ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಉಂಟಾಗಿರುವ ಅತಿವೃಷ್ಟಿ, ಅನಾವೃಷ್ಟಿ ನಡುವೆಯೂ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿರುವುದು ಈ ಭಾಗದ ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಸಾಲದ ಹೊರೆ, ಬರ, ಬೆಲೆ ಕುಸಿತ ಸೇರಿ ವಿವಿಧ ಕಾರಣದಿಂದ 2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 339 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿದವು. ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದರು.
2024-25ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ 279ಕ್ಕೆ ಇಳಿಕೆಯಾಗಿದೆ. ಆದರೆ, ತೊಗರಿ ಕಣಜ ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಆತ್ಮಹತ್ಯೆ ಸಂಖ್ಯೆ ಏರಿಕೆ ಕಂಡಿದ್ದು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಕಡಿಮೆ ಆಗಿರುವುದು ತುಸು ಸಂತಸಕ್ಕೆ ಕಾರಣವಾಗಿದೆ.
ಕಂದಾಯ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ 2025-26ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 21 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ. ಇದು ಇತ್ತೀಚಿನ ವರ್ಷಗಳಲ್ಲೇ ಕನಿಷ್ಠ ಪ್ರಕರಣಗಳು ದಾಖಲಾಗಿರುವ ಅವಧಿ ಎಂದು ಹೇಳಬಹುದು.
ʼಕಲ್ಯಾಣ ಕರ್ನಾಟಕʼದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ವಿವರ
| ಜಿಲ್ಲೆಗಳು | 2023-24 | 2024-25 | 2025-26 |
| ಬೀದರ್ | 75 | 45 | 0 |
| ಕಲಬುರಗಿ | 88 | 104 | 14 |
| ರಾಯಚೂರ | 22 | 24 | 2 |
| ಕೊಪ್ಪಳ | 30 | 26 | 4 |
| ಬಳ್ಳಾರಿ | 19 | 10 | 0 |
| ಯಾದಗಿರಿ | 70 | 48 | 3 |
| ವಿಜಯನಗರ | 35 | 22 | 0 |
| ಒಟ್ಟು | 339 | 279 | 21 |
ಕಳೆದ 31 ತಿಂಗಳಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಒಂದಿಷ್ಟು ವ್ಯತ್ಯಾಸ ಕಾಣಬಹುದು. ಆದರೆ, ಉಳಿದು ಐದು ಜಿಲ್ಲೆಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಅದರಲ್ಲೂ ಹೆಚ್ಚು ಅನ್ನದಾತರು ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿದ್ದ ಬೀದರ್, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಇಳಿಮುಖ ಕಂಡಿದೆ.
2025-26ನೇ ಸಾಲಿನಲ್ಲಿ ಕಲ್ಯಾಣದ ಏಳು ಜಿಲ್ಲೆಗಳಲ್ಲಿ ಅತಿ ಕಡಿಮೆ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ರೈತರ ವಿಚಾರದಲ್ಲಿ ಇನ್ನೊಂದು ನೆಮ್ಮದಿ ವಿಷಯ ಎಂದರೆ, ಕಳೆದ ನಾಲ್ಕು ತಿಂಗಳಲ್ಲಿ ಬೀದರ್, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಶೂನ್ಯ ದಾಖಲಾಗಿದೆ. ಸದ್ಯಕ್ಕೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಡಬಲ್ ಡಿಜಿಟ್ ದಾಟಿಲ್ಲ ಎಂಬುದು ಜನರ ನೆಮ್ಮದಿ ಬದುಕಿಗೆ ಸಾಕ್ಷಿಯಾಗಿದೆ.
ʼ2023 ರಿಂದ 2025ರ ಜುಲೈ ಅಂತ್ಯದ ತನಕ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,416 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.ಈ ಪೈಕಿ 2,067 ಅರ್ಹ ಪ್ರಕರಣಗಳೆಂದು ಪರಿಗಣಿಸಲಾಗಿದ್ದು, ಅದರಲ್ಲಿ 1,962 ಪ್ರಕರಣಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹98.10 ಕೋಟಿ ಪರಿಹಾರ ವಿತರಿಸಲಾಗಿದೆʼ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 1,250 ರೈತರ ಆತ್ಮಹತ್ಯೆ ಪ್ರಕರಣ ವರದಿಯಾದರೆ, 2024-25ನೇ ಸಾಲಿನಲ್ಲಿ 1,082 ಪ್ರಕರಣ ವರದಿಯಾಗಿದವು. 2025-26ರಲ್ಲಿ ಜುಲೈ ಅಂತ್ಯದವರೆಗೆ 84 ರೈತರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಇಳಿಮುಖ ಕಂಡಿದೆ. ಅದರಲ್ಲೂ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ 16 ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಒಂದೂ ವರದಿಯಾಗಿಲ್ಲ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾದ ಬೆಳೆ ಹಾನಿಯಿಂದ ಕೃಷಿ ಬದುಕಿನಲ್ಲಿ ಭರವಸೆ ಕಳೆದುಕೊಂಡು, ಆರ್ಥಿಕ ಹೊರೆ ತಾಳಲಾರದೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಈ ಪೈಕಿ ಬಹುತೇಕ ಪ್ರಕರಣಗಳು ಸಣ್ಣ, ಅತಿ ಸಣ್ಣ ರೈತರೇ ಆಗಿದ್ದಾರೆ ಎಂದರೂ ತಪ್ಪಾಗಲಾರದು.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳ ʼಬರʼ : ಬಾಗಿಲು ಮುಚ್ಚಿದ ಸರ್ಕಾರಿ ಪದವಿ ಪೂರ್ವ ಕಾಲೇಜು!
ಕಂದಾಯ ಮತ್ತು ಕೃಷಿ ಇಲಾಖೆಗಳು ಕೈಗೊಳ್ಳುವ ಅರಿವು ಜಾಗೃತಿ ಕಾರ್ಯಕ್ರಮಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ರೈತರಿಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆ, ಸಾಲ ನೀಡಿಕೆ, ಬೆಳೆ ವಿಮೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಜನಕಲ್ಯಾಣ ಯೋಜನೆಗಳು ಅತಿ ಬಡ, ಮಧ್ಯಮ ವರ್ಗದ ರೈತ ಕುಟುಂಬಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬಂದಿದೆ. ಇದರಿಂದ ಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಕಡಿಮೆ ಆಗುತ್ತಿದೆ ಎಂದು ಹೇಳಬಹುದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




