ದೊಡ್ಡಬಳ್ಳಾಪುರ ತಾಲೂಕು ಮಳೆಯಾಶ್ರಿತ ಪ್ರದೇಶ. ಇಲ್ಲಿನ ರೈತರು ಕಷ್ಟಪಟ್ಟು ಬೆಳೆದ ರಾಗಿ ಬೆಳೆ ಭಾರೀ ಮಳೆಗೆ ನೆಲಕಚ್ಚಿದೆ. ಇದರಿಂದ ರೈತರು ಕಂಗಾಲಾಗಿದ್ದರೆ, ರಾಜ್ಯದಲ್ಲಿ ಈ ಬಾರಿ ರಾಗಿ ಉತ್ಪಾದನೆ ಶೇ.20ರಷ್ಟು ಕಡಿಮೆಯಾಗಬಹುದು ಎಂಬ ಆತಂಕವೂ ಎದುರಾಗಿದೆ...
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಸಾಮಾನ್ಯವಾಗಿ ಬರಪೀಡಿತ ಪ್ರದೇಶವಾಗಿರುವುದರಿಂದ ರೈತರು ರಾಗಿ ಬೆಳೆಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಜತೆಗೆ ರಾಗಿ ಇಲ್ಲಿಯ ಪ್ರಮುಖ ಬೆಳೆಯಾಗಿದೆ. ಇಲ್ಲಿ ಸುಮಾರು 5,000 ಹೆಕ್ಟೇರ್ ಪ್ರದೇಶಗಳಲ್ಲಿ ರಾಗಿ ಬೆಳೆಯುವ ರೈತರು ಇದ್ದಾರೆ. ಆದರೆ ಅಕ್ಟೋಬರ್ 16ರಿಂದ ಸುರಿಯುತ್ತಿರುವ ಮಳೆಯು ಈ ಬೆಳೆಯನ್ನು ಸಂಪೂರ್ಣ ನಾಶಪಡಿಸಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನಾದ್ಯಂತ 2,500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ರಾಗಿ ಬೆಳೆ ಜಾಲಾವೃತವಾಗಿದ್ದು, ನೆಲಕಚ್ಚಿದೆ. ಇದರಿಂದ ರೈತರಿಗೆ ಸುಮಾರು ₹50 ಕೋಟಿಗೂ ಅಧಿಕ ನಷ್ಟವುಂಟಾಗಿದೆ ಎಂದು ಸ್ಥಳೀಯ ಕೃಷಿ ಇಲಾಖೆ ಅಂದಾಜಿಸಿದೆ.
ಈ ವಾರದಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 150 ಮಿಮೀಗೂ ಅಧಿಕ ಮಳೆಯಾಗಿದೆ. ಸಾಮಾನ್ಯದಿಂದ ಶೇ.200ರಷ್ಟು ಮಳೆ ಹೆಚ್ಚಾಗಿದೆ. ರಾಗಿ ಬೆಳೆಗೆ ಅಕ್ಟೋಬರ್-ನವೆಂಬರ್ ಹಸಿರು ಕಾಲ. ಈ ಸಮಯದಲ್ಲಿ ರಾಗಿ ಬೆಳೆಗೆ ನೀರಿನ ಅಗತ್ಯವಿಲ್ಲ. ಹೀಗಿರುವಾಗ ಮಳೆಯೊಂದಿಗೆ ಬಂದ ಗಾಳಿ ಸುರುಳಿ ಬೆಳೆಯನ್ನು ನೆಲಕಚ್ಚಿಸಿದೆ. ಸದ್ಯಕ್ಕೆ ಕಟಾವು ಮಾಡಲೂ ಸಾಧ್ಯವಿಲ್ಲ, ಉಳಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಸರ್ಕಾರ ರಾಗಿ ಖರೀದಿಗೆ ಬೆಂಬಲ ಹೆಚ್ಚಿಸಿರುವ ಕಾರಣ ಕಳೆದ ವರ್ಷಕ್ಕಿಂತ ಈ ಬಾರಿ ಬಿತ್ತನೆ ಪ್ರಮಾಣ ಅಧಿಕವಾಗಿದ್ದು, ತಾಲೂಕಿನಲ್ಲಿ 54,730 ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಈಗ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಹೊಲಗಳು ಹಾಸಿಗೆ ಹಾಸಿದ್ದು, ಸಾಲ ಮಾಡಿ ರಾಗಿ ಬೆಳೆ ಮಾಡಿದ್ದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸತತ ಮಳೆಯಿಂದ ರಾಗಿ, ಜೋಳ, ಮಕ್ಕೆಜೋಳ ಬೆಳೆಗಳು ಹಾನಿಗೊಳಗಾಗಿದ್ದು, ರಾಗಿ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದಾಗಿ ತಾಲೂಕಿನ ಸುಮಾರು 10,000 ರೈತ ಕುಟುಂಬಗಳು ರಾಗಿ ಬೆಳೆಹಾನಿ ನಷ್ಟ ಅನುಭವಿಸುತ್ತಿವೆ. ಇದು ಕೇವಲ ದೊಡ್ಡಬಳ್ಳಾಪುರಕ್ಕೆ ಸೀಮಿತವಾಗದೆ ಬೆಂಗಳೂರು ಗ್ರಾಮಾಂತರದ ಇತರ ಭಾಗಗಳಲ್ಲೂ ಹಾನಿ ಸಂಭವಿಸಿದೆ.
ತಾಲೂಕಿನ ಹೊನ್ನಾವರದ ರೈತ ಎಸ್. ಸ್ವಾಮಿಯವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಗಿ ಬೆಳೆ ಪ್ರಸ್ತುತ ಕಾಳು ಕಟ್ಟುತ್ತಿರುವ ಹಂತದಲ್ಲಿದೆ. ಕಳೆದೆ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಾಗಿ ಬೆಳೆಗೆ ತೇವಾಂಶ ಹಾಗೂ ತೆನೆಯ ತೂಕ ಹೆಚ್ಚಾಗಿರುವ ಕಾರಣ ಬೆಳೆ ನೆಲಕ್ಕುರುಳಿದೆ” ಎಂದು ಹೇಳಿದರು.
“ಇನ್ನೂ ಎರಡು ದಿನ ಸೈಕ್ಲೋನ್ ಇರುವುದಾಗಿ ಹೇಳುತ್ತಿದ್ದಾರೆ. ಹೀಗೇ ಆದರೆ ರೈತರಿಗೆ ಬೆಳೆ ನಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ ಭೀತಿ ಎದುರಾಗಿದೆ. ಹೊಲ ಹಸನು ಮಾಡಲು ಹಾಕಿರುವ ಬಂಡವಾಳ ಕೈಗೆ ಬರುತ್ತದೋ ಇಲ್ಲವೋ ಎನ್ನುವ ಅತಂಕ ಕಾಡಲಾರಂಭಿಸಿದೆ. ರಾಗಿ ನೆಲಕಚ್ಚಿದರೆ ಹುಲ್ಲು ಮಣ್ಣಾಗಿ ಗರಿಗಳೆಲ್ಲ ಕೊಳೆತು ಹೋಗುತ್ತದೆ. ಇದರಿಂದ ಜಾನುವಾರುಗಳಿಗೆ ಮೇವು ಸಿಗದಂತಾಗುತ್ತದೆ. ಆಮೇಲೆ ರಾಗಿಯ ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ನಮ್ಮ 2 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆ ಹಾನಿಯಾಗಿದೆ. ನಾನು ಮಹಿಳಾ ಸಬಲೀಕರಣ ಯೋಜನೆಯಡಿ ಸಾಲ ಪಡೆದು, ಬಿತ್ತನೆ ಬೀಜ-ಗೊಬ್ಬರ ಖರೀದಿಸಿದ್ದೆ. ರಾಗಿ ಮಾರಾಟ ಮಾಡಿ ಸಾಲ ತೀರಿಸಬೇಕಾಗಿತ್ತು. ಈಗ ಸಾಲ ಮರುಪಾವತಿಸಲು ಬೆಳೆ ಹಾನಿಯಾಗಿದೆ. ಮಕ್ಕಳ ಶಾಲೆಗೆ ಶುಲ್ಕ ಕಟ್ಟಲೂ ಕೂಡ ಸಾಧ್ಯವಾಗುತ್ತಿಲ್ಲ” ಎಂಬುದು ಯುವ ರೈತ ಮಹಿಳೆ ಸುಮಿತ್ರಾ ಅವರ ನೋವಿನ ಮಾತಾಗಿದೆ.
“ನಾವು ಎರಡು ಎಕೆರೆಯಲ್ಲಿ ರಾಗಿ ಬೆಳೆ ಬೆಳೆದಿದ್ದೇವೆ. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಬೆಳೆದು ನಿಂತಿದ್ದ ರಾಗಿ ಬೆಳೆ ನೆಲಕಚ್ಚಿದೆ. ಇದರಿಂದ ಅಪಾರ ಪ್ರಮಾಣದ ಫಸಲು ನಷ್ಟದ ಹಾದಿ ಹಿಡಿದಿದೆ. ಈ ಬಾರಿ ಉತ್ತಮವಾದ ಫಸಲು ಬಂದಿತ್ತು. ಜೀವನ ನಿರ್ವಹಣೆಗೆ ಸಾಕಾಗಲಿದೆ ಎಂಬ ಆಸೆ ಇಟ್ಟುಕೊಂಡಿದ್ದೆವು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ನಮಗೆ ಇದೀಗ ಹವಾಮಾನ ವೈಪರೀತ್ಯ ನಿರಾಸೆ ಮೂಡಿಸಿದೆ. ಬೆಳೆಯನ್ನು ಉಳಿಸಿಕೊಳ್ಳಲು ನಾವು ಹರಸಾಹಸಪಡುತ್ತಿದ್ದೇವೆ. ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ” ಎಂದು ರೈತ ರಮೇಶ್ ಬಾಬು ಈ ದಿನ.ಕಾಮ್ ಜತೆಗೆ ಅಲವತ್ತುಕೊಂಡರು.
ಸ್ಥಳೀಯ ನಿವಾಸಿ ರಾಜು ಸಣ್ಣಕ್ಕಿ ಮಾತನಾಡಿ, “ಜಡಿ ಮಳೆ ಸುರಿಯುತ್ತಿರುವುದರಿಂದ ನೀರು ಹರಿಯುವುದಿಲ್ಲ. ಭೂಮಿಯಲ್ಲೇ ಇಂಗುವುದರಿಂದ ತೇವಾಂಶ ಹೆಚ್ಚಾಗಿದೆ. ತೆನೆಗಳ ಭಾರಕ್ಕೆ ರಾಗಿ ನೆಲಕಚ್ಚಿದೆ. ರಾಗಿ ತೆನೆಗಳು ಮಣ್ಣಿನೊಳಗೆ ಸೇರಿರುವುದರಿಂದ ಮೊಳಕೆ ಬರುತ್ತಿವೆ. ಇದೇ ರೀತಿ ವಾತಾವರಣದೊಂದಿಗೆ ಮಳೆ ಮುಂದುವರೆದರೆ ಅಪಾರ ಪ್ರಮಾಣದ ರಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ” ಎಂದು ಹೇಳಿದರು.
ರೈತ ಗಂಗಪ್ಪ ಮಾತನಾಡಿ, “ರಾಗಿ ನಮ್ಮ ಆಹಾರ ಬೆಳೆ, ಆದಾಯ ಎಲ್ಲವೂ ಆಗಿದೆ. ಇದು ನಾಶವಾದರೆ, ನಾವು ಬದುಕಲು ಏನು ಮಾಡೋದು? ಸರ್ಕಾರದ ನೆರವು ಬರಬೇಕು. ಆದರೆ ಇದು ಕಾಗದದ ಮೇಲಷ್ಟೇ ಉಳಿಯುತ್ತದೆ. ರೈತರ ಕೈ ಸೇರುವುದಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

“ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ರಾಗಿ ನೆಲಕಚ್ಚಿರುವ ಕಾರಣ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟಕ್ಕೆ ಒಳಗಾಗುವ ರೈತರಿಗೆ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
“ಈಗಾಗಲೇ ಅನೇಕ ರೈತರು ಫಸಲ್ ಬಿಮಾ ಯೋಜನೆಯಡಿ ಹಣಪಾವತಿ ಮಾಡಿದ್ದಾರೆ. ಹಿಂದಿನ ವರ್ಷಗಳಂತೆ ವಿಳಂಬವಾಗದೇ ಶೀಘ್ರ ನೆರವು ನೀಡಬೇಕು. ಕೇವಲ ವಿಮೆ ಹಣ ಪಡೆಯಲು ಸೀಮಿತವಾಗದೆ, ಕೃಷಿ ಇಲಾಖೆ ಅಧಿಕಾರಿಗಳು ವಿಮಾ ಸಂಸ್ಥೆಯಿಂದ ಬೆಳೆ ಪರಿಹಾರ ಒದಗಿಸುವ ಕೆಲಸವನ್ನು ಮಾಡಬೇಕು. ಬಿತ್ತನೆ ಬೀಜಕ್ಕೆ ಸಬ್ಸಿಡಿ, ಕಡಿಮೆ ಬಡ್ಡಿಯ ಸಾಲ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಬೇಕು” ಎಂದು ರೈತ ಸಂಘದ ನಾಯಕರು ಆಗ್ರಹಿಸಿದ್ದಾರೆ.
12.82 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, ರೈನ್-ಫೆಡ್(ಮಳೆಹಾನಿ) ಪ್ರದೇಶಗಳಿಗೆ ಹೆಕ್ಟೇರ್‌ಗೆ ₹17,000 ಸಬ್ಸಿಡಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿದೆ. ಅದರಂತೆ ದೊಡ್ಡಬಳ್ಳಾಪುರದಲ್ಲಿಯೂ ಕೃಷಿ ಇಲಾಖೆ ಅಧಿಕಾರಿಗಳಿಂದ ಮೌಲ್ಯಮಾಪನ ಶುರುವಾಗಿದೆ.
“ನಾವು ತಾಲೂಕು ವ್ಯಾಪ್ತಿ ಸಮೀಕ್ಷೆ ನಡೆಸುತ್ತಿದ್ದೇವೆ. ಪ್ರಧಾನಿ ಫಸಲ್ ಬಿಮಾ ಯೋಜನೆ(PMFBY) ಅಡಿಯಲ್ಲಿ ವಿಮೆ ಪಾವತಿ ಚುರುಕುಗೊಳಿಸುತ್ತೇವೆ. ಆದರೆ ಮಳೆ ಇನ್ನೂ ಸುರಿಯುತ್ತಿರುವುದರಿಂದ ಹೆಚ್ಚಿನ ನಷ್ಟ ಉಂಟಾಗುವ ಸಾಧ್ಯತೆ ಇದೆ” ಎಂಬುದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಅಧಿಕಾರಿ ಡಾ. ರಾಜೇಶ್ ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿದ್ದೀರಾ? ಅಫಜಲಪುರ | ಕಬ್ಬು ಕಟ್ಟಿಂಗ್, ಎಫ್‌ಆರ್‌ಪಿ, ಸಾಗಾಣಿಕೆ ವೆಚ್ಚ ನಿಗದಿಗೆ ರೈತರ ಆಗ್ರಹ: ಅ.23ರಂದು ರಸ್ತೆತಡೆ ಚಳವಳಿ
“ರಾಜ್ಯದಲ್ಲಿ ಈ ಬಾರಿ ರಾಗಿ ಉತ್ಪಾದನೆ ಶೇ.20ರಷ್ಟು ಕಡಿಮೆಯಾಗಬಹುದು. ದೊಡ್ಡಬಳ್ಳಾಪುರದಂತಹ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯಗಳ ಕೊರತೆ, ಜಮೀನುಗಳ ಒಡೆತನ ಮತ್ತು ಅನಿರೀಕ್ಷಿತ ಮಳೆಯಿಂದ ರೈತರು ಹೈರಾಣಾಗುತ್ತಿದ್ದಾರೆ. ರಾಗಿ ಬೆಳೆಹಾನಿಯಿಂದ ಆಹಾರದ ಕೊರತೆ ಉಂಟಾಗಬಹುದು” ಎಂದು ಕೃಷಿ ವಿಜ್ಞಾನಿ ಡಾ. ಲಕ್ಷ್ಮೀನಾರಾಯಣ ಹೇಳಿದರು.
ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾದ ಭಾರೀ ಪ್ರವಾಹದಿಂದ ಸಂಪೂರ್ಣ ಬೆಳೆಗಳು ನೀರಿನಲ್ಲಿ ಮುಳುಗಿ ರೈತರು ಕಂಗಾಲಾಗುವಂತೆ ಮಾಡಿದೆ. ಇದೀಗ ಸುರಿಯುತ್ತಿರುವ ಮಳೆಯಿಂದ ರಾಗಿ ಬೆಳೆಗಾರರೂ ನಷ್ಟ ಅನುಭವಿಸುವಂತಾಗಿದೆ.
ಅಕ್ಟೋಬರ್ 26ರವರೆಗೆ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ರೈತರನ್ನು ಇನ್ನಷ್ಟು ಆತಂಕಕ್ಕೆ ಈಡುಮಾಡಿದೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ರೈತರಲ್ಲಿ ಆರ್ಥಿಕ ನಷ್ಟ ಉಂಟಾಗಿದ್ದು, ಸಂಕಷ್ಟವನ್ನು ಎದುರಿಸುತ್ತಿರುವ ರೈತರು ಆತಂಕಕ್ಕೊಳಗಾಗಿದ್ದಾರೆ.





