ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಹಣದ ಅವಶ್ಯಕತೆ ಹೇಳಿ ಹಣ ಪಡೆದು, ನಂತರ ಯುವಕನನ್ನು ಬ್ಲ್ಯಾಕ್‌ಮೇಲ್ ಮಾಡಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಆರೋಪದ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲೆ, ಮದ್ದೂರು ಮೂಲದ ಹೆಚ್.ಪಿ. ಮಹದೇವ ನೀಡಿದ ದೂರಿನ ಅನ್ವಯ, ಮಡಿಕೇರಿಯ ರಚನಾ ಎಂಬ ಯುವತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಹಣದ ಅಗತ್ಯವಿದೆ ಎಂದು ಹೇಳಿ ದಿನಾಂಕ-20-11-2025 ರಂದು ₹5,000 ರೂಪಾಯಿ ಹಾಗೂ ದಿನಾಂಕ-28-11-2025 ರಂದು ಮತ್ತೊಮ್ಮೆ ₹5,000 ರೂಪಾಯಿಗಳನ್ನು ಫೋನ್‌ಪೇ ಮೂಲಕ ಪಡೆದುಕೊಂಡಿದ್ದಾಳೆ. ಬಳಿಕ ಹಣ ವಾಪಸ್ ಕೇಳಿದಾಗ, ನಿನಗೆ ಬೇಕಾದ ಸುಖ ಕೊಡುತ್ತೇನೆ, ಮೈಸೂರು ಅಥವಾ ಕುಶಾಲನಗರಕ್ಕೆ ಬಾ ಎಂದು ಆಮಿಷ ಒಡ್ಡಿದ್ದಾಳೆ ಎಂದು ಆರೋಪಿಸಲಾಗಿದೆ.
ದಿನಾಂಕ-12-12-2025 ರಂದು ರಚನಾಳ ಮಾತನ್ನ ನಂಬಿ ಮಹದೇವ ಮಡಿಕೇರಿಗೆ ಬಂದಿದ್ದು, ರಾತ್ರಿ ಸುಮಾರು 10-30ರ ವೇಳೆಗೆ ನಕ್ಷತ್ರ ಸೂಪರ್ ಮಾರ್ಕೆಟ್ ಬಳಿ ಕರೆಸಿಕೊಂಡು, ನಂತರ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ರಾತ್ರಿ 11-45ರ ಸುಮಾರಿಗೆ ರಚನಾಳ ತಾಯಿ ಮಾಲತಿ ಹಾಗೂ ದಿನೇಶ್ ಎಂಬವರು ಆಟೋದಲ್ಲಿ ಮನೆಗೆ ಬಂದು, ದಿನೇಶ್ ಹಣದ ವಿಚಾರದಲ್ಲಿ ಮಾತನಾಡುತ್ತೇನೆ ಎಂದು ಹೇಳಿ ರಚನಾ ಹಾಗೂ ಆಕೆಯ ತಾಯಿಯನ್ನು ಮನೆಯಿಂದ ಹೊರ ಕಳುಹಿಸಿದ್ದಾನೆ.
ನಂತರ, ದಿನೇಶ್ ತನ್ನ ಸ್ನೇಹಿತರಾದ ಸುಜೀತ್ ಹಾಗೂ ದರ್ಶನ್ ಅವರನ್ನು ಕರೆಸಿಕೊಂಡು, ಮೂವರು ಸೇರಿ ದೂರುದಾರ ಮಹದೇವನ ಮೇಲೆ ಕೈ, ದೊಣ್ಣೆ ಹಾಗೂ ಕತ್ತಿಯ ಹಿಡಿಯಿಂದ ಮುಖ, ಬಾಯಿ, ಎದೆ ಭಾಗ ಮತ್ತು ಎಡ ಕಾಲಿನ ಮಂಡಿಗೆ ಹೊಡೆದು ಗಂಭೀರವಾಗಿ ಥಳಿಸಿ, ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮಹದೇವನ ಬಟ್ಟೆಗಳನ್ನು ಬಲವಂತವಾಗಿ ಬಿಚ್ಚಿಸಿ, ಬೆತ್ತಲೆಯನ್ನಾಗಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು, ಏರ್‌ಗನ್ ತಲೆಗೆ ಇಟ್ಟು ₹50 ಲಕ್ಷ ರೂಪಾಯಿ ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ರಾತ್ರಿ ಪೂರ್ತಿ ಮನೆಯಲ್ಲಿ ಬಲವಂತವಾಗಿ ಇರಿಸಿಕೊಂಡು, ರಕ್ತಸಿಕ್ತ ಬಟ್ಟೆಗಳನ್ನು ಮನೆಯೊಳಗೆ ಸುಟ್ಟು ಹಾಕಿರುವ ಆರೋಪ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರಿಗೆ ವೇಗ, ಒತ್ತಡದ ಬೆಳವಣಿಗೆ ಬೇಡ: ಪ್ರೊ ಎಂ ಕೃಷ್ಣೆಗೌಡ
ಬೆಳಗಿನ ಜಾವ ಬಾತ್‌ರೂಮಿಗೆ ಹೋಗುವುದಾಗಿ ಹೇಳಿ ಮಹಾದೇವ ಮನೆಯಿಂದ ತಪ್ಪಿಸಿಕೊಂಡು, ಸದರಿ ಪ್ರಕರಣ ಸಂಬಂಧ ರಚನಾ, ಆಕೆಯ ತಾಯಿ ಮಾಲತಿ, ದಿನೇಶ್, ಸುಜೀತ್ ಹಾಗೂ ದರ್ಶನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಸದರಿ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.





