ರೈತ ಕಣ್ಮಣಿ ಕೆ.ಎಸ್. ಪುಟ್ಟಣ್ಣಯ್ಯ ಅವರ 76ನೇ ಜನ್ಮದಿನದಂದು ಮೈಸೂರು ಗ್ರಾಮಾಂತರ ಇಲವಾಲದಲ್ಲಿ ರೈತ ದಿನಾಚರಣೆ ಹಾಗೂ ಬೃಹತ್ ಜಿಲ್ಲಾ ರೈತ ಸಮಾವೇಶ ಹಮ್ಮಿಕೊಂಡಿರುವುದಾಗಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಾಡು ಕಂಡಂತಹ ಅಪ್ರತಿಮ ರೈತ ಹೋರಾಟಗಾರ ಕೆ. ಎಸ್. ಪುಟ್ಟಣ್ಣಯ್ಯ ಅವರ ಜನ್ಮ ದಿನದ ಸ್ಮರಣೆಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ, ರೈತಪರ, ಗ್ರಾಮೀಣಪರ ಯೋಜನೆಗಳನ್ನು ರೂಪಿಸಿ, ಕೃಷಿಯನ್ನು ಉಳಿಸಲು ಆಗ್ರಹಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.

ಹಕ್ಕೊತ್ತಾಯಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ:
- ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿರುವಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ. ಎಂ.ಎಸ್. ಸ್ವಾಮಿನಾಥನ್ ಶಿಫಾರಸ್ಸಿನ ಅನ್ವಯ ಸಿ24 50% ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು. ಐತಿಹಾಸಿಕ ದೆಹಲಿ ರೈತಾಂದೋಲನ ಮುಂದಿಟ್ಟಿದ್ದ ಎಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸಬೇಕು.
- ರೈತವಿರೋಧಿ ಕರಾಳ ಕೃಷಿ ಕಾಯ್ದೆಯ ತದ್ರೂಪವಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ-2025, ಬೀಜ ಕಾಯ್ದೆ-2025. ವಿದ್ಯುತ್ ಚ್ಛಕ್ತಿ ಕಾಯಿದೆ-2025 ಇವುಗಳನ್ನು ವಾಪಸ್ಸು ಪಡೆಯಬೇಕು. ನಮ್ಮ ರಾಜ್ಯ ಸರ್ಕಾರ ರಾಜ್ಯದಲ್ಲಿ ಇವುಗಳನ್ನು ಜಾರಿಗೆ ತರುವುದಿಲ್ಲವೆಂದು ತೀರ್ಮಾನಿಸಬೇಕು.
- ಕೇಂದ್ರ ಇಂಡೋ-ಅಮೇರಿಕ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಬಾರದು.
- ಮುಸುಕಿನ ಜೋಳ, ಸಕ್ಕರೆ, ಹಾಲು ಉಪ ಉತ್ಪನ್ನ, ಹತ್ತಿ, ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು.
- ರೈತರ ಸಂಪೂರ್ಣ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.50ರ ಅನುಪಾತದಲ್ಲಿ ಮನ್ನಾ ಮಾಡಬೇಕು. ಸರಳ ಸಾಲದ ನೀತಿಯನ್ನು ರೂಪಿಸಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ನಬಾರ್ಡ್ ಮೂಲಕ ನೀಡುತ್ತಿದ್ದ ಕೃಷಿ ಸಾಲವನ್ನು ಕಡಿತಗೊಳಿಸಿರುವುದನ್ನು ಕೈಬಿಟ್ಟು ಹೆಚ್ಚು-ಹೆಚ್ಚು ಸಾಲ ನೀಡಬೇಕು, ರಾಜ್ಯ, ಸರ್ಕಾರ ಕೇರಳ ಮಾದರಿ ಋಣ ಮುಕ್ತ ಕಾಯ್ದೆಯನ್ನು ರೂಪಿಸಬೇಕು.
- ತಂಬಾಕು ಕೆ.ಜಿ.ಗೆ ಸರಾಸರಿ ₹400 ರೂ. ಬೆಲೆ ದೊರಕಿಸಬೇಕು.
- ಶೇ9.5% ಇಳುವರಿ ಆಧಾರದ ಮೇಲೆ ಕಬ್ಬಿಗೆ ಬೆಲೆ ನಿಗಧಿಯಾಗಬೇಕು. ಟನ್ ಒಂದಕ್ಕೆ ₹5,000 ರೂ. ಬೆಲೆ ದೊರಕಬೇಕು. ಉತ್ತರ ಕರ್ನಾಟಕದ ಕಾರ್ಖಾನೆಗಳು ನೀಡುವಂತೆ ಈ ಭಾಗದ ಸಕ್ಕರೆ ಕಾರ್ಖಾನೆಗಳು ಕೂಡ ಹೆಚ್ಚುವರಿ ಬೆಲೆ ನೀಡಬೇಕು. ಎಥನಾಲ್ ಉತ್ಪಾದನೆಗೆ ರಾಜ್ಯಕ್ಕೆ ವಿಧಿಸಿರುವ ಮಿತಿಯು ಅಸಮತೋಲನದಿಂದ ಕೂಡಿದ್ದು ಈ ಮಿತಿಯನ್ನು ತೆಗೆಯಬೇಕು.
- 60 ವರ್ಷ ದಾಟಿರುವ ಎಲ್ಲಾ ಕೃಷಿಕರಿಗೆ ಮಾಸಿಕ 5,000/- ರೂ ಪಿಂಚಣಿ ನೀಡಬೇಕು.
ಈ ಸುದ್ದಿ ಓದಿದ್ದೀರಾ? ಮೈಸೂರಿನ ಇಲವಾಲದಲ್ಲಿ ಡಿ.23ರಂದು ರೈತ ಕಣ್ಮಣಿ ಕೆ ಎಸ್ ಪುಟ್ಟಣ್ಣಯ್ಯ ಪ್ರತಿಮೆ ಅನಾವರಣ: ಬಡಗಲಪುರ ನಾಗೇಂದ್ರ

ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ:
- ಆರಣ್ಯ ಇಲಾಖೆಯ ಕಿರುಕುಳವನ್ನು ತಪ್ಪಿಸಿ ಸಾಗುವಳಿ ಮಾಡುತ್ತಿರುವ ರೈತರನ್ನು ರಕ್ಷಿಸಬೇಕು. ವನ್ಯಪ್ರಾಣಿ-ಮಾನವ ಸಂಘರ್ಷವನ್ನು ತಡೆಗಟ್ಟಬೇಕು. ವನ್ಯಪ್ರಾಣಿಗಳಿಂದ ಪ್ರಾಣ ಹಾನಿಯಾದ ಕುಟುಂಬಗಳಿಗೆ ₹50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಅಂತಹ ಕುಟುಂಬಕ್ಕೊಂದು ಉದ್ಯೋಗ, ಉಚಿತವಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಬೇಕು ಹಾಗೂ ಆ ಕುಟುಂಬದ ಸಂಪೂರ್ಣ ಸಾಲವನ್ನು ರದ್ದುಪಡಿಸಬೇಕು. ಗಾಯವಾದವರಿಗೆ ಸೂಕ್ತ ಪರಿಹಾರ ನೀಡಬೇಕು.
- ಕೂಡಲೇ, ಖರೀದಿ ಕೇಂದ್ರಗಳನ್ನು ತೆರೆದು ಮೆಕ್ಕೆಜೋಳ ಮತ್ತು ಭತ್ತವನ್ನು ಸಂಪೂರ್ಣವಾಗಿ ಎಂ.ಎಸ್.ಪಿ. ದರದಲ್ಲಿ ಕೊಳ್ಳಬೇಕು.
- ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ಎಲ್ಲಾ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು ಮತ್ತು ನೀರಾವರಿ ನಾಲೆಗಳನ್ನು ಆಧುನೀಕರಿಸಬೇಕು.
- ಮುಂದಿನ ಸಾಲಿನಲ್ಲಿ ಚುಂಚನಕಟ್ಟೆ ಕಾರ್ಖಾನೆಯನ್ನು ಪ್ರಾರಂಭಿಸಿ ಕಬ್ಬು ನುರಿಸಬೇಕು.
- ಕೈಗಾರಿಕಾ ಸ್ಥಾಪಿಸುವುದಾಗಿ ರೈತರ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಬೇನಾಮಿ ಹೆಸರಿನಲ್ಲಿ ಕೊಂಡು ಭೂಮಿಯನ್ನು ದುಭಾರಿ ಬೆಲೆಗೆ ಕೆ.ಐ.ಎ.ಡಿ.ಬಿ.ಗೆ ಕೊಟ್ಟು ಮೈಸೂರು ತಾಲ್ಲೂಕು ಕೋಚನಹಳ್ಳಿ ಗ್ರಾಮದ ರೈತರಿಗೆ ಮೋಸ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು, ಒಪ್ಪಿರುವಂತೆ ಕೆ.ಐ.ಎ.ಡಿ.ಬಿ. ನಿವೇಶನ ಮತ್ತು ಉದ್ಯೋಗವನ್ನು ನೀಡಬೇಕು.
- ನಂಜನಗೂಡು ತಾಲ್ಲೂಕು, ಇಮ್ಮಾವು ಗ್ರಾಮದಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ಸಂಬಂಧ ಸ್ವಾಧೀನಾನುಭವದಲ್ಲಿದ್ದ ರೈತರಿಗೆ ಬಿಡುಗಡೆಯಾಗಿದ್ದ ಎಕ್ಸ್ ಗ್ರೇಷಿಯ ಪರಿಹಾರದ ಹಣ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಜಿಲ್ಲಾಡಳಿತವು ನಡೆಸಿರುವ ತನಿಖಾ ವರದಿ ಅಪೂರ್ಣ ಮತ್ತು ಅಸಮಂಜಸವಾಗಿದ್ದು, ಕೂಡಲೇ ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆ ಆಗಬೇಕು ಹಾಗೂ ನಿಜರೈತರಿಗೆ ಎಕ್ಸ್ ಗ್ರೇಷಿಯ ಪರಿಹಾರ ಪಾವತಿಯಾಗಬೇಕು ಮತ್ತು ಉದ್ಯೋಗ ನೀಡಬೇಕು.
- ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಸತಿ ನಿವೇಶನ ಮತ್ತು ಮನೆ ಕಳೆದುಕೊಂಡಿರುವ ಮರಶೆ ಗ್ರಾಮದ ರೈತ ಕುಟುಂಬಗಳಿಗೆ ಪಠ್ಯಾಯ ನಿವೇಶನವನ್ನು ನೀಡಬೇಕು. ಹೊಸ ರಾಷ್ಟ್ರೀಯ ಹೆದ್ದಾರಿ-275ಕ್ಕೆ ಭೂಮಿ ಕಳೆದುಕೊಂಡಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಪರಿಹಾರ ನೀಡಬೇಕು. ಭೂಮಿ ಕಳೆದುಕೊಂಡ ರೈತರಿಗೆ ಮುಕ್ತ ಮಾರುಕಟ್ಟೆಯಲ್ಲಿ ನಡೆಯುವ ಬೆಲೆ ನಿಗಧಿ ಮಾಡಬೇಕು.
- ಜಿಲ್ಲೆಯ ಕಂದಾಯ ಭೂಮಿಯನ್ನು ಪೈಲೆಟ್ ಪ್ರೋಜೆಕ್ಟ್‌ನ ಅಡಿ ದುರಸ್ಥಿ ಮಾಡಿಸಬೇಕು.
- ಬಗರ್ ಹುಕುಂ ಸಾಗುವಳಿದಾರರು ದರಖಾಸ್ತು ಮಂಜೂರಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪುರಸ್ಕರಿಸಿ ಸಾಗುವಳಿ ಚೀಟಿ ನೀಡಬೇಕು.
- ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳವನ್ನು ತಡೆಗಟ್ಟಲು ಕಾನೂನು ರೂಪಿಸಲಾಗಿದ್ದರು, ಇನ್ನೂ ಕಿರುಕುಳ ಮುಂದುವರೆಯುತ್ತಿದೆ. ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಋಣಮುಕ್ತ ಕಾಯಿದೆಗೆ ಜೀವ ತುಂಬಬೇಕು. ದುಡಿಯುವ ವರ್ಗಕ್ಕೆ ವಿಶೇಷವಾಗಿ ಮಹಿಳೆಯರಿಗೆ ಸರ್ಕಾರಿ ಸಂಸ್ಥೆಯ ಮುಖಾಂತರವೇ ಸಣ್ಣ ಸಾಲದ ವ್ಯವಸ್ಥೆ ಮಾಡಬೇಕು.
- ಮುಂದಿನ ಸಾಲಿನ ರಾಜ್ಯ ಬಡ್ಡೆಟ್ ಸಂಪೂರ್ಣ ರೈತಪರವಾಗಿರಬೇಕು.
- ಭೂ ಸುಧಾರಣೆ ತಿದ್ದುಪಡಿಯ ನಂತರ ಗುಜರಾತ್ ಮೂಲದ ಬಂಡವಾಳಶಾಹಿಗಳು ರಾಜ್ಯದಲ್ಲಿ ಲಂಗು-ಲಗಾಮಿಲ್ಲದೆ ಕೃಷಿ ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದಕ್ಕೆ ತಡೆಒಡ್ಡಬೇಕು, ಅಭಿವೃದ್ಧಿಯ ನೆಪದಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳುತ್ತಿರುವುದನ್ನು ರಾಜ್ಯ ಸರ್ಕಾರ ಕೈಬಿಟ್ಟು ಭೂ ಉಪಯೋಗ ನೀತಿಯನ್ನು ರೂಪಿಸಬೇಕು. ನೈಜ ಸಾರ್ವಜನಿಕ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನಿಗಧಿಪಡಿಸಲು 2013ರ ಭೂ ಸ್ವಾಧೀನ ಕಾಯ್ದೆಯನ್ನು ಕಡ್ಡಾಯಗೊಳಿಸಬೇಕು.
- ಕಾಂಗ್ರೇಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ವಾಪಸ್ಸು ಪಡೆಯಬೇಕು. ಎ.ಪಿ.ಎಂ.ಸಿ. ಕಾಯ್ದೆಯನ್ನು ಮತ್ತಷ್ಟು ರೈತಸ್ನೇಹಿಯಾಗಿ ರೂಪಿಸಬೇಕು. ಜಾನುವಾರು ಹತ್ಯೆ ನಿಷೇದ ಮತ್ತು ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ವಾಪಸ್ಸು ಪಡೆಯಬೇಕು.
- ವಿದ್ಯುತ್ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಹಾಗೂ ಹೊಸ ಸಂಪರ್ಕ ಪಡೆಯಲು ರೈತರೇ ವೆಚ್ಚ ಭರಿಸಬೇಕೆಂಬ ನೀತಿಯನ್ನು ಬದಲಾಯಿಸಿ ಹಳೆ ಪದ್ಧತಿಯನ್ನು ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಆಳವಡಿಸಬಾರದು ಮತ್ತು ಸಂಪರ್ಕವನ್ನು ಕಡಿತ ಮಾಡಬಾರದು. ಕರನಿರಾಕರಣೆ ಚಳುವಳಿಯಲ್ಲಿ ಪಾವತಿಸದ ಗೃಹ ವಿದ್ಯುತ್ ಬಿಲ್ಲನ್ನು ಸಂಪೂರ್ಣ ಮನ್ನಾ ಮಾಡಬೇಕು.
- ನಬಾರ್ಡ್ ಕೃಷಿ ಸಾಲ ಕಡಿತಗೊಳಿಸಿರುವುದರಿಂದ ಶೂನ್ಯ ಮತ್ತು ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದ್ದ ಸಾಲವನ್ನು ರಾಜ್ಯ ಸರ್ಕಾರ ಕಡಿತಗೊಳಿಸದೆ ಮುಂದುವರೆಸಬೇಕು.
- ರಾಜ್ಯ ಸರ್ಕಾರ ಕಬ್ಬಿಗೆ ಎಸ್.ಎ.ಪಿ. (ಸಲಹಾ ಬೆಂಬಲ ಬೆಲೆ) ನೀಡುವ ಕಾನೂನು ಜಾರಿಗೆ ತರಬೇಕು.
- ಕೃಷಿ ಬೆಲೆ ಆಯೋಗವನ್ನು ಶಾಶ್ವತ ಆಯೋಗವನ್ನಾಗಿ ರೂಪಿಸಿ ಅದಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು.
- ಜಿಲ್ಲೆಯ ಸರಗೂರು ಮತ್ತು ಸಾಲಿಗ್ರಾಮ ನೂತನ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕು.






