ಮೀನು ಮಾರಾಟ ಫೆಡರೇಶನ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಬಂದರು ಇಲಾಖೆಯ ಮಲ್ಪೆಯ 9 ಎಕರೆ ಜಾಗವನ್ನು ಕೂಡಲೇ ವಾಪಸು ಪಡೆಯಬೇಕೆಂದು ಮಲ್ಪೆ ಹನುಮಾನ್ ನಗರದ ಶ್ರೀ ಹನುಮಾನ್ ವಿಠೋಬಾ ಭಜನಾ ಮಂದಿರದ ಸದಸ್ಯರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಹೋರಾಟಕ್ಕೂ ಮುಂದಾಗುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ಬಗ್ಗೆ ಇಂದು ಮಲ್ಪೆಯ ಶ್ರೀ ಹನುಮಾನ್ ವಿಠೋಬಾ ಭಜನಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂದಿರದ ಪ್ರಮುಖರದಾದ ಧನಂಜಯ ಕಾಂಚನ್, ಮಲ್ಪೆ ಸೀವಾಕ್ ಜಟ್ಟಿಯಿಂದ ಬಾಲಕರ ಶ್ರೀರಾಮ ಭಜನಾ ಮಂದಿರವರೆಗೆ ಹರಡಿರುವ 9 ಎಕರೆ ಜಾಗವನ್ನು ಫೆಡರೇಶನ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಆದರೆ ಫೆಡರೇಶನ್ ತಮ್ಮ ಆಡಳಿತ ಮಂಡಳಿಯೊಡನೆ ಯಾವುದೇ ಚರ್ಚೆ ನಡೆಸದೆ, ಕೇವಲ ಶಾಸಕ ಯಶ್ಪಾಲ್ ಸುವರ್ಣ ಅವರ ಸ್ವಹಿತಾಸಕ್ತಿಯಿಂದ ಈ ಜಾಗವನ್ನು ಪಡೆದಿದ್ದಾರೆ. ಜಾಗವನ್ನು ಮೀನುಗಾರಿಕೆ ಚಟುವಟಿಕೆಯ ಹೆಸರಿನಲ್ಲಿ ಪಡೆದುಕೊಂಡರೂ, ವಾಸ್ತವದಲ್ಲಿ ಇಲ್ಲಿ ಜಲಕ್ರೀಡೆ, ಹೋಮ್ ಸ್ಟೇ ಮುಂತಾದ ವಾಣಿಜ್ಯ ಚಟುವಟಿಕೆ ನಡೆಸುವ ಪ್ಲಾನ್ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ.

ಈ ಕುರಿತು ಐದು ಭಜನಾ ಮಂದಿರಗಳ ಸದಸ್ಯರು ಸಹ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಶಾಸಕರನ್ನು ಸಂಪರ್ಕಿಸಿದಾಗ, ಮಂದಿರಕ್ಕೆ ತೊಂದರೆ ಆಗುವುದರಿಂದ ಯೋಜನೆಯನ್ನು ಕೈಬಿಡಲು ಸಿದ್ಧ ಎಂದು ಅವರು ಹೇಳಿಕೆ ನೀಡಿದ್ದರು. ಆದರೆ ಇತ್ತೀಚೆಗೆ ಅವರು ಹನುಮಾನ್ ವಿಠೋಬಾ ಮಂದಿರದ ಎದುರಿನ ಜಾಗವನ್ನು ಮಾತ್ರ ಬಿಟ್ಟು ಉಳಿದ ಪ್ರದೇಶವನ್ನು ಪಡೆಯುವ ಬಗ್ಗೆ ಹೊಸ ಹೇಳಿಕೆ ನೀಡಿದ್ದಾರೆ. ನಮ್ಮ ಆಗ್ರಹ ಕೇವಲ ಎದುರಿನ ಜಾಗಕ್ಕೆ ಮಾತ್ರ ಸೀಮಿತವಲ್ಲ. ಸಂಪೂರ್ಣ 9 ಎಕರೆ ಜಾಗದ ಗುತ್ತಿಗೆ ಆದೇಶವನ್ನು ರದ್ದುಪಡಿಸಲೇಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಮಂದಿರದ ಸದಸ್ಯರು ಬೇಡಿಕೆಯನ್ನು ತಕ್ಷಣ ಅಂಗೀಕರಿಸುವಂತೆ ಸಂಬಂಧಿತ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದು, ನಿರಾಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ಸಿದ್ದ ಎಂದು ಎಚ್ಚರಿಸಿದ್ದರು.
ಪತ್ರಿಕಾಗೋಷ್ಟಿಯಲ್ಲಿ ಮಂದಿರದ ಅಧ್ಯಕ್ಷರಾದ ಸತೀಶ್ ಬಂಗೇರ, ಪ್ರಮುಖರಾದ ಸುರೇಶ್ ಸಾಲ್ಯಾನ್, ಶೇಖರ್ ಪುತ್ರನ್, ವಿಜಯ ಸುವರ್ಣ, ಸುಂದರ್ ಸಾಲ್ಯಾನ್, ತುಕರಾಂ ಮೈಂದನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಕಾಂಚನ್ ಉಪಸ್ಥಿತರಿದ್ದರು.





