ಥಿಗಳು ಯಾವುದೇ ಅನ್ಯ ವಿಷಯಗಳತ್ತ ಮನಸ್ಸು ಹರಿಯಬಿಡದೆ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣರಾದರೆ ಸಾಲದು. ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗಿ ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ ಯೋಧರ ತ್ಯಾಗ ಧೈರ್ಯ ಮತ್ತು ಶಿಸ್ತು ಪ್ರತಿಯೊಬ್ಬ ವಿಧ್ಯಾರ್ಥಿಯ ಬದುಕಿಗೆ ಅತ್ಯುತ್ತಮ ಪ್ರೇರಣೆಯಾಗಿದೆ ಯೋಧರ ಜೀವನ ಸುಲಭವಾದುದಲ್ಲ. ದೇಶದ ನಾಗರಿಕರು ಸುರಕ್ಷಿತವಾಗಿರಲಿ ಎಂಬ ಏಕೈಕ ಉದ್ದೇಶದಿಂದ ಅವರು ಗಡಿಯಲ್ಲಿ ನಿದ್ರೆ ಬಿಟ್ಟು ಕಾವಲು ಕಾಯುತ್ತಾರೆ. ನಾವು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲೆಂದು ಅವರು ತಮ್ಮ ಕುಟುಂಬದಿಂದ ದೂರವಿರುತ್ತಾರೆ. ಇಂತಹ ತ್ಯಾಗಮಯಿ ಬದುಕು ನಮಗೆಲ್ಲರಿಗೂ ಆದರ್ಶ ಎಂದು ಶ್ಲಾಘಿಸಿದರು.ವಿದ್ಯಾರ್ಥಿಗಳು ಅವರು ಕೊಟ್ಟಿರುವ ಲೇಖನಗಳನ್ನು ಸದುಪಯೋಗಪಡಿಸಿ ಕೊಂಡು ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸಿ ಕೀರ್ತಿ ತರಬೇಕು ಎಂದರು.
ಇದನ್ನು ಓದಿದ್ದೀರಾ…? ಸಹಾಯಕ ಪ್ರಾಧ್ಯಾಪಕ ರಮೇಶ್ ಕುಮಾರ್ ನಿಧನ; ಆಡಳಿತ ಮಂಡಳಿ ಸಂತಾಪ
ಈ ಸಂದರ್ಭದಲ್ಲಿ ಎಸ್.ವಿ.ಅಯ್ಯರ್ ಆಪ್ತರಾದ ರಮೇಶ್, ಶಿವಲಕ್ಷ್ಮೀ,ಬಾಲಕೃಷ್ಣ, ಶಿಕ್ಷಕರಾದ ಎನ್.ಎನ್.ಸಂಧ್ಯಾ,ಕೆ.ಬಿ.ಆಂಜನೇಯ ರೆಡ್ಡಿ, ಜಿ.ಲಕ್ಷ್ಮೀದೇವಮ್ಮ, ಜಿ.ವಿ.ಚಂದ್ರಶೇಖರ, ನಾರಾಯಣ ಸ್ವಾಮಿ, ಶರ್ಮಿಲ, ಹಾಗೂ ಸಿಬ್ಬಂದಿ ವರ್ಗ ಹೆಚ್.ಆರ್.ರಘುನಾಥ್, ಹಾಗೂ ಶಾಲಾ ಮಕ್ಕಳು ಹಾಜರಿದ್ದರು.





