ನೇಯ್ಗೆ ಉದ್ಯಮವನ್ನು ಉಳಿಸಿ ಮುಂದುವರೆಸುವ ನಿಟ್ಟಿನಲ್ಲಿ ಸೂರತ್ ಸೀರೆಗಳ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೇಕಾರರ ಸಂಘದಿಂದ ಇಂದು ದೊಡ್ಡಬಳ್ಳಾಪುರ ನಗರದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್‌ಗೆ ಕರೆ ನೀಡಿದ್ದರೂ, ನೇಕಾರರ ಸಂಘದ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಬಸ್‌ಗಳ ಸಂಚಾರ ಎಂದಿನಂತಿತ್ತು. ಸಾರ್ವಜನಿಕರು ಸಹ ಸಹಜವಾಗಿ ಓಡಾಟ ನಡೆಸಿದರು.
ಕೆಲವು ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರೆ, ಬಹುತೇಕ ಅಂಗಡಿಗಳು ಎಂದಿನಂತೆ ತೆರೆಯಲ್ಪಟ್ಟಿದ್ದವು. ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸಬಾರದೆಂದು ಪೊಲೀಸ್ ಇಲಾಖೆ ಸ್ಪಷ್ಟ ಸೂಚನೆ ನೀಡಿದ್ದು, ನೇಕಾರರ ಸಂಘವು ಅಂಗಡಿ ಮಾಲೀಕರಿಗೆ ಸ್ವಯಂ ಇಚ್ಛೆಯಿಂದ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿತು.
ಇದನ್ನೂ ಓದಿ: ದೊಡ್ಡಬಳ್ಳಾಪುರ | ಅನುಮತಿ ಇಲ್ಲದೆ ಹೊಸ ವರ್ಷದ ಪಾರ್ಟಿ; ರೆಸಾರ್ಟ್ ಮೇಲೆ ಪೊಲೀಸ್ ದಾಳಿ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಶೇಷವಾಗಿ ದೊಡ್ಡಬಳ್ಳಾಪುರ ನಗರ ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ನೇಯ್ಗೆ ಉದ್ಯಮ ಸಂಕಷ್ಟದಲ್ಲಿದ್ದು, ಸ್ಥಳೀಯ ನೇಕಾರರ ಬದುಕು ಉಳಿಸುವ ಉದ್ದೇಶದಿಂದಲೇ ಬಂದ್‌ಗೆ ಕರೆ ನೀಡಲಾಗಿದೆ ಎಂದು ನೇಕಾರರ ಸಂಘದ ಮುಖಂಡರು ತಿಳಿಸಿದರು.





