ಘನತೆಯ ಬದುಕಿಗಾಗಿ, ಸ್ವಾವಲಂಬಿ ಬೇಸಾಯದತ್ತ ಮುಖ ಮಾಡೋಣ

Date:

ಸಾಲವೆಂಬ ಶೂಲ ರೈತರ ಬದುಕನ್ನು ಸೀಳುತ್ತಿರುವ ಈ ಹೊತ್ತಿನಲ್ಲಿ ಘನತೆಯ ಬದುಕಿಗಾಗಿ, ಸ್ವಾವಲಂಬಿ ಬೇಸಾಯದತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಮಧ್ಯವರ್ತಿಗಳನ್ನೇ ಅವಲಂಬಿಸಬೇಕಾಗಿರುವ ವ್ಯವಸ್ಥೆಯಿಂದ ಹೊರಬಂದು ರೈತರು ಸ್ವತಃ ಸ್ವಾವಲಂಬಿಗಳಾಗಬೇಕಿದೆ. ಒಳ ಸೇರುವ ಆಹಾರದಿಂದಲೇ ಮನುಷ್ಯ ರೋಗಿಷ್ಠನಾಗುತ್ತಿರುವ ಪ್ರಸ್ತುತ ವಿದ್ಯಮಾನದಲ್ಲಿ ಸಾಧ್ಯವಾದಷ್ಟು ರೋಗಮುಕ್ತ ಬೆಳೆಗಳನ್ನು ಬೆಳೆಯುವುದರ ಮೂಲಕ ಕೃಷಿಯಲ್ಲಿ ಹೊಸ ಮಾರ್ಗ ಕಂಡುಕೊಳ್ಳಬೇಕಿದೆ.

ರೈತರು ದುಡ್ಡು ಕೊಟ್ಟು ಹೊರಗಿನಿಂದ ಏನನ್ನೂ ಖರೀದಿಸದೆ, ಬೀಜ, ಗೊಬ್ಬರ, ಜೀವಾಮೃತದಿಂದ ಹಿಡಿದು ಪರಿಸರಕ್ಕೆ ಪೂರಕವಾದ ಕೃಷಿಯ ಅಗತ್ಯತೆಗಳನ್ನು ರೈತನೇ ತಯಾರಿಸಿಕೊಳ್ಳಬೇಕು. ಲಾಭದಾಯಕ ಕೃಷಿಗೆ ಒತ್ತು ಕೊಟ್ಟು ಅದೇ ಸಮಯದಲ್ಲಿ ಆರೋಗ್ಯಕರ ಬೆಳೆ ಬೆಳೆಯುವಂತಾಗಬೇಕು. ರಸಗೊಬ್ಬರ, ರಾಸಾಯನಿಕ ಬಳಸದೆ ಕೃಷಿ ಮಾಡಲು ಸಾಧ್ಯವೇ ಇಲ್ಲ ಎನ್ನುವುದು ಹಲವರ ವಾದ. ಆದರೆ ಖಂಡಿತ ಸಾಧ್ಯವಿದೆ. ಯಾವುದೇ ರಸಗೊಬ್ಬರ, ರಾಸಾಯನಿಕ ಬಳಸದೆ ಕೃಷಿ ಮಾಡಬಹುದು. ಅದನ್ನ ಮಾಡಿ ತೋರಿಸಿರುವ ಸಾಧಕರು ನಮ್ಮ ನಡುವೆಯೇ ಇದ್ದಾರೆ. ಹುಟ್ಟಿನಿಂದಲೇ ನೆಲದೊಂದಿಗೆ ಸಂಬಂಧ ಹೊಂದಿದ ಅಪ್ಪಟ ರೈತರು, ಉನ್ನತ ವ್ಯಾಸಂಗ ಮಾಡಿ ಉದ್ಯೋಗದಿಂದ ಬೇಸತ್ತವರು ಕೃಷಿಯೆಡೆಗೆ ಮುಖ ಮಾಡಿರುವವರು ಬಹುತೇಕ ಮಂದಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಅಂತವರಿಂದಲೇ ಅವರ ಅನುಭವಗಳನ್ನು ಕೇಳಿ, ಅವರಿಂದಲೇ ಪರಿಹಾರ ಕಂಡುಕೊಳ್ಳುವುದು ಸುಲುಭೋಪಾಯ.

image 2026 01 02T112815.109

“ಪೂರ್ವಜರು ಹಿಂದೆಲ್ಲಾ ವ್ಯವಸಾಯ ಮಾಡಿಕೊಂಡೇ ಜೀವನಕಟ್ಟಿದ್ದು. ಸಮೃದ್ಧವಾಗಿ ಬೆಳೆದು ಸಾಲವಿಲ್ಲದ ರೀತಿಯಲ್ಲಿ ಘನತೆಯಿಂದ ಬಾಳಿದರು. ಆದರೆ, ಬದಲಾದ ಪರಿಸ್ಥಿತಿ ರಾಸಾಯನಿಕ, ರಸಗೊಬ್ಬರ ಎಲ್ಲದಕ್ಕೂ ರೈತ ಅವಲಂಬಿಯಾಗಿರುವುದು ಕೃಷಿಯನ್ನು ದುಬಾರಿ ಎನಿಸುವಂತೆ ಮಾಡಿದೆ. ‘ಕೃಷಿ ಎಂದರೆ ಸಾಲ’ ಎನ್ನುವ ಹಂತಕ್ಕೆ ಬಂದು ನಿಂತಿದೆ. ‘ಸಾಲ ಮಾಡದೆ ಕೃಷಿ ಮಾಡಲಾರ, ಮಾಡಿದ ಕೃಷಿ ಕೈ ಹಿಡಿಯದಿದ್ದರೆ ಸಾಲ ತೀರಿಸಲಾರ, ಸಾಲ ತೀರದಿದ್ದರೆ ಬದುಕಲಾರ’ ಎನ್ನುವ ಪರಿಸ್ಥಿತಿಯಲ್ಲಿ ಕೃಷಿಕರು ಇದ್ದಾರೆ. ಇದರಿಂದಾಗಿಯೇ, ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಲದ ಆತಂಕ, ಕೃಷಿಗೆ ಬೆಂಬಲ ಬೆಲೆ ಇರದೆ ಒಕ್ಕಲುತನದಿಂದ ಹಿಮ್ಮುಖರಾಗುತ್ತಿದ್ದಾರೆ. ಯುವಕರಂತೂ ಕೃಷಿ ಕಡೆಗೆ ಮುಖ ಮಾಡುತ್ತಿಲ್ಲ. ಅಲ್ಲದೇ ಗ್ರಾಮೀಣ ಮಂದಿ ಕೃಷಿ ಬಿಟ್ಟು ಸಿಟಿ ಸೇರುತ್ತಿದ್ದಾರೆ. ರೈತಾಪಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎನ್ನುವ ಸತ್ಯವನ್ನು ಮರೆಯುವಂತಿಲ್ಲ. ಮುಂದಿನ ದಿನಗಳ್ಲಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದು ಸುಳ್ಳಲ್ಲ.

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ಕೃಷಿ ಕುರಿತ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಸಲುವಾಗಿ, ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಸಹಯೋಗದಲ್ಲಿ ಪದ್ಮಶ್ರೀ ಡಾ. ಸುಭಾಷ್ ಪಾಳೇಕಾರ್ ಅವರ ನೇತೃತ್ವದಲ್ಲಿ ಇದೇ ಜನವರಿ 3 ರಿಂದ 6ರ ವರೆಗೆ, 4 ದಿನಗಳ ಕಾಲ ʼಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ (ನೈಸರ್ಗಿಕ ಕೃಷಿ) ಕಾರ್ಯಾಗಾರʼ ನಡೆಯಲಿದೆ. (ಶ್ರೀಕ್ಷೇತ್ರ ಪುಷ್ಪಗಿರಿ, ಹಳೇಬೀಡು, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ)

“ಹಿರಿಯರು ನಮಗಂತಲೇ ಉಳಿಸಿರುವ ಭೂಮಿಯಲ್ಲಿ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅನೇಕಾನೇಕ ಅವಕಾಶಗಳಿವೆ. ಅವುಗಳನ್ನು ಕಂಡುಕೊಳ್ಳಬೇಕಿದೆ. ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಿದೆ. ಅದರಲ್ಲಿ, ಪ್ರಮುಖವಾಗಿ ಬೆಳೆ ಪದ್ಧತಿಯಲ್ಲಿನ ಬದಲಾವಣೆ. ಈಗೇನು ಏಕ ಬೆಳೆಗೆ ಮಾರುಹೋಗಿ ಕೈಸುಟ್ಟುಕೊಳ್ಳುವುದು ಆಗುತ್ತಿದೆಯೋ ಅದು ಮೊದಲಿಗೆ ನಿಲ್ಲಬೇಕು. ಹಿರಿಯರು ಅನುಸರಿಸುತಿದ್ದ ಬಹು ಬೆಳೆಗೆ ತಮ್ಮನ್ನ ತಾವು ಒಗ್ಗಿಸಿಕೊಳ್ಳುವ ಮೂಲಕ, ಹಳೇ ಪದ್ಧತಿ ಕಡೆಗೆ ಮರಳಬೇಕಿದೆ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಒಗ್ಗಿರುವ ಬಿತ್ತನೆ, ನಾಟಿ ಬಿತ್ತನೆ ಬೀಜ ಸಂರಕ್ಷಿಸಬೇಕು. ಇದರಿಂದ, ಸ್ವಾವಲಂಬಿ ಕೃಷಿಗೆ ಒತ್ತು ಕೊಡಲು ಸಾಧ್ಯ. ಇನ್ನಿತರೆ ರೈತರಿಗೂ ಹಂಚಿ ಸ್ವಾವಲಂಬಿಗಳಾಗಲು ಮಾದರಿಯಾಗುವ ಪ್ರಯತ್ನಕ್ಕೆ ಪುಷ್ಠಿ ನೀಡಬಹುದು. ನೈಸರ್ಗಿಕ ಕೃಷಿಯಲ್ಲಿ ಬೀಜ ಸಂಗ್ರಹ ಪ್ರಮುಖ ಪಾತ್ರ ವಹಿಸುತ್ತದೆ. ನಾಟಿ ಹಸು ಸಾಕಾಣಿಕೆಯಿಂದ ಸಗಣಿ, ಗಂಜಲ ಸಂಗ್ರಹಿಸಿ ಉತ್ತಮವಾದ ಜೀವಾಮೃತ, ಬೀಜಾಮೃತ ತಯಾರಿಸಿಕೊಳ್ಳಲು ಮುಂದಾಗುವುದು, ಅದರ ಮಹತ್ವ ಅರಿತುಕೊಳ್ಳುವುದು ಬಹುಮುಖ್ಯ. ನಾವೇ ರಾಸಾಯನಿಕ ಮುಕ್ತ ಕೀಟನಾಶಕ ಸಿದ್ದಪಡಿಸಿ ಸಿಂಪಡಿಸುವುದರಿಂದ ಪರಿಸರ ಸ್ನೇಹಿಯಾಗಿ, ಆರ್ಥಿಕ ಹೊರೆಯಿಂದ ಹೊರಬರಬಹುದು” ಎಂದು ವಿವರಿಸಿದರು.

“ರೈತರು ಬೆಳೆದ ಬೆಳೆಯನ್ನು ದಲ್ಲಾಳಿಗಳಿಗೆ ಮಾರುವುದನ್ನು ತಪ್ಪಿಸಬೇಕಿದೆ. ಮೌಲ್ಯವರ್ಧನೆ ಮಾಡಿ ಸಹಕಾರಿ ಮಾದರಿಯಲ್ಲಿ ಮಾರುಕಟ್ಟೆ ಸೃಷ್ಟಿಸುವ ಮೂಲಕ ಕಚ್ಚಾ ವಸ್ತುಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇದರಿಂದ, ನೇರವಾಗಿ ರೈತ ಆದಾಯ ಕಾಣಬಹುದು. ರೈತನಿಂದ ನೇರ ಖರೀದಿ ಆರ್ಥಿಕವಾಗಿ ಸದೃಢತೆ ಹೆಚ್ಚಿಸಲಿದೆ, ರೈತ ಸಾಲಗಾರನಾಗುವುದು ತಪ್ಪಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಭೂಮಿ ಇದ್ದರೂ, ಆಹಾರದ ಮೂಲವಾಗಿ ಹೊರಗಿನಿಂದ ತರುವುದು ತಪ್ಪಿಲ್ಲ. ನಮಗೆ, ನಮ್ಮ ಮನೆಗೆ ಬೇಕಾದ ಆಹಾರ ಸಾಮಾಗ್ರಿ ನಾವೇ ಬೆಳೆದುಕೊಂಡು ನಮ್ಮವರ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ, ನಮ್ಮ ಸುತ್ತಲಿನವರ ಹಿತವನ್ನು ಕಾಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಪ್ರೊ. ರವಿಕುಮಾರ್ ವರ್ಮಾ ಮಾತನಾಡಿ, “ರೈತರಿಗೆ ಕೃಷಿಯಲ್ಲಿ ಅನೇಕ ಅನುಭವಗಳಾಗಿರುತ್ತದೆ. ಅದರಲ್ಲಿ, ಹಣ ಖರ್ಚು ಮಾಡದೆ ವ್ಯವಸಾಯ ಮಾಡುವುದೂ ಒಂದು. ಸರಳ, ಸುಸ್ಥಿರ ಬೇಸಾಯ ಬೇಕೆ? ಬೆಳೆಯುವ ಆಹಾರ ವಿಶಮುಕ್ತವಾಗಿ ಇರಬೇಕೆ?.. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ಪದ್ಮಶ್ರೀ ಪುರಸ್ಕೃತ ಸುಭಾಷ್ ಪಾಳೇಕಾರ್ ಅವರು ನೀಡಲಿದ್ದಾರೆ. ನಾಲ್ಕು ದಿನಗಳ ಸುದೀರ್ಘ ಕಾರ್ಯಾಗಾರದಲ್ಲಿ ಮಾಹಿತಿ, ಅನುಭವ ಹಂಚಿಕೆಯಾಗಲಿದೆ. ಇದು ಬಹಳ ಮುಖ್ಯವಾದ ರೈತಪರ ವೇದಿಕೆ. ತುಮಕೂರಿನಲ್ಲಿ ಈ ಹಿಂದೆ ಎರಡು ಬಾರಿ ಇಂತಹದ್ದೇ ಕಾರ್ಯಾಗಾರ ಆಯೋಜನೆ ಮಾಡಿದ್ದೆ. ಇದರ ಪ್ರಯೋಜನ ಪಡೆದ ನೂರಾರು ರೈತರು ಸಾಲಬಾಧೆಯಿಂದ ಮುಕ್ತರಾಗಿ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಇತರೆ ರೈತರಿಗೂ ಹೇಳಿಕೊಡುವ ಮಟ್ಟಿಗೆ ಮುಂದಾಗಿದ್ದಾರೆ. ಇದು ಆಶದಾಯಕ ಬೆಳವಣಿಗೆ. ಇದೇ ಕಾರಣಕ್ಕೆ ತಪ್ಪದೇ ರೈತರು ಭಾಗಿಯಾಗಬೇಕು, ವಿಷಯ ಮನನ ಮಾಡಬೇಕು. ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಆಶಿಸಿದರು.

“ರೈತನಿಗೆ ಒದಗಿಬಂದಿರುವ ಆಪತ್ತಿನಿಂದ ಹೊರ ಬರಲು ಸ್ವಾವಲಂಬಿ ಕೃಷಿ ಮಾದರಿಯಾಗಬೇಕು. ಇದಕ್ಕೆ ಪೂರಕವಾಗಿ ಕಾರ್ಯಾಗಾರ ಆಯೋಜನೆಯಾಗಿದೆ. ಅನುಭವಿ, ದೇಶದಲ್ಲಿ ಮನೆ ಮಾತಾದ ಸುಭಾಷ್ ಪಾಳೇಕಾರ್ ಅವರೇ ಸ್ವತಃ ನಡೆಸಿಕೊಡುವ ಕಾರ್ಯಾಗಾರ ರೈತರ ಬದುಕಿನ ಬದಲಾವಣೆಗೆ ಸಹಕಾರಿಯಾಗಲಿದೆ” ಎಂದರು.

ಹಿರಿಯ ರೈತ ಮುಖಂಡ ಕೆ ಟಿ ಗಂಗಾಧರ್ ಮಾತನಾಡಿ, “ನೈಸರ್ಗಿಕ ಕೃಷಿಯ ಮಹತ್ವ, ಅರಿವು ಇಂದಿನ ರೈತರಿಗೆ ಅಗತ್ಯವಾಗಿದೆ. ಇಂತಹ ವಿಚಾರದಲ್ಲಿ ತಿಳಿಸಿಕೊಡುವುದು ಪ್ರಸ್ತುತ. ರೈತರು ಸಾಲದ ಸುಳಿಯಿಂದ ಹೊರ ಬರಬೇಕಿದೆ. ಜತೆಗೆ ಆರ್ಥಿಕವಾಗಿ ತಮ್ಮನ್ನು ತಾವು ಸದೃಢರಾಗಿ ಘನತೆಯ ಜೀವನಕ್ಕೆ ಮರಳಬೇಕಿದೆ. ಕೃಷಿಯಲ್ಲಿ ಮಣ್ಣಿಗೆ, ಆಹಾರಕ್ಕೆ ವಿಷ ಉಣಿಸಿದ್ದೇವೆ. ನಮ್ಮಗಳ ಅರಿವು ಮೀರಿ ರಾಸಾಯನಿಕ ಬಳಕೆ ರೈತರಲ್ಲಿ ಗುಮ್ಮನಾಗಿ ಆವರಿಸಿಕೊಂಡಿದೆ. ಇದು ಆಹಾರ ಅಷ್ಟೇ ಅಲ್ಲ, ಭೂಮಿ ಅಷ್ಟೇ ಅಲ್ಲ, ರೈತನ ಬದುಕನ್ನೂ ತೀರಾ ಸಂಕಷ್ಟಕ್ಕೆ ದೂಡಿದೆ. ಇಂತಹ ಸಂದರ್ಭದಲ್ಲಿ ರೈತ ಹಣ ವೆಚ್ಚ ಮಾಡದೆ ಸ್ವಾವಲಂಬನೆಯಿಂದ ಕೃಷಿ ಮಾಡುವ ಪದ್ಧತಿಗೆ ಮರಳಬೇಕಿದೆ, ಇದು ಅನಿವಾರ್ಯ” ಎಂದರು.

ಈ ಸುದ್ದಿ ಓದಿದ್ದೀರಾ? ಹಾಸನ | ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಕಾರ್ಯಾಗಾರ; ಜನವರಿ.3 ರಿಂದ 6ರವರೆಗೆ: ಚುಕ್ಕಿ ನಂಜುಂಡಸ್ವಾಮಿ

“ಇಂದಿನ ಕೃಷಿ ಪರಿಸರಕ್ಕೆ ಮಾರಕವಾಗಿದೆ. ಸಾಲಬಾಧೆ ಒಕ್ಕಲುತನವನ್ನೇ ತೆಗೆಯುತ್ತಿದೆ. ಕೃಷಿ ಎಂದರೆ ಭಯದ ವಾತಾವರಣ. ಬೆಳೆದ ಬೆಳೆಗೆ ಆರ್ಥಿಕ ಬೆಂಬಲ ಇಲ್ಲದಿರುವುದು ರೈತನನ್ನ ತೀವ್ರವಾಗಿ ಭಾದಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೈತನ ಬದುಕಿಗೆ ನೆರವಾಗುವ ಕಾರ್ಯಗಾರ ಆಯೋಜನೆಯಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.

ಈ ವಿಶೇಷ ವಿಡಿಯೋ ನೋಡಿ : https://www.youtube.com/watch?v=5xAlqfJSPxk

ಈ ಸಂಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ರೈತನು ಮತ್ತೆ ಸ್ವಾವಲಂಬಿ ಚಿಂತನೆಗೆ ಮರಳಬೇಕಾಗಿದೆ. ಸಾಲಾಧಾರಿತ, ರಾಸಾಯನಿಕ ಅವಲಂಬಿತ ಕೃಷಿಯಿಂದ ಹೊರಬಂದು, ಮಣ್ಣು–ನೀರು–ಬೀಜಗಳ ಮೇಲಿನ ಹಕ್ಕನ್ನು ರೈತನೇ ಮರಳಿ ಪಡೆದುಕೊಳ್ಳಬೇಕು. ಲಾಭದ ಜೊತೆಗೆ ಆರೋಗ್ಯ, ಪರಿಸರ ಮತ್ತು ಆತ್ಮಗೌರವವನ್ನು ಕಾಪಾಡುವ ಕೃಷಿಯೇ ಮುಂದಿನ ದಾರಿ. ಅನುಭವಸಂಪನ್ನ ಸಾಧಕ ರೈತರಿಂದ ಕಲಿತು, ಪರಸ್ಪರ ಬೆಂಬಲದ ಮೂಲಕ ಹೊಸ ಕೃಷಿ ಮಾದರಿಯನ್ನು ಕಟ್ಟಿಕೊಳ್ಳುವುದು ಸದ್ಯದ ಅಗತ್ಯ. ಕೃಷಿ ಮತ್ತೆ ಗೌರವದ ವೃತ್ತಿಯಾಗದ ಹೊರತು, ಗ್ರಾಮೀಣ ಬದುಕಿಗೂ ಭದ್ರ ಭವಿಷ್ಯ ಸಿಗದು. ಈ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಾಗಾರ ನೂರಾರು ರೈತರಿಗೆ ಅನುಕೂಲವಾಗಲಿ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...