ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕಿನ ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶದ ಬೂಕನಕೆರೆ-ಡಿಂಕಾ-ಅಶೋಕನ ಗರ ಮಾರ್ಗದ ಮುಖ್ಯ ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿರುವಾಗ, ರಾಗಿಯ ಮೇಲೆ ಕಾರು ಚಲಿಸಿ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.
ತಾಲ್ಲೂಕಿನ ಪಿ.ಬಿ. ಮಂಚನಹಳ್ಳಿ ಗ್ರಾಮದ ನಿವಾಸಿ ಪ್ರಜ್ವಲ್(19) ಮೃತ ಯುವಕ. ಕಾರಿನಲ್ಲಿದ್ದ ಪ್ರಜ್ವಲ್ ಸಂಬಂಧಿ ಕಾವ್ಯ(26) ಎಂಬುವವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಒಂದು ತಿಂಗಳಿನಿoದಲೂ ರಸ್ತೆಯಲ್ಲಿ ರೈತರು ನಿತ್ಯ ರಾಗಿ ಹುಲ್ಲು ಹಾಕಿ ಒಕ್ಕಣೆ ಮಾಡುತ್ತಿದ್ದರು. ಈ ಹಿಂದೆಯೂ ಹಲವು ಅಪಘಾತಗಳು ನಡೆದಿದ್ದರೂ ಸಹ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಇಂತಹ ದುರ್ಘಟನೆ ನಡೆದಿದೆ. ರಾಗಿ ಒಕ್ಕಣೆ ಮೇಲೆ ಕಾರನ್ನು ಓಡಿಸಿದ್ದರಿಂದ ಚಾಲಕನ ನಿಯಣಂತ್ರಣ ತಪ್ಪಿ ಮಗುಚಿದೆ. ಪರಿಣಾಮ ಚಾಲಕ ಪ್ರಜ್ವಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಆನಂದೇಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿ ರಾಗಿ ಒಕ್ಕಣೆ ಮಾಡುತ್ತಿದ್ದ ರೈತರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ: ಬಲೂನ್ ವ್ಯಾಪಾರಿ ಸಾವು: ಹಲವರು ಗಂಭೀರ
ರಸ್ತೆಯಲ್ಲಿ ಒಕ್ಕಣೆ ಮಾಡಿದರೆ ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ, ತಕ್ಷಣವೇ ಒಕ್ಕಣೆ ಮಾಡುವ ರೈತರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.





