ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದ ಅಂತಾರಾಜ್ಯ ಮಾದಕ ವಸ್ತು ತಯಾರಿಕಾ ಜಾಲವೊಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೂರಾರು ಕೋಟಿ ಮೌಲ್ಯದ ಮೆಫೆಡ್ರೋನ್ (MDMA) ವಶಪಡಿಸಿಕೊಳ್ಳಲಾಗಿದ್ದು, ಇದು ಕರ್ನಾಟಕದ ಇತಿಹಾಸದಲ್ಲೇ ದಾಖಲಾಗಿರುವ ಅತಿದೊಡ್ಡ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ. ಮೈಸೂರು ಪೊಲೀಸ್ ಇಲಾಖೆಯ ಸಕ್ರಿಯ ಸಹಕಾರದಿಂದ ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿರುವ ಈ ಡ್ರಗ್ ಘಟಕ, ರಾಜ್ಯ ಮಟ್ಟದಲ್ಲಷ್ಟೇ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಬಂಧಿಯಾದ ಡ್ರಗ್ ಪೆಡ್ಲರ್ ಸಲೀಂ ಇಮ್ತಿಯಾಜ್ ಶೇಖ್ ನೀಡಿದ ಮಾಹಿತಿಯ ಆಧಾರದ ಮೇಲೆ ಮೈಸೂರಿನ ರಿಂಗ್ ರಸ್ತೆಯ ಕಟ್ಟಡದ ಮುಂಭಾಗ ಹೋಟೆಲ್ ಮತ್ತು ಗ್ಯಾರೇಜ್‌ನಂತೆ ಕಾಣುತ್ತಿದ್ದ ಪ್ರದೇಶವನ್ನು ಜು.26ರಂದು ಶೋಧಿಸಿದಾಗ, ಮೆಫೆಡ್ರೋನ್ ಉತ್ಪಾದನಾ ಘಟಕ ಪತ್ತೆಯಾಗಿದೆ. ಮೈಸೂರಿನಲ್ಲಿ ಡ್ರಗ್ಸ್ ತಯಾರಿಸಿ ಮಹಾರಾಷ್ಟ್ರ, ಗುಜರಾತ್ ಸೇರಿ ದೇಶದ ವಿವಿಧ ಭಾಗಗಳು, ವಿದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಆಧಾರದ ಮೇಲೆ ಪ್ರಕರಣ ಸಂಬಂಧ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

“ಕಳೆದ ಏಪ್ರಿಲ್‌ನಲ್ಲಿ ಪಶ್ಚಿಮ ಮುಂಬೈನ ಸಾಕಿನಾಕಾದಲ್ಲಿ ಬಾಂದ್ರಾ ರಿಕ್ಲಮೇಶನ್‌ನ ಸಲೀಂ ಇಮ್ತಿಯಾಜ್ ಶೇಖ್ ಅಲಿಯಾಸ್ ಸಲೀಂ ಲ್ಯಾಂಡ್ಗಾ (45) ಎಂಬಾತ, 52 ಗ್ರಾಂ ಮೆಫೆಡ್ರೋನ್‌ನೊಂದಿಗೆ ಸಿಕ್ಕಿಬಿದ್ದಿದ್ದ. ಆತನ ವಿಚಾರಣೆಯಿಂದ ತನಿಖೆ ಮೊದಲ್ಗೊಂಡಿತ್ತು. ವಿಚಾರಣೆ ವೇಳೆ ಪೊಲೀಸರು ಇನ್ನೂ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚಿದ್ದರು. ಈ ಜಾಲ ಭೇದಿಸುತ್ತಾ ಸಾಗಿದಾಗ ಮೈಸೂರು ಹೊರವಲಯದ ಕಾರ್ಖಾನೆಯೊಂದರಲ್ಲಿ ಈ ಅತಿದೊಡ್ಡ ಮಾದಕ ವಸ್ತು ತಯಾರಿಕಾ ಘಟಕವೊಂದು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂತು. ಅಲ್ಲಿ ಸುಮಾರು 187 ಕೆಜಿ ಮೆಫೆಡ್ರೋನ್ ಪತ್ತೆಯಾಗಿದೆ. ಈ ಡ್ರಗ್ಸ್‌ನ ಮೌಲ್ಯ ಅಂದಾಜು ₹382 ಕೋಟಿ. ಇದರಿಂದ ಒಟ್ಟಾರೆ 192 ಕೆಜಿ ಡ್ರಗ್ಸ್ ಪತ್ತೆಯಾಗಿದ್ದು, ₹390 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ಪತ್ತೆಯಾಗಿತ್ತು” ಎಂದು ಮುಂಬೈ ಉಪ ಪೊಲೀಸ್ ಆಯುಕ್ತ ದತ್ತಾ ನಲವಾಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಡ್ರಗ್ ತಯಾರಿಕಾ ಘಟಕ ಪತ್ತೆಯಾದ ಬೆನ್ನಲ್ಲೇ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಕಾರ್ಯೋನ್ಮುಖರಾಗಿದ್ದು, ಸಂಪೂರ್ಣ ಮಾದಕ ವಸ್ತು ಜಾಲ ಪತ್ತೆಗಾಗಿ ಏಳು ವಿಶೇಷ ತಂಡಗಳನ್ನು ರಚಿಸಿದ್ದರು. ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ತಂಡ, ಮಂಡಿ ಮತ್ತು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಪುಲಕೇಶಿ ರಸ್ತೆ, ಮೀನಾ ಬಜಾರ್, ಮಹದೇವಪುರ ರಸ್ತೆ ಸೇರಿದಂತೆ ಬಡಾವಣೆ ವ್ಯಾಪ್ತಿಯ ಉದ್ಯಾನಗಳಲ್ಲಿ ರಾತ್ರಿ ಗಸ್ತು ನಡೆಸಿ 27 ಮಂದಿ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಿದ್ದು, ಅವರಿಂದ ಸುಮಾರು 5.7 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.
ಡ್ರಗ್ ತಯಾರಿಕಾ ಘಟಕವಿದ್ದ ಜಾಗವನ್ನು 20 ದಿನಗಳ ಹಿಂದೆ ಬಾಡಿಗೆ ಪಡೆದಿದ್ದ ಅಜ್ಮಲ್ ಎಂಬಾತ ಅಲ್ಲಿ ಗ್ಯಾರೇಜ್ ನಿರ್ಮಾಣ ಮಾಡಿದ್ದ. ಬಳಿಕ ಜಾಗವನ್ನು ಎಂಡಿಎಂಎ ತಯಾರಿಸುತ್ತಿದ್ದ ಆರೋಪಿಗಳಿಗೆ ತಿಂಗಳಿಗೆ 2 ಲಕ್ಷ ಮೀರದಂತೆ ಬಾಡಿಗೆಗೆ ನೀಡುತ್ತಿದ್ದ ಎನ್ನಲಾಗಿದೆ. ಇದೀಗ ಅಜ್ಮಲ್‌ನನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರು | ಧರ್ಮ ನಿರಪೇಕ್ಷ – ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134 ನೇ ಸ್ಮರಣ ದಿನ
ಆರೋಪಿತರು ಮೂರು ತಿಂಗಳಿಗೊಮ್ಮೆ ಸ್ಥಳ ಬದಲಾವಣೆ ಮಾಡುತ್ತಿದ್ದರು. ಈ ಹಿಂದೆ ಕೇರಳದ ಪಾಲಕ್ಕಾಡ್, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದರು. ಪೊಲೀಸರ ದಾಳಿ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಮೂರು ವಾರಗಳ ಹಿಂದೆ ಮೈಸೂರಿನ ಬನ್ನಿ ಮಂಟಪದ ರಿಂಗ್ ರಸ್ತೆಯ ಗ್ಯಾರೇಜ್‌ಗೆ ಬಂದು ಡ್ರಗ್ಸ್ ತಯಾರಿಕೆಯಲ್ಲಿ ತೊಡಗಿದ್ದರು. ದ್ರವ ರೂಪದಲ್ಲಿದ್ದ ಮಾದಕ ವಸ್ತುವನ್ನು ಪೌಡರ್ ಮಾಡಿ ಪೂರೈಕೆ ಮಾಡುತ್ತಿದ್ದರು. ಇದರ ಮಾರಾಟಕ್ಕಾಗಿ ಇನ್ನೊಂದು ತಂಡವಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ತಯಾರಿಕಾ ಘಟಕದ ಸದಸ್ಯನೊಬ್ಬ ಆಗಾಗ ಹೊರಗೆ ಬಂದು ಟೀ ತೆಗೆದುಕೊಂಡು ಹೋಗುತ್ತಿದ್ದ. ಅವನನ್ನು ಹೊರತುಪಡಿಸಿ ಇನ್ಯಾರೂ ಶೆಡ್‌ನಿಂದ ಹೊರಬರುತ್ತಿರಲಿಲ್ಲ. ಶೆಡ್‌ನೊಳಗೆ ಗಾಳಿ-ಬೆಳಕು ಸಹಿತ ಬರದಂತೆ ಮುಚ್ಚಲಾಗಿತ್ತು. ಹೊರಗೆ ಗ್ಯಾರೇಜ್‌ನಂತೆಯೇ ಕಾಣುತ್ತಿದ್ದ ಶೆಡ್‌ನಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆಯೂ ಸ್ಥಳೀಯರಲ್ಲಿ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.
ಇನ್ನು ಈ ಕುರಿತು ಗೃಹಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಮೈಸೂರಿನಲ್ಲಿ ಡ್ರಗ್ ತಯಾರಿಕಾ ಘಟಕವೊಂದು ಕಾರ್ಯನಿರ್ವಹಿಸುತ್ತಿರುವುದು ರಾಜ್ಯ ಪೊಲೀಸ್ ಇಲಾಖೆಯ ಲೋಪ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಮಹಾರಾಷ್ಟ್ರದ ಪೊಲೀಸರು ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ಮಾಡುವವರೆಗೆ ಸ್ಥಳೀಯ ಪೊಲೀಸರಿಗೆ ಇದು ಗೊತ್ತಾಗಿಲ್ಲ ಎಂದರೆ ಇದು ನಮ್ಮದೇ ಲೋಪ. ಈ ಬಗ್ಗೆ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೈಸೂರಿನಲ್ಲಿ ರಾಜಾರೋಷವಾಗಿ ಡ್ರಗ್ಸ್ ತಯಾರಾಗುತ್ತಿತ್ತು ಎಂಬುದು ಆತಂಕದ ವಿಚಾರ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು | ಧರ್ಮ ನಿರಪೇಕ್ಷ – ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134 ನೇ ಸ್ಮರಣ ದಿನ
ಮೈಸೂರಿನಲ್ಲಿ ಭೇದಿಸಲಾದ ಎಂಡಿಎಂಎ ತಯಾರಿಕಾ ಘಟಕ ರಾಜ್ಯದ ಭದ್ರತೆಗೆ ದೊಡ್ಡ ಎಚ್ಚರಿಕೆಯನ್ನೇ ನೀಡಿದೆ. ಎಲ್ಲಾ ಇಲಾಖೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದ್ದು, ತನ್ನ ಆಣತಿಯಂತೆ ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿದೆ ಎಂದು ಟೀಕಿಸುವ ವಿಪಕ್ಷಗಳ ಬಾಯಿಗೆ ಆಡಳಿತ ಪಕ್ಷ ಆಹಾರವಾಗಿದೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದೂ ಆಗ್ರಹಿಸುತ್ತಿವೆ. ಅಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ತಯಾರಿಕೆ, ಶಾಂತ ನಗರವೆನಿಸಿದ ಮೈಸೂರನ್ನು ಅಪರಾಧ ಜಾಲದ ನೆಲೆಯಾಗಿ ರೂಪಿಸುತ್ತಿತ್ತಾ ಎನ್ನುವ ಆತಂಕದ ಶಂಕೆ ಹೆಚ್ಚಾಗಿದೆ. ಸದ್ಯ ಈ ಪ್ರಕರಣ ಭೂಗತ ಜಾಲದ ಬೇರುಗಳು ಇಳಿದಿರಬಹುದಾದ ಆಳವನ್ನು ತೋರಿಸುತ್ತದೆ. ಯುವಜನತೆಯನ್ನು ಗುರಿಯಾಗಿಸಿಕೊಂಡಿರುವ ಡ್ರಗ್ ಮಾಫಿಯಾ, ಆರ್ಥಿಕ ಲಾಭಕ್ಕಾಗಿ ಕಾನೂನು, ನೈತಿಕತೆ ಹಾಗೂ ಮೌಲ್ಯಗಳಿಗೆ ಧಕ್ಕೆ ನೀಡುತ್ತಿರುವುದಂತೂ ಸತ್ಯ.
ಮಹಾರಾಷ್ಟ್ರ ಪೊಲೀಸರು ಮೈಸೂರು ನಗರದಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡುವವರೆಗೂ ರಾಜ್ಯ ಪೊಲೀಸ್ ಇಲಾಖೆಗೂ ಮಾಹಿತಿ ಇರಲಿಲ್ಲ ಎಂಬುದು ಗೃಹಸಚಿವರ ಒಪ್ಪಿಗೆಯ ಮಾತು. ಇದು ನೇರವಾಗಿ ಸರ್ಕಾರದ ಅಧೀನದಲ್ಲಿರುವ ರಾಜ್ಯದ ಪೊಲೀಸ್ ಯಂತ್ರಾಂಗದ ಜವಾಬ್ದಾರಿ ಕೊರತೆಯನ್ನು ತೋರಿಸುತ್ತದೆ. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸಮನ್ವಯ ಸಾಧಿಸಿ ನಗರಗಳ ಹೊರವಲಯಗಳಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳ ಮೇಲೆ ನಿಗಾ ಇರಿಸುವುದು ಅತ್ಯವಶ್ಯಕ. ಬೆಳಕಿಗೆ ಬಂದಿರುವ ಆಘಾತಕಾರಿ ಪ್ರಕರಣದ ಸೂಕ್ತ ತನಿಖೆ ನಡೆಯಬೇಕು. ಯುವ ಜನಾಂಗವನ್ನು ಬೆಂಬಿಡದೇ ಕಾಡುತ್ತಿರುವ ಈ ಮಾದಕ ವ್ಯಸನವೆಂಬ ಜಟಿಲ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.





