ಕೋಲಾರ: ಜಿಲ್ಲೆಯಾದ್ಯಂತ ಅರಣ್ಯ ಇಲಾಖೆಯ ಕಿರುಕುಳದಿಂದ ಭೂಮಿ ಕಳೆದುಕೊಂಡಿರುವ ಸಂತ್ರಸ್ತ ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕೆ.ಪಿ.ಆರ್.ಎಸ್ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಹಿರಿಯ ಮುಖಂಡ ಎಂ.ಗೋಪಾಲ್ ಮಾತನಾಡಿ ಜಿಲ್ಲಾ ಅರಣ್ಯಾಧಿಕಾರಿ ಕಂದಾಯ, ಗೋಮಾಳ ಜಮೀನುಗಳನ್ನು ಅಧಿಸೂಚನೆ ನೆಪದಲ್ಲಿ ಪೊಲೀಸ್ ನೆರವಿನೊಂದಿಗೆ ರಾತ್ರೋ-ರಾತ್ರಿ ರೈತರ ಜಮೀನುಗಳಲ್ಲಿ ೧.೫೦ ಲಕ್ಷಕ್ಕಿಂತ ಹೆಚ್ಚು ಮಾವಿನ ಮರಗಳು ತೆಂಗಿನ ಮರಗಳು ಹಾಗೂ ವಿವಿಧ ಜಾತಿಯ ಬೆಲೆ ಬಾಳುವ ಮರಗಳು ಮತ್ತು ತೋಟಗಾರಿಕೆ ಬೆಳೆಗಳು ಜೊತೆಗೆ ಹನಿ ನೀರಾವರಿ ಬೋರ್ ವೆಲ್‌ಗಳು ನೆಟ್ ಹೌಸ್‌ಗಳು ಕಾಂಪೌಂಡ್‌ಗಳನ್ನು ಜೆ.ಸಿ.ಬಿ ಯಂತ್ರಗಳನ್ನು ಬಳಸಿ ದ್ವಂಸ ಮಾಡಿದ್ದಾರೆ ಇದರ ಹೊಣೆಯನ್ನು ಅರಣ್ಯ ಇಲಾಖೆ ಹೊರಬೇಕು ರೈತರಿಗೆ ಪರಿಹಾರವನ್ನು ಕೂಡಲೇ ನೀಡುವಂತೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಸ್ವಾತಂತ್ರ‍್ಯ ಪೂರ್ವದಲ್ಲಿ ಅಧಿಸೂಚನೆಯಾದ ಕಿರು ಅರಣ್ಯ, ಗ್ರಾಮ ಅರಣ್ಯ ಇತ್ಯಾದಿ ಆದೇಶವಿದ್ದರೂ ಅರಣ್ಯ ಅಧಿಕಾರಿಗಳು ಈ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಜಿಲ್ಲಾಧಿಕಾರಿ ಈ ಕಂದಾಯ ಭೂಮಿಗಳನ್ನು ಆಹಾರ ಅಭಾವ ನೀಗಿಸಲು ಅಂದಿನ ಮಹಾರಾಜರ ಆದೇಶದ ಮೇರೆಗೆ ಸಕ್ಷಮ ಪ್ರಾಧಿಕಾರದಲ್ಲಿ ಕಾನೂನು ಬದ್ಧವಾಗಿ ರೈತರಿಗೆ ಕಂದಾಯ ಗೋಮಾಳದಲ್ಲಿ ಜಮೀನು ಮಂಜೂರಾತಿ ನೀಡಿದ್ದಾರೆ. ಅದರಂತೆ ನೂರಾರು ವರ್ಷಗಳಿಂದ ರೈತರು ವ್ಯವಸಾಯ ಮಾಡಿಕೊಂಡು ಜೀವನೋಪಾಯ ಮಾಡುತ್ತಿದ್ದಾರೆ ಈ ಅಧಿಸೂಚನೆಗಳು ಹಾಗೇ ಇದ್ದು ಅರಣ್ಯ ಇಲಾಖೆಯವರು ಅದನ್ನೇ ನೆಪ ಮಾಡಿಕೊಂಡು ಕಂದಾಯ ಇಲಾಖೆಯಲ್ಲಿ ಮಂಜೂರಾಗಿರುವ ರೈತರ ಗೋಮಾಳ ಹಾಗೂ ಹಿಡುವಳಿ ಜಮೀನುಗಳನ್ನು ಅರಣ್ಯಭೂಮಿ ಎಂದು ತಪ್ಪಾಗಿ ಅರ್ಥೈಸಿ ಒತ್ತುವರಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಭೂ ಕಬಳಿಕೆ ಮಾಡುತ್ತಿದ್ದು ಇದನ್ನು ತಡೆಯಲು ಆದೇಶ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಆರ್.ಶ್ರೀನಿವಾಸನ್ ಮಾತನಾಡಿ ಅರಣ್ಯ ಕಾಯಿದೆಗಳು, ಸುಪ್ರೀಮ್ ಕೋರ್ಟ್ ತೀರ್ಪುಗಳು ಮೂಲ ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಯಾವುದೇ ಕಂದಾಯ, ಗೋಮಾಳ ಜಮೀನುಗಳಿಗೆ ಹಾಗೂ ರೈತರ ಹಿಡುವಳಿ ಜಮೀನುಗಳಿಗೆ ಸಂಬಂಧವಿಲ್ಲ ಹಾಗೂ ಎಸ್.ಐ.ಟಿ ವ್ಯಾಪ್ತಿಗೂ ಸಹ ಬರುವುದಿಲ್ಲ. ಆದರೂ ಅರಣ್ಯ ಇಲಾಖೆಯವರು ಅನವಶ್ಯಕವಾಗಿ ಕಂದಾಯ ಅಧಿಕಾರಿಗಳನ್ನು ಹಾಗೂ ರೈತರನ್ನು ದಿಕ್ಕುತಪ್ಪಿಸುತ್ತಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರೈತರ ಕಂದಾಯ ಗೋಮಾಳ ಜಮೀನುಗಳಿಗೆ ಹೋಗದಂತೆ ಸೂಕ್ತ ಆದೇಶ ನೀಡಬೇಕು ಎಂದರು
ಈ ಸಂದರ್ಭದಲ್ಲಿ ಅಬ್ಬಣಿ ಶಿವಪ್ಪ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಗೋಮಾಳ ಕಂದಾಯ ಜಮೀನುಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಾನೂನು ಬದ್ಧವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಇತರೆ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ರೈತರಿಗೆ ಜಮೀನುಗಳನ್ನು ನೀಡಿದ್ದು ಅರಣ್ಯ ಅಧಿಕಾರಿಗಳ ಸೂಚನೆಯ ಮೃರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಬಾಹಿರವಾಗಿ ೨೦೨೧-೨೨ರಲ್ಲಿ ಸರ್ಕಾರಿ ಗೋಮಾಳ ಜಮೀನುಗಳನ್ನು ಫಹಣಿ ಕಲಂ ೯ರಲ್ಲಿ ಅರಣ್ಯ ಎಂದು ಇಂಡೀಕರಿಸಲಾಗಿದೆ. ಇದು ಕಾನೂನು ಬಾಹಿರವಾಗಿವುದರಿಂದ ಈ ತಕ್ಷಣ ಇವುಗಳನ್ನು ತೆಗೆಯಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಬೇಕು. ಮುಂದೆ ಯಾವುದೇ ಕಂದಾಯ ಭೂಮಿಯಲ್ಲಿ ಅರಣ್ಯ ಎಂದು ಇಂಡೀಕರಿಸದಿರಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು ಎಂದರು
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ಮಾತನಾಡಿ ಅರಣ್ಯ ಇಲಾಖೆಯವರು ಫಾರೆಸ್ಟ್ ಸೆಂಟಲ್‌ಮೆಂಟ್ ಪ್ರತಿಯನ್ನು ಯಾರಿಗೂ ತೋರಿಸದೆ ಕಿರು ಅರಣ್ಯ ನೋಟಿಫಿಕೇನ್ ತೋರಿಸಿ ರೈತರ ಜಮೀನುಗಳನ್ನು ಒತ್ತುವರಿ ಹೆಸರಿನಲ್ಲಿ ನಾಶ ಪಡಿಸುತ್ತಿದ್ದಾರೆ ಎಸ್.ಐ.ಟಿ. ರಚನೆಯಾಗಿದ್ದರೂ ಅರಣ್ಯ ಇಲಾಖೆಯವರು ಒತ್ತುವರಿ ಹೆಸರಿನಲ್ಲಿ ವಿನಾ ಕಾರಣ ರೈತರ ಕಂದಾಯ ಗೋಮಾಳ ಜಮೀನುಗಳಲ್ಲಿ ಅತಿಕ್ರಮಣ ಮಾಡಿ ದೌರ್ಜನ್ಯದಿಂದ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈ ದೌರ್ಜನ್ಯವನ್ನು ತಡೆಯಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್ ರವಿ ಮಾತನಾಡಿ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬಾರದು ಎಂದು ಆದೇಶ ಮಾಡಲಾಗಿದೆ ತೊಂದರೆ ಕೊಟ್ಟರೆ ನನಗೆ ದೂರು ಕೊಡಿ ನಿಮ್ಮ ಮನವಿ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.
ಇದನ್ನು ಓದಿದ್ದೀರಾ..? ವಿಬಿ ಗ್ರಾಮ ಜಿ ಯೋಜನೆ ಸಂಪೂರ್ಣ ಉಪಯೋಗಕ್ಕೆ ಬಾರದಾಗಿದೆ:ಸಚಿವ ಡಾ.ಎಂ.ಸಿ.ಸುಧಾಕರ್
ಈ ಸಂದರ್ಭದಲ್ಲಿ ಮುಖಂಡರಾದ ಟಿ.ಎಂ ವೆಂಕಟೇಶ್, ಪಿ.ಆರ್ ನವೀನ್ ಕುಮಾರ್, ಹರಟಿ ಪ್ರಕಾಶ್, ಗೋವಿಂದಪ್ಪ, ಲೋಕೇಶ್, ಮಂಜುನಾಥ್, ಗಂಗಮ್ಮ, ನಾರಾಯಣರೆಡ್ಡಿ, ರಾಮಕೃಷ್ಣಪ್ಪ, ನಯಾಜ್, ಲಾಯರ್ ವೆಂಕಟೇಶ್, ಶ್ರೀನಿವಾಸ್, ಮಂಜುಳಾ ಮುಂತಾದವರು ಇದ್ದರು.





