ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ 2025-26 ನೇ ಸಾಲಿನ ಬಿಕ್ಕಟ್ಟನ್ನು ಶಾಸನ ಬದ್ಧ ಸರ್ಕಾರದ ಹಂತದಲ್ಲೇ ಯುಜಿಸಿ-ನಾನ್ಯು ಯುಜಿಸಿ ಎಂಬ ತಾರತಮ್ಯ ಮಾಡದೇ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತರಿಂದ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲದಿಂದ 11 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದರಲ್ಲಿ, 5,623 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರಿದ್ದು, ಉಳಿದ 5,353 ಅತಿಥಿ ಉಪನ್ಯಾಸಕರು ನಾನ್ ಯುಜಿಸಿಯವರಾಗಿರುತ್ತಾರೆ. ಅದೇ ರೀತಿ ಸಾವಿರಾರು ಅತಿಥಿ ಉಪನ್ಯಾಸಕರು ಎಂ. ಫೀಲ್ ಪದವಿ ಪಡೆದವರು ಸಹ ಇದ್ದಾರೆ. ಇವರೆಲ್ಲರೂ ಬೋಧನಾ ಅನುಭವ, ಬೋಧನಾ ಕೌಶಲ್ಯ ಹೊಂದಿ ಇದುವರೆಗೂ ಗುಣಮಟ್ಟದ ಪಾಠ ಪ್ರವಚನ ಮಾಡುತ್ತಾ ಲಕ್ಷಾಂತರ ವಿದ್ಯಾರ್ಥಿಗಳ ದಾಳಿಗೆ ದಾರಿ ದೀಪವಾಗಿದ್ದಾರೆ.. ನಮ್ಮಿಂದ ಬೋಧನಾ ಲಾಭ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಅನೇಕ ಉನ್ನತ ಹುದ್ದೆಗಳಲ್ಲಿ ಅವಕಾಶಗಳನ್ನು ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ.
ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ. ಇದೂವರೆಗೂ ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಖಾಯಂ ಅಧ್ಯಾಪಕರುಗಳಿಗೆ ನೀಡಿರುವ ಯಾವುದೇ ರಿತೀಯ ಸವಲತ್ತುಗಳನ್ನು ಪಡೆಯದೇ,ತಾತ್ಕಾಲಿಕ ನೌಕರರಾಗಿಯೇ, ಯುಜಿಸಿ ಶಿಫಾರಸ್ಸು ಮಾಡಿರುವ ವೇತನವು ಇಲ್ಲದೇ, ಕರ್ನಾಟಕ ಸರ್ಕಾರ ನಿಗದಿ ಪಡಿಸಿರುವ ಶೈಕ್ಷಣಿಕ ವರ್ಷಗಳಲ್ಲಿ 11 ತಿಂಗಳಿಗೆ ಮಾತ್ರ (ಈ ಹಿಂದಿನ ಸರ್ಕಾರದ ಅವಧಿಯಲ್ಲಿ 8 ರಿಂದ 9 ತಿಂಗಳುಗಳಿಗೆ ಮಾತ್ರ) ಕನಿಷ್ಠ ಗೌರವಧನ ಪಡೆದು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ತಾತ್ಕಾಲಿಕ ವ್ಯವಸ್ಥೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ.
ಜೊತೆಗೆ ಈಗಾಗಲೇ ಘನ ನ್ಯಾಯಲಯಗಳು ಒಬ್ಬ ತಾತ್ಕಾಲಿಕ ನೌಕರನ ಸ್ಥಾನವನ್ನು ಮತ್ತೊಬ್ಬ ತಾತ್ಕಾಲಿಕ ನೌಕರನನ್ನು ಸ್ಥಳಾಂತರಿಸಲು ಅವಕಾಶ ಇಲ್ಲ ಎಂದು ತೀರ್ಪು ನೀಡಿದೆ. ಇದರ ಆಧಾರದ ಮೇಲೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವೆಯಿಂದ ತೆರವು ಮಾಡದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಜೊತೆಗೆ ಕಾಲೇಜು ಶಿಕ್ಷಣ ಇಲಾಖೆ ಯಾವುದೇ ಅತಿಥಿ ಉಪನ್ಯಾಸಕರನ್ನು ಖಾಯಂ ನೇಮಕಾತಿ ಅಥವಾ ದರ್ಗಾವಣೆ, ನಿಯೋಜನೆ ಸಂದರ್ಭದಲ್ಲಿ ಮತ್ತು ಕಾರ್ಯಭಾರದ ಕೊರತೆ ಆದ ಸಂದರ್ಭದಲ್ಲಿ ಮಾತ್ರ ಅತಿಥಿ ಉಪನ್ಯಾಸಕರ ಸ್ಥಾನ ತೆರವುಗೊಳಿಸಬಹುದು ಎಂದು ಪ್ರತಿ ನೇಮಕಾತಿ ಸುತ್ತೋಲೆಗಳಲ್ಲಿ ಪ್ರಸ್ತಾಪ ಮಾಡಿದೆ.
ರಾಜ್ಯದ ಶೇ.70% ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆಯನ್ನು ಅವಲಂಭಿಸಿವೆ. ಕಳೆದ ಒಂದು ತಿಂಗಳಿಂದ ಸರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಜೊತೆಗೆ ಇದೇ ವೃತ್ತಿಯನ್ನು ಹಲವು ದಶಕಗಳಿಂದ ಪಾಠ ಪ್ರವಚನ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಈಗ ಅತಂತ್ರವಾಗಿದೆ. ಕಳೆದ ಒಂದೂವರೆ ತಿಂಗಳಿಂದ ಗೌರವಧನವೂ ಇಲ್ಲದೆ ನಮ್ಮಗಳ ಬದುಕು ಮತ್ತು ನಮ್ಮಗಳನ್ನೇ ನಂಬಿರುವ ಕುಟುಂಬಗಳ ಸ್ಥಿತಿಯು ಹೇಳತೀರದಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಬದ್ಧ ಅಧಿಕಾರವಿರುವುದು ಶಾಸಕಾಂಗಕ್ಕೆ, ಶಾಸಕಾಂಗವೇ ಕಾನೂನಿನ ನಿರ್ಮಾಪಕನಾಗಿರುವುದರಿಂದ ಹತ್ತಾರು ದಶಕಗಳಿಂದ ನಮ್ಮಿಂದ ತಾತ್ಕಾಲಿಕ ಸೇವೆ ಪಡೆದ ಸರ್ಕಾರ ಮತ್ತು ಇಲಾಖೆ ನಮ್ಮನ್ನು ತಾತ್ಕಾಲಿಕ ಸೇವೆಯಲ್ಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳಾದ ಸಿದರಾಮಯ್ಯನವರ ಸರ್ಕಾರವೇ ತೀರ್ಮಾನ ಕೈಗೊಳ್ಳಲು ಆಗ್ರಹ ವಿನಂತಿಸುತ್ತಿದ್ದೇವೆ ಎಂದರು.
2025-26 ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಯ ಬಿಕ್ಕಟ್ಟನ್ನು ಶಾಸನ ಬದ್ಧ ಸರ್ಕಾರದ ಹಂತದಲ್ಲೇ ಯಾವುದೇ ತಾರತಮ್ಯ ಮಾಡದ ನಿರ್ಣಯ ಕೈಗೊಳ್ಳುವಂತೆ ರಾಜ್ಯಾದ್ಯಂತ ವಿವಿಧ ಜನಪರ ಸಂಘಟನೆ ಮತ್ತು ಹೋರಾಟಗಾರರ ಬೆಂಬಲದೊಂದಿಗೆ ಧರಣಿ ಸತ್ಯಾಗ್ರಹ ನಡೆಸುವುದರ ಮೂಲಕ ತಮ್ಮಲ್ಲಿ ಮನವಿಾಡಿಕೊಳ್ಳುತ್ತಿದ್ದೇವೆ ಎಂದು ಧರಣಿ ನಿರತರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕಿರುರಂಗಮಂದಿರದಲ್ಲಿ ‘ಕರ್ವಾಲೋ-50 : ತೇಜಸ್ವಿ-ಪರಿಸರ’ ವಿಶೇಷ ಕಾರ್ಯಕ್ರಮ
ಪ್ರತಿಭಟನೆಯಲ್ಲಿ ಸಮನ್ವಯ ಸಮಿತಿಯ ಮಹಿಳಾ ಕಾರ್ಯದರ್ಶಿ ಹರ್ಷಿತ, ಜೆ. ನಾಗರಾಜ್, ಎನ್. ಶರತ್, ಆರ್. ಮಂಜುನಾಥ, ಎಸ್. ಮಹಾದೇವ ಸ್ವಾಮಿ, ನಾಗಮಣಿ, ವಂದನಾ, ನಾಗೇಗೌಡ, ಎಂ. ಲೀನಾ ಸೇರಿದಂತೆ ಇನ್ನಿತರರು ಇದ್ದರು.
ಬೇಡಿಕೆಗಳು:
- ಹತ್ತಾರು ವರ್ಷಗಳಿಂದ ನಿರಂತರ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದ ಅತಿಥಿ ಉಪನ್ಯಾಸಕನನ್ನು ಸೇವ ಹಿರಿತನ ಆಧಾರದಲ್ಲಿ ಪರಿಗಣಿಸಬೇಕು.
- ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ-ನಾನ್ ಯುಜಿಸಿ ಎಂಬ ತಾರತಮ್ಯ ಮಾಡದೇ ಶಾಸನ ಬದ್ಧ ಸರ್ಕಾರದ ಹಂತದಲ್ಲೇ ಮಾನವೀಯ ದೃಷ್ಠಿಯಿಂದ ತೀರ್ಮಾನ ಕೈಗೊಳ್ಳಬೇಕು.





