ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಕೆಎಎಸ್ ಅಧಿಕಾರಿ ಡಾ. ಎಚ್.ಎಲ್ ನಾಗರಾಜ್ ಅವರು ಸನ್ಯಾಸ ಸ್ವೀಕರಿಸಲು ಮುಂದಾಗಿದ್ದಾರೆ. ಅವರನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಡಿಸೆಂಬರ್ 14, 15ರಂದು ಅವರಿಗೆ ಪಟ್ಟಾಭಿಷೇಕ ನಡೆಯಲಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧಿಪತಿಯಾಗಿರುವ ಚಂದ್ರಶೇಖರ ಸ್ವಾಮೀಜಿ ಅವರಿಗೆ 81ರ ಹರೆಯ. ಅವರ ಉತ್ತರಾಧಿಕಾರಿಯಾಗಿ ನಾಗರಾಜ್ ಅವರನ್ನು ಮಠದ ಟ್ರಸ್ಟಿಗಳು ಮತ್ತು ಸ್ವಾಮೀಜಿ ಆಯ್ಕೆ ಮಾಡಿದ್ದಾರೆ.
ಡಿ.14ರ ಶನಿವಾರ ಸಂಜೆ 6 ಗಂಟೆಗೆ ಕೆಂಗೇರಿಯಲ್ಲಿರುವ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಾನುವಾರ ಪಟ್ಟಾಭಿಷೇಕ ನಡೆಯಲಿದೆ ಎಂದು ತಿಳಿದುಬಂದಿದೆ.
ನಿಷ್ಠಾವಂತ ಅಧಿಕಾರಿ ಎಂದು ಹೆಸರು ಗಳಿಸಿದ್ದ ನಾಗರಾಜ್ ಅವರು ವ್ಯವಸ್ಥೆಯ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿದ್ದರು. ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಕೆ.ಆರ್ ಪೇಟೆಯಲ್ಲಿರುವ ಶತಮಾನದ ಶಾಲೆಯ ಪುನರಾಭಿವೃದ್ಧಿಯಲ್ಲಿ ಅವರು ನಿರ್ವಹಿಸಿದ ಪಾತ್ರ ಮಹತ್ವದ್ದು.
ನಾಗರಾಜ್ ಅವರು ಈ ಹಿಂದೆ, 2011ರಲ್ಲಿ ಕೆ.ಆರ್ ಪೇಟೆಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೂ ಸನ್ಯಾಸತ್ವ ಪಡೆದುಕೊಂಡಿದ್ದರು. ಆದಿಚುಂಚನಗಿರಿಯ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಆದರೆ, ಕುಟುಂಬಸ್ಥರು ಮತ್ತು ಒಡನಾಡಿಗಳ ಒತ್ತಾಯದಿಂದಾಗಿ ಸನ್ಯಾಸತ್ವ ತೊರೆದು ಸೇವೆಗೆ ಮರಳಿದ್ದರು.
ಆ ನಂತರ ಅವರು ಉಪ ವಿಭಾಗಾಧಿಕಾರಿ ಬಡ್ತಿ ಪಡೆದು ಹಾಸನದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ, ಅವರು ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ, ಮತ್ತೆ ಸನ್ಯಾಸತ್ವ ಪಡೆಯಲು ನಿರ್ಧರಿಸಿದ್ದು, ನಾಳೆ (ಶನಿವಾರ) ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಉತ್ತಾರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.




