ಉದ್ಯೋಗ ಸಂಪಾದನೆಯ ವೃತ್ತಿಗೆ ಮತ್ತೊಂದು ಮಹತ್ವದ ದಾರಿ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಆರ್ಥಿಕ ಪ್ರಜ್ಞೆ ಮತ್ತು ಸಮಾಜದ ಭದ್ರತೆಗೆ ದಾರಿಯಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ಬಿ.ವಿ. ಶ್ರೀನಿವಾಸ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ವತಿಯಿಂದ ಹಮ್ಮಿಕೊಂಡಿದ್ದ ‘ವೈಯಕ್ತಿಕ ಹಣಕಾಸಿನ ನಿರ್ವಹಣೆ’ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಮಹಿಳೆಯರು ಹೆಚ್ಚಾಗಿ ವೈಯಕ್ತಿಕ ಆರ್ಥಿಕ ನಿರ್ವಹಣೆಗೆ ಒಲವು ತೋರಬೇಕು. ಗಳಿಕೆ ಜೊತೆಗೆ ಉಳಿತಾಯದಿಂದ ಆರ್ಥಿಕತೆಯ ಸುಧಾರಣೆ ಸಾಧ್ಯ’ ಎಂದರು.
‘ವರಮಾನ ಯಾವುದೇ ಮೂಲದಿಂದ ಬಂದರೂ ಯಾವ ಕ್ಷೇತ್ರದಲ್ಲಿ ಹುಡಿಕೆ ಮಾಡಬೇಕೆಂಬ ಜ್ಞಾನ ಮುಖ್ಯ. ಉಳಿತಾಯ ಮತ್ತು ಹೂಡಿಕೆಗಳಲ್ಲಿ ಹೆಚ್ಚು ವ್ಯತ್ಯಾಸವಾದರೆ ಆರ್ಥಿಕ ಅಪಾಯ ಎದುರಾಗುತ್ತದೆ. ನಮಗೆ ನಾವೇ ಅರ್ಥೈಸಿಕೊಂಡು ಮಾಡುವ ಪರ್ಸನಲ್ ಫೈನಾನ್ಸ್ ಜೀವನದ ಪ್ರಧಾನ ಅಂಶವಾಗಿದೆ. ಹೂಡಿಕೆಯ ಪ್ರಜ್ಞೆಯಿಂದಲೂ ವೈಯಕ್ತಿಕ ಆರ್ಥಿಕತೆ ಸುಧಾರಣೆ ಸಾಧ್ಯ’ ಎಂದರು.
ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ವಿರುಪಾಕ್ಷ ಮಾತನಾಡಿ, ‘ಪರ್ಸನಲ್ ಫೈನಾನ್ಸ್ ಹೊರದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಓದುತ್ತಾರೆ. ಹಣದ ಉಳಿತಾಯಕ್ಕೆ ಹಲವು ದಾರಿಗಳಿವೆ. ಆರ್ಥಿಕ ಮೌಲ್ಯದ ಬಗ್ಗೆ ಹೆಚ್ಚು ಒತ್ತು ನೀಡುವ ಮೂಲಕ ವೈಯಕ್ತಿಕ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಿಗರು ಹೆಚ್ಚು ಸೇರಬೇಕಾಗಿದೆ. ಭಾರತೀಯ ಸ್ವಾಯತ್ತು ಸಂಸ್ಥೆಯಲ್ಲಿ ಹಲವು ಹುದ್ದೆಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿ’ ಎಂದು ಸಲಹೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ‘ಹಣದ ಅವಶ್ಯಕತೆ ಎಲ್ಲರಿಗೂ ಇದೆ. ಅದರ ಗಳಿಕೆ ಎಷ್ಟು ಮುಖ್ಯವೋ ಉಳಿತಾಯವೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಅನಾವಶ್ಯಕ ಖರ್ಚು ಮಾಡದೇ ಪೋಷಕರು ನೀಡಿದ ಹಣವನ್ನು ಉಳಿಸುವ ಪ್ರಯತ್ನ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ‘ಆರ್ಥಿಕ ಪ್ರಜ್ಞೆವೆಂಬುವುದು ವ್ಯವಹಾರ ಜ್ಞಾನ ಮತ್ತು ಲೋಕಜ್ಞಾನವಾಗಿರುತ್ತದೆ. ಪ್ರತಿಯೊಬ್ಬರ ಕೆಲಸಕ್ಕೂ ಸಮಾಜದಲ್ಲಿ ಒಂದು ಮೌಲ್ಯವಿರುತ್ತದೆ. ಕೃಷಿಕರ, ಜನಪರ, ಮನುಷ್ಯತ್ವದ ಪರವಾದ ಆರ್ಥಿಕ ನೀತಿಗಳು ಜನರ ಬದುಕನ್ನು ಸುಧಾರಿಸುತ್ತವೆ. ಹಣದ ಜತೆಗೆ ಅದರ ವಿನಿಮಯದ ಬಗ್ಗೆ ವಿವೇಕ ಮತ್ತು ಪ್ರಜ್ಞೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು.
‘ವಚನಕಾರರ ಆರ್ಥಿಕ ಚಿಂತನೆ ಅದೇಷ್ಟು ಪ್ರಸ್ತುತವೆಂದರೆ, ಹಣ-ಸಂಪತ್ತಿನ ಹೆಚ್ಚು ಕ್ರೋಢಿಕರಣವೂ ಮತ್ತು ಹಣ ಇಲ್ಲದೇ ಇರುವ ಸ್ಥಿತಿಯೂ ಇವೆರಡು ನೆಮ್ಮದಿ ಕೆಡಿಸುವ ಸಂಗತಿಗಳಾಗಿವೆ. ಆರ್ಥಿಕ ಅಗತ್ಯತೆ ಹಣದ ಗಳಿಕೆ – ಬಳಕೆ ಬಗ್ಗೆ ವಚನಕಾರರ ಆರ್ಥಿಕ ಚಿಂತನೆಯಲ್ಲಿ ಅಡಕವಾಗಿದೆ. ಶರಣರ ಆರ್ಥಿಕ ಚಿಂತನೆ ಎಲ್ಲ ಕಾಲದಲ್ಲೂ ಪ್ರಸ್ತುತ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ; ಕಾನ್‌ಸ್ಟೇಬಲ್ ಅಮಾನತು
ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀಶೈಲ್, ರೋಶನ್ ಬಿ, ವಿವೇಕಾನಂದ ಶಿಂಧೆ, ಚನ್ನಬಸಪ್ಪ ಗೌರ, ಜಗದೇವಿ ಜವಳಗೆ, ಡಾ. ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪೂರೆ, ಗುರುದೇವಿ ಕಿಚಡೆ, ಸಚಿನ ಬಿಡವೆ, ಪ್ರಶಾಂತ ಬುಡಗೆ ಮೊದಲಾದವರಿದ್ದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಸಂಗೀತಾ ಮಹಾಗಾಂವೆ ನಿರೂಪಿಸಿದರು. ಡಾ.ಶಾಂತಲಾ ಪಾಟೀಲ ವಂದಿಸಿದರು.





