ದಲಿತರ ಸ್ವಾಭಿಮಾನ ಹಾಗೂ ಅಸ್ಮಿತೆಯ ಸಂಕೇತವಾದ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಸಂಜೆ ಪಂಜಿನ ಮೆರವಣಿಗೆಯೊಂದಿಗೆ ಭವ್ಯವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜನವರಿ 1 ನಮ್ಮೆಲ್ಲರ ಬಿಡುಗಡೆಯ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದೊಂದಿಗೆ ಅವಿನಾಭಾವವಾಗಿ ಬೆಸೆದ ದಿನವೆಂದು ಹೇಳಿದರು. ಯಾವುದೇ ಪ್ರಮುಖ ಕಾರ್ಯಕ್ರಮಗಳಿದ್ದರೂ ಸಹ ಬಾಬಾ ಸಾಹೇಬ್ ಅವರು ತಮ್ಮ ಜೀವನದ ಕೊನೆಯ ದಿನದವರೆಗೆ ಜನವರಿ 1ರಂದು ಭೀಮಾ ಕೋರೇಗಾಂವ್‌ಗೆ ತೆರಳಿ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸುತ್ತಿದ್ದರು. ಆ ಪರಂಪರೆಯನ್ನು ಮುಂದುವರಿಸಿಕೊಂಡು ನಾವು ಅಂಬೇಡ್ಕರ್ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟವರು ಅವರ ಚಿಂತನೆ ಹಾಗೂ ಹೋರಾಟವನ್ನು ಬೆಂಬಲಿಸಿ ಮುನ್ನಡೆಸುತ್ತಿದ್ದೇವೆ ಎಂದ ಹೇಳಿದರು.
ಭೀಮಾ ಕೋರೇಗಾಂವ್ ವಿಜಯವು ಶೋಷಿತ ಸಮುದಾಯಗಳು ಜಾತಿವಾದಿ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ಐತಿಹಾಸಿಕ ದಿನವಾಗಿದ್ದು, ಅದು ನಮ್ಮ ಸ್ವಾಭಿಮಾನದ ಪ್ರತೀಕವಾಗಿದೆ. ಜನವರಿ 1 ಬಂದಾಗಲೆಲ್ಲ ನಮ್ಮ ರೋಮರೋಮಗಳಲ್ಲಿ ಶೌರ್ಯದ ಕಿಚ್ಚು ಉರಿಯುತ್ತದೆ. ನಮ್ಮ ಹಿರಿಯರು ನಿರ್ಮಿಸಿದ ಶೌರ್ಯದ ಇತಿಹಾಸವನ್ನು ನೆನಪಿಸಿಕೊಂಡು ನಾವು ರೋಮಾಂಚನಗೊಳ್ಳುತ್ತೇವೆ. ಈ ಹಿನ್ನಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕಾರ್ಯಕರ್ತರು ಬೆಳಗ್ಗೆಯಿಂದಲೇ ತುದಿಗಾಲಲ್ಲಿ ನಿಂತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೋ ಕೆ ಫಣಿರಾಜ್, ನವ ಪೇಶ್ವೆವಾದಿಗಳು ಇನ್ನೂ ಕೂಡ ದಲಿತರ ಮೇಲಿನ ದಮನವನ್ನು ಕಡಿಮೆ ಮಾಡಿಲ್ಲ. ಹಾಗಾಗಿ ಈ ಮಹರ್ ಪ್ರತಿಭಟನೆ ಇಂದಿಗೂ ಮುಂದುವರಿಯಬೇಕಾದ ಅಗತ್ಯವಿದೆ. ನವ ಪೇಶ್ವೆವಾದಿ ಆಡಳಿತವನ್ನು ಕೊನೆಗಾಣಿಸುವವರೆಗೂ ಭೀಮಾ ಕೋರೇಗಾಂವ್ ಹೋರಾಟ ಮುಂದುವರಿಯಬೇಕಾಗಿದೆ ಎಂದು ತಿಳಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಇದೊಂದು ವಿಜಯೋತ್ಸವ ಮಾತ್ರವಲ್ಲ ದಲಿತರ ಪ್ರತಿರೋಧದ ಪ್ರತೀಕವಾಗಿ ಬ್ರಾಹ್ಮಣಶಾಹಿ ನವ ಪೇಶ್ವೆವಾದಿಗಳ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಬೇಕಾಗುದೆ. ಆ ಮೂಲಕ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಅವರು ಹೇಳಿದರು.
ಉಡುಪಿಯ ಕೆಥೋಲಿಕ್ ಸೆಂಟರ್ ಬಳಿ ಧರ್ಮಗುರು ಫಾ. ವಿಲಿಯಂ ಮಾರ್ಟಿಸ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ್ದು, ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಸಮಾಪ್ತಿಗೊಂಡಿತು.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜನಪರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, ಕೊರಗರ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡಾ, ಸಾಮಾಜಿಕ ಹೋರಾಟಗಾರ ಇದ್ರೀಸ್ ಹೂಡೆ, ದಸಂಸ ಮುಖಂಡರಾದ ರಾಜು ಕೆಸಿ ಬೆಟ್ಟಿನಮನೆ, ಶ್ಯಾಮ್ ಸುಂದರ್ ತೆಕ್ಕಟ್ಟೆ, ಅಣ್ಣಪ್ಪ ನಕ್ರೆ, ದೇವು ಹೆಬ್ರಿ, ರಾಜೇಂದ್ರ ಮಾಸ್ತರ್, ಶಂಕರ್ ದಾಸ್ ಚೇಂಡ್ಕಳ, , ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.






