ದೇಶದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯದ ಮೂಲಕ ಬದುಕು ಕಲ್ಪಿಸಿಕೊಟ್ಟ, ಪ್ರಪಂಚದಲ್ಲೇ ಅತ್ಯುನ್ನತ ಸಂವಿಧಾನ ನೀಡಿದ ಮಹಾನ್ ಚೇತನ ಬಾಬಾಸಾಹೇಬ್ ಅಂಬೇಡ್ಕರ್ ರವರು. ಬಾಬಾಸಾಹೇಬರು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟ ಪ್ರಾತಃಸ್ಮರಣೀಯರು ನಾವೆಲ್ಲರೂ ಸದಾ ನೆನಪು ಮಾಡಿಕೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.
ಅವರು ಬ್ರಹ್ಮಾವರದ ಬಸ್ಟ್ಯಾಂಡ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಬ್ರಹ್ಮಾವರ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಬಾಬಾಸಾಹೇಬ್ ಅಂಬೇಡ್ಕರ್ ರವರ 70 ನೇ ಪರಿನಿಬ್ಬಾಣ ದಿನದಂದು ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವದ ಪುಷ್ಫ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಜಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸನ್ಮಾನ್ಯ ಬಿ. ಬುಜಂಗ ಶೆಟ್ಟಿಯವರು ಮಾತನಾಡಿ ಎಲ್ಲಾ ವರ್ಗ, ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ನೆಮ್ಮದಿಯಾಗಿ ಬಾಳಲಿಕ್ಕೆ ಬೇಕಾದ ಅವಕಾಶಗಳನ್ನು ಕಲ್ಪಿಸಿಕೊಟ್ಟ ಮಹಾ ಮೇಧಾವಿ ಬಾಬಾಸಾಹೇಬ್ ಅಂಬೇಡ್ಕರ್ ರವರು. ಅವರನ್ನು ಪ್ರತೀ ದಿನವೂ ನಾವು ಸ್ಮರಣೆ ಮಾಡಬೇಕು ಅದರಲ್ಲೂ ಶಾಲಾ ಮಕ್ಕಳಿಗೆ ಅತೀ ಅಗತ್ಯವಾಗಿ ಅಂಬೇಡ್ಕರ್ ಮಹತ್ವದ ಬಗ್ಗೆ ತಿಳಿಸುವ ಕೆಲಸ ನಾವು ಮಾಡಬೇಕಾಗಿದೆ ಎಂದರು.
ಇನ್ನೊಬ್ಬ ಅತಿಥಿ ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಬಿರ್ತಿ ರಾಜೇಶ್ ಶೆಟ್ಟಿಯವರು ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಒಂದು ಜಾತಿ, ಒಂದು ಧರ್ಮದ ನಾಯಕರಲ್ಲಾ ಅವರು ಈ ದೇಶದ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ನೀಡಿದ ಮಹಾನ್ ನೇತಾರ, ಅಸ್ಪೃಶ್ಯತೆ, ಜೀತ ಪದ್ದತಿಯನ್ನು ಹೋಗಲಾಡಿಸಿದ ಮಾಹಾನ್ ಕ್ರಾಂತಿಕಾರಿ, ಸ್ವತಃ ತಾವು ಮೇಲ್ವರ್ಗದವರಿಂದ ಅನುಭವಿಸಿದ ಅವಮಾನ ಅಸ್ಪೃಶ್ಯತೆಗಳನ್ನು ಸಹಿಸಿಕೊಂಡು ನಮ್ಮ ಮುಂದಿನ ಪೀಳಿಗೆ ಸುಖ, ಸಂತೋಷ, ನೆಮ್ಮದಿಯ ಜೀವನ ನಡೆಸಬೇಕೆಂಬ ದೂರ ದೃಷ್ಟಿಯನ್ನು ನಮ್ಮ ದೇಶಕ್ಕೆ ಎಲ್ಲರಿಗೂ ಸಮಾನ ಅವಕಾಶ ಇರುವ ಸಂವಿಧಾನವನ್ನು ರಚಿಸಿಕೊಟ್ಟರು ಅದನ್ನು ಸದಾ ನಾವು ನೆನಪಲ್ಲಿ ಇಟ್ಟಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಾರಂಬಳ್ಳಿ ಪಂಚಾಯತ್ ಅಧ್ಯಕ್ಷರಾದ ಸನ್ಮಾನ್ಯ ನಿತ್ಯಾನಂದ ರಾವ್ ಬಿ. ಆರ್, ಮಾಜಿ ಅಧ್ಯಕ್ಷರಾದ ನವೀನ್ ನಾಯಕ್, ಪಂಚಾಯತ್ ಸದಸ್ಯರಾದ ದೇವಾನಂದ ನಾಯಕ್, ನಗರಸಭೆ ಸದಸ್ಯರಾದ ವಿಜಯ ಕುಮಾರ್ ಕೊಡವುರು, ಬ್ರಹ್ಮಾವರ ವ್ಯವಸಾಯ ಸಹಕಾರ ಸಂಘದ ನಿರ್ಧೇಶಕರಾದ ಎಸ್. ನಾರಾಯಣ, ದ.ಸಂ.ಸ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಬ್ರಹ್ಮಾವರ ತಾಲೂಕು ಪ್ರಧಾನ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ದ.ಸಂ.ಸ. ಪದಾಧಿಕಾರಿಗಳಾದ ಕುಮಾರ್ ಕೋಟ, ಮಂಜುನಾಥ್ ಬಾಳ್ಕುದ್ರು, ಹರೀಶ್ಚಂದ್ರ ಕೆ. ಡಿ., ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಬಿರ್ತಿ ಸುರೇಶ, ಶಿವಾನಂದ ಬಿರ್ತಿ, ವಿಜಯ ಗಿಳಿಯಾರು, ಶ್ರೀನಿವಾಸ್ ವಡ್ಡರ್ಸೆ, ಪ್ರಕಾಶ್ ಹೇರೂರು, ಅನಿಲ ಬಿರ್ತಿ, ಚೖತನ್ಯ ಬಿರ್ತಿ, ಪ್ರಶಾಂತ್ ಬಿರ್ತಿ, ಶರತ್ ಆರೂರು, ಇದ್ರಿಸ್ ಹೂಡೆ ಉಪಸ್ಥಿತರಿದ್ದರು.





