ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ತಾಲ್ಲೂಕಿನ ಬನ್ನೇನಹಳ್ಳಿ ಬಳಿಯಿರುವ ಕೈಗಾರಿಕಾ ಪ್ರದೇಶದಲ್ಲಿ ಮೆಗಾ ಫುಡ್‌ಪಾರ್ಕ್ ಸಂಸ್ಥೆಯವರು ರೈತರಿಗೆ ಕಿರುಕುಳ ನೀಡುತಿದ್ದು, ರೈತರು ಕೆರೆಗೆ ಹೋಗಲು, ದೇವಸ್ಥಾನಕ್ಕೆ ಹೋಗಲು ಇದ್ದ ರಸ್ತೆಯನ್ನು ಮುಚ್ಚಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆಯನ್ನು ಮುಚ್ಚಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ರಸ್ತೆ ಬಿಟ್ಟು ಕೊಡಬೇಕು. ಕೆರೆ ಕಟ್ಟೆಗಳಿಗೆ ಹೋಗಲು ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು. ರೈತರಿಗೆ ಯಾವುದೇ ಕಿರುಕುಳ ನೀಡಬಾರದು. ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕೈಗಾರಿಕೆಗಳನ್ನು ನಿರ್ಮಾಣ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. 12 ವರ್ಷವಾದರೂ ಕೆಲವೇ ಕೆಲವು ಕೈಗಾರಿಕೆಗಳು ಮಾತ್ರ ಆರಂಭಗೊಂಡಿವೆ. ಗಾರ್ಮೆಂಟ್ಟ್ ನಂತಹ ಕೈಗಾರಿಕೆಗಳನ್ನು ಆರಂಭಿಸಿ ಕನಿಷ್ಠ 25 ಸಾವಿರ ಮಂದಿಗೆ ಉದ್ಯೋಗ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಹೆಗ್ಗಡದೇವನಕೊಟೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ
ಅಕ್ಕಪಕ್ಕದ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡುವುದನ್ನು ನಿಲ್ಲಿಸಬೇಕು. ಕೈಗಾರಿಕೆ ಆರಂಭಿಸುವ ಬದಲು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಮೆಗಾಫುಡ್ ಪಾರ್ಕ್ ವ್ಯವಸ್ಥಾಪಕ ಜಯದೇವ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಕೂಡಲೇ ರಿಯಲ್ ಎಸ್ಟೇಟ್ ವ್ಯವಹಾರ ನಿಲ್ಲಿಸಿ ಹೊಸ ಹೊಸ ಕೈಗಾರಿಕೆಗಳನ್ನು ಆರಂಭಿಸುವತ್ತ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸುತ್ತಮುತ್ತಲ ರೈತರೊಡಗೂಡಿ ಮೆಗಾಫುಡ್ ಪಾರ್ಕ್ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





