ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಕೈಗೆತ್ತಿಕೊಂಡಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ್ ಯೋಜನೆಯನ್ನು ರದ್ದುಗೊಳಿಸಲು ಹೈ ಕೋರ್ಟ್‌ನ ರಿಜಿಸ್ಟರ್ ಜನರಲ್ ಮೂಲಕ ತೀರ್ಥಹಳ್ಳಿಯ ಹಿರಿಯ ಸಾಮಾಜಿಕ ಮತ್ತು ಪರಿಸರ ಹೋರಾಟಗಾರ ಹೆಚ್ಎಂ ವೆಂಕಟೇಶ್ ಮನವಿ ಮಾಡಿದ್ದಾರೆ.
ಪರಿಸರ ಪ್ರೇಮಿಗಳು, ಸ್ಥಳೀಯ ನಾಗರಿಕರು ಮತ್ತು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಯೋಜನೆ ಕೈಬಿಡುವಂತೆ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಮಧ್ಯ ಭಾಗದಲ್ಲಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿ 16,000ಕ್ಕೂ ಹೆಚ್ಚು ದೈತ್ಯಾಕಾರದ ಮರಗಳನ್ನು ಕತ್ತರಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಅಪರೂಪದ ಸಸ್ಯ, ಪ್ರಾಣಿ ಸಂಕುಲಗಳ ನಾಶ, ವನ್ಯಜೀವಿ ವಲಯಗಳಿಗೆ ಹಾನಿ ಹಾಗೂ ಸ್ಥಳೀಯರ ಜೀವನಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಯೋಜನೆಯ ಅಂದಾಜು ವೆಚ್ಚ ₹10,500 ಕೋಟಿ ಆಗಿದ್ದು, ಇದರ ವಿವರವಾದ ಯೋಜನಾ ವರದಿ (DPR)ಯನ್ನು ಸರ್ಕಾರವು ಜನತೆಗೆ ಬಹಿರಂಗಪಡಿಸದಿರುವುದು ಪಾರದರ್ಶಕ ಆಡಳಿತಕ್ಕೆ ವಿರುದ್ಧವಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟಗಳು ರಾಜ್ಯದ ನಾಗರಿಕರು ಉಸಿರಾಡುವ ಆಮ್ಲಜನಕ ಬ್ಯಾಂಕ್ ಇದ್ದಂತೆ. ಅರಣ್ಯ ಸಂಪತ್ತು, ಸಸ್ಯ ಸಂಪತ್ತು, ಪ್ರಾಣಿ ಪಕ್ಷಿಗಳ ಸಂಪತ್ತು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದಲ್ಲಿ 745 ಮರಗಳು, ವನ್ಯಜೀವಿ ವಲಯದಲ್ಲಿ 1918 ಮರಗಳು, ಉತ್ತರ ಕನ್ನಡ ಭಾಗದಲ್ಲಿ 13,856 ಮರಗಳು ಹೀಗೆ ಪ್ರಕೃತಿ ಸಹಜವಾಗಿ ಬೆಳೆದು ನಿಂತಿರುವ ಸುಮಾರು 16,041 ಮರಗಳನ್ನು ಕತ್ತರಿಸಲಾಗುತ್ತಿದೆ. ಹಾಗೂ ಸರ್ಕಾರಿ ಪಾಠಶಾಲೆಗಳು, ದೇವಾಲಯಗಳು, ರೈತರ ಮನೆಗಳು ಮತ್ತು ಜಾನುವಾರುಗಳ ಕೊಟ್ಟಿಗೆಗಳು ಈ ಯೋಜನೆಯಿಂದ ನಾಶವಾಗುತ್ತಿದೆ.
ಕಳೆದ 75 ವರ್ಷಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳನ್ನು ನಾಶ ಮಾಡಿ ವಿದ್ಯುತ್ ಉತ್ಪಾದನೆಯನ್ನು ಈಗಾಗಲೇ ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ಲಿಂಗನಮಕ್ಕಿ, ತಳಕಳಲೆ, ಚಕ್ರ, ವಾರಾಹಿ, ಮಣಿ, ಗೇರುಸೊಪ್ಪ ಜಲಾಶಯಗಳಲ್ಲಿ ವಿದ್ಯುತ್ ಕೇಂದ್ರಗಳಿವೆ. ಇದರಿಂದ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳು ನಾಶವಾಗುತ್ತಲೇ ಇದೆ. ಇದರ ಜೊತೆ ಈಗ ಕೆಪಿಟಿಸಿಎಲ್ ನವರು ಸುಮಾರು 54,155 ಹೆಕ್ಟೇರ್ ಪರಿಸರ ಸೂಕ್ಷ್ಮಅರಣ್ಯ ಭೂಮಿ ನಾಶಪಡಿಸಲಾಗುತ್ತಿದೆ. ಮತ್ತು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸ್ಥಳೀಯ ನಿವಾಸಿಗಳಿಗೆ ಈ ಯೋಜನೆಯಿಂದ ತುಂಬಾ ತೊಂದರೆಯಾಗುತ್ತಿದೆ. ಹಾಗೂ ದಕ್ಷಿಣ ಭಾರತದ ನೀರಿನ ಗೋಪರ, ಪಶ್ಚಿಮ ಘಟ್ಟದ ಆಮ್ಲಜನಕ ಬ್ಯಾಂಕ್ ಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರು ಲಗ್ಗೆ ಇಟ್ಟಿರುತ್ತಾರೆ. ವಿದ್ಯುತ್ ಉತ್ಪಾದನೆಗೆ ಸೌರಶಕ್ತಿ ಮತ್ತು ವಿಂಡ್ ಮಿಲ್ ನಂತಹ ಯೋಜನೆಗಳನ್ನು ರೂಪಿಸಿ ವಿದ್ಯುತ್ ಉತ್ಪಾದನೆ ಮಾಡುವ ವಿವಿಧ ಮಾರ್ಗೋಪಾಯಗಳು ಇದ್ದರೂ ಸಹ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈ ಯೋಜನೆಗೆ ಜಾಗವನ್ನು ಗುರುತಿಸಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮತದಾನದ ಹಕ್ಕನ್ನು ಚುನಾವಣಾ ಆಯೋಗ ರಕ್ಷಿಸುತ್ತಿದೆಯೇ?
ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಪರಿಸರ ಸೂಕ್ಷ್ಮ ಅರಣ್ಯ ಭೂಮಿಯ ಮೇಲೆ ನಡೆಯುವ ಅತ್ಯಾಚಾರವೆಂದೆ ನಾವು ಹೇಳಬಹುದು. ಹಾಗೂ ಸರ್ಕಾರವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಾಶಪಡಿಸುತ್ತಿರುವ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ಜನಜಾನುವಾರುಗಳಿಗೆ ಆಗುವ ಹಾನಿಯನ್ನು ಪುನರ್ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ಹಾಗಾಗಿ ಈ ಯೋಜನೆಯನ್ನು ತಡೆಗಟ್ಟಲು ವಿವಿಧ ಪರಿಸರ ಸಂಘಟನೆಗಳು, ಪರಿಸರ ಕಾರ್ಯಕರ್ತರು,ಇನ್ನಿತರ ಸಂಘಟನೆಗಳು ಮತ್ತು ನಾಗರಿಕರು ನಿರಂತರ ಪ್ರಯತ್ನ ಪಟ್ಟರು ಸಹ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಸರ್ಕಾರವು ನಾಗರಿಕರ ಹವಾಲುಗಳನ್ನು ಕೇಳಲು ತಯಾರಿಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಹಾಗಾಗಿ ನ್ಯಾಯಾಂಗದ ಮೊರೆ ಹೋಗಬೇಕಾಗಿರುವುದು ನಮಗೆ ಅನಿವಾರ್ಯವಾಗಿದೆ ಹಾಗೂ ನ್ಯಾಯಾಂಗದ ಮೇಲಿನ ಗೌರವ, ನಂಬಿಕೆ, ವಿಶ್ವಾಸದೊಂದಿಗೆ ನ್ಯಾಯ ಸಿಗುತ್ತದೆ ಎಂಬ ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ಈ ಮನವಿ ಪತ್ರವನ್ನು ತಮ್ಮ ಮುಂದೆ ಮಂಡಿಸುತಿದ್ದೇವೆ. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ತಾವು ಈ ಯೋಜನೆಯ ಬಗ್ಗೆ ನಾನು ಬರೆದಿರುವ ಈ ಮನವಿ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿವರಗಳನ್ನು ಪಡೆದು ವಿಚಾರಣೆಯನ್ನು ನಡೆಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ವೆಂಕಟೇಶ್ ಅವರು ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.





