ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸರ್ಕಾರ ಬಿಪಿಎಲ್ ಪಡಿತರರಿಗೆ 5 ಕೆಜಿ ಅಕ್ಕಿ ಬದಲಾಗಿ ‘ಇಂದಿರಾ ಆಹಾರ ಕಿಟ್’ ನೀಡಲು ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸಿದೆ.
ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ಇಂದಿರಾ ಆಹಾರ ಕಿಟ್ ಮೂಲಕ ಅಡುಗೆ ಎಣ್ಣೆ, ಸಕ್ಕರೆ, ತೊಗರಿ ಬೇಳೆ, ಹೆಸರು ಬೇಳೆ ಹಾಗೂ ಉಪ್ಪನ್ನು ಪಡಿತರರ ಮನೆಯ ಸದಸ್ಯರ ಅನುಸಾರ ನೀಡುವ ಕ್ರಮ ಸ್ವಾಗತಾರ್ಹ. ಹಾಗೆಯೇ, ಪಡಿತರ ವ್ಯವಸ್ಥೆಗೆ ಅಗತ್ಯವಾದ ಆಹಾರ ಉತ್ಪನ್ನಗಳನ್ನು ಟೆಂಡರ್ ಮೂಲಕ ಖಾಸಗಿ ಏಜೆನ್ಸಿಗಳಿಂದ ಕೊಳ್ಳುವುದರ ಬದಲು ರೈತರಿಂದಲೇ ನೇರವಾಗಿ ಎಂ ಎಸ್ ಪಿ ದರದಲ್ಲಿ ಖರೀದಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
“ಇದೇ ವಿಚಾರವಾಗಿ ರೈತ ಸಂಘ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮೂಲಕ ದಿನಾಂಕ-27-09-2023ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಮಹಿಳಾ ರೈತರ ಹಕ್ಕುಗಳ ವೇದಿಕೆ, ರೈತ ಸ್ವರಾಜ್ ವೇದಿಕೆ ಹಾಗೂ ಜಾಗೃತ ಕರ್ನಾಟಕ ಪಧಾಧಿಕಾರಿಗಳು ಚರ್ಚಿಸಿ 5 ಕೆಜಿ ಹೆಚ್ಚುವರಿ ಅಕ್ಕಿ ಪೂರೈಸಲು ಕೊರತೆ ಇರುವುದರಿಂದ ಅಕ್ಕಿ ಬದಲು ಕುಟುಂಬ ಸದಸ್ಯರಿಗೆ ರಾಗಿ ಅಥವಾ ಜೋಳದ ಜೊತೆ ಅಡುಗೆ ಎಣ್ಣೆ ನೀಡುವಂತೆ ಸಮಗ್ರ ವರದಿಯನ್ನು ಕೃಷಿ ಸಚಿವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ” ಎಂದು ಮಾಹಿತಿ ನೀಡಿದರು.

ಸರ್ಕಾರ ಇಂತಹ ಕ್ರಾಂತಿಕಾರಿ ಹೆಜ್ಜೆ ಇಟ್ಟಲ್ಲಿ ಹಣಕಾಸಿನ ಉಳಿತಾಯ, ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ಪೂರಕವಾಗಲಿದೆ. ಆದರೆ, ಸರ್ಕಾರ ಅಂತಹ ನಿರ್ಧಾರಕ್ಕೆ ತೀರ್ಮಾನ ಕೈಗೊಳ್ಳದೆ ಇರುವುದು ವಿಷಾಧನಿಯ ಸಂಗತಿ. ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರು ಬೆಳೆಯುವ ಏಳು ಬೆಳೆಗಳನ್ನು ರೈತರಿಂದ ಸರ್ಕಾರ ನೇರವಾಗಿ ಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ಸ್ಥಳೀಯ ಎಣ್ಣೆ ಸಂಸ್ಕರಣ ಘಟಕಗಳು, ರೈತರ ಉತ್ಪಾದಕ ಸಂಸ್ಥೆಗಳು, ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ಖರೀದಿ ಪ್ರಕ್ರಿಯೆ ನಡೆಸಿದರೆ ಆದಾಯ ಗಳಿಸುತ್ತದೆ, ಇದರಿಂದ ಆರ್ಥಿಕ ಪುನಶ್ಚೇತನಕ್ಕೆ ದಾರಿಯಾಗಲಿದೆ ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರಿನಲ್ಲಿ ಅ.14 ರಿಂದ 15ರ ವರೆಗೆ ‘ಬೌದ್ಧ ಮಹಾ ಸಮ್ಮೇಳನ’
ಪತ್ರಿಕಾಗೋಷ್ಟಿಯಲ್ಲಿ ಕವಿತಾ ಕುರುಗಂಟಿ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ಚಂದ್ರಶೇಖರ್ ಇದ್ದರು.




