ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ಅಂಬೇಡ್ಕರ್ ಭವನದಲ್ಲಿ ಗುರುವಾರ ‘ಸಂವಿಧಾನ ಸಂರಕ್ಷಣಾ ಪಡೆ-ಕರ್ನಾಟಕ’ ನೇತೃತ್ವದಲ್ಲಿ ‘ಸಂವಿಧಾನ ಅಳಿವು-ಉಳಿವು ಸಂರಕ್ಷಣೆ’ ಕುರಿತಾಗಿ ನಡೆದ ಒಂದು ದಿನದ ಚಿಂತನ-ಮಂಥನ ಕಾರ್ಯಗಾರದಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ‘ಬಿಜೆಪಿಗೆ ಚಾರ್ ಸೌ ಪಾರ್ ಗದ್ದುಗೆ ಹಿಡಿಯುವ ಸಂಖ್ಯೆಯಲ್ಲ; ಸಂವಿಧಾನ ಬದಲಾಯಿಸಲು ಬೇಕಿರುವ ಸಂಖ್ಯೆ’ ಎಂದು ಕಿಡಿಕಾರಿದರು.
“ಸಮಾಜದಲ್ಲಿ, ಸಾಮಾಜಿಕವಾಗಿ ರಾಜಕೀಯ ಉಸಾಬರಿ ನಮಗೇಕೆ? ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಎಂದಿಗೂ ನುಡಿದಂತೆ ನಡೆದಿಲ್ಲ. ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳನ್ನು ನಾವೇ ಪಡೆದುಕೊಳ್ಳಲು ಹೋರಾಟದ ಗುದ್ದಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ನಮ್ಮೊಂದಿಗಿದೆ. ಮೀಸಲಾತಿ ಬೇಕಾ? ಮಹಿಳೆಯರಿಗೆ ಸ್ಥಾನಮಾನ ಬೇಕಾ? ಏನೇ ಬೇಕು ಎಂದರು ಬೀದಿಯಲ್ಲಿ ನಿಲ್ಲಬೇಕು. ಹೋರಾಟದಿಂದ ಪಡೆದಿದ್ದೆ ಹೆಚ್ಚು”.
“ಪಕ್ಷಗಳ ಮೇಲೆ ಯಾವುದೇ ವ್ಯಾಮೋಹ, ಅಲಕ್ಷ್ಯ ಖಂಡಿತ ಇಲ್ಲಾ. ಆದರೇ, ಜನರ ಒಳಿತಿಗಾಗಿ ಹೋರಾಡುವುದು ಅತಿಮುಖ್ಯ. ಸಂವಿಧಾನದ ಹಕ್ಕುಗಳನ್ನು ಕಸಿಯುತ್ತಿರುವಾಗ, ಹೋರಾಟದಿಂದ ಪಡೆಯುವುದಾಗಿದೆ. ಸಧ್ಯದ ಪರಿಸ್ಥಿತಿ ಪಡೆದಿದ್ದನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬಿಜೆಪಿಗೆ ಗೆಲುವಿನ ಅಂಕಿ, ಸಂಖ್ಯೆ ಮುಖ್ಯವಲ್ಲ. ಅದರ ಹಿಂದಿರುವವರ ಗುರಿ ಸಂವಿಧಾನ ತೆಗೆಯುವುದು. ಅದಕ್ಕಾಗಿಯೇ ಪದೇ ಪದೇ ಇಸ್ ಬಾರ್ ಚಾರ್ ಸೌ ಪಾರ್ ಎಂತಲೇ ಚುನಾವಣೆಗಳನ್ನ ಎದುರಿಸುತ್ತಿರುವುದು. ಇದರ ಸ್ಪಷ್ಟಾರ್ಥ ಇಷ್ಟೇ ಸಂವಿಧಾನ ಬದಲಾಯಿಸಲು ಸಂಸತ್ತಿನಲ್ಲಿ ಬೇಕಿರುವ ಸಂಖ್ಯೆ”.
ಬಿಜೆಪಿ, ಮನುವಾದಿಗಳ ಮುಖ್ಯ ಗುರಿ ಸಂವಿಧಾನ ಇದ್ದರೆ ಅಲ್ವಾ ಹೋರಾಟ, ಹಕ್ಕು ಮಂಡಿಸುವುದು. ಅದೇ ಇಲ್ಲದೇ ಹೋದರೆ ಅನ್ನೋದು ನಿಲುವಾಗಿದೆ. ಸಂವಿಧಾನ ಮತದಾನ ಹಕ್ಕು, ಆಸ್ತಿ ಹಕ್ಕು, ಕಾರ್ಮಿಕ ಹಕ್ಕು, ಬದುಕಿನ ಹಕ್ಕು ಹೀಗೆ ಎಲ್ಲವನ್ನು ನೀಡಿದೆ. ದೌರ್ಜನ್ಯ, ನಿರಾಕರಣೆ ಸಂಬಂಧವಾಗಿ ದೂರು ನೀಡುವ, ಹೋರಾಟದಿಂದ ಪಡೆಯುವ ಹಕ್ಕನ್ನು ನೀಡಿದೆ. ದಬ್ಬಾಳಿಕೆ ಮಾಡುವವರ ವಿರುದ್ಧ ಘನತೆಯಿಂದ ಬದುಕಲು ಅವಕಾಶ ಕಲ್ಪಿಸಿದೆ. ಹಾಗಾಗಿಯೇ, ಸಂವಿಧಾನ ಅಂದರೆ ರುಚಿಸಲಾರದ ತುತ್ತಾಗಿದೆ.
ಬಿಜೆಪಿಗರ ಮನಸ್ಥಿತಿ ದೇಶದಲ್ಲಿ ನಾವೇ ಇರಬೇಕು. ಅಧಿಕಾರ ನಮ್ಮಲ್ಲಿಯೇ ಉಳಿಯಬೇಕು, ಭೂಮಿಯ ಹಕ್ಕು ತಮ್ಮಲ್ಲಿಯೇ ಉಳಿಯಬೇಕು ಎಂದರೆ ಸಂವಿಧಾನ ಇರಬಾರದು. ಸಂವಿಧಾನ ಭೂಮಿ ಎಲ್ಲರಿಗೂ ಸಮನಾಗಿ ಹಂಚುವಂತೆ ಹೇಳುತ್ತದೆ. ಅದೇ ಇರದಿದ್ದರೆ ಹಕ್ಕಿನ ಪ್ರತಿಪಾದನೆ ಅಷ್ಟು ಸುಲಭದ ಮಾತಲ್ಲ. ‘ಸಂವಿಧಾನ ನಮಗೆ ಹಕ್ಕಾದರೆ, ವಿರೋಧಿಗಳಿಗೆ ಕಡಿವಾಣ’ವಾಗಿದೆ. ಸಂವಿಧಾನ ರಕ್ಷಣೆ ಮಾಡುವುದಷ್ಟೇ ಅಲ್ಲ. ಸಂವಿಧಾನ ಉಳಿಸಿಕೊಳ್ಳಬೇಕಿದೆ. ಸಂವಿಧಾನ ದತ್ತವಾದ ಚುನಾವಣೆ ಮೂಲಕವೇ ಅಧಿಕಾರ ಪಡೆದು, ನಮ್ಮಗಳ ವಿರುದ್ಧವೆ ನಿಂತು, ಜನಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ, ಅವರಿಗೆಲ್ಲ ಚಾರ್ ಸೌ ಪಾರ್ ನ ಅಗತ್ಯವಿದೆ, ಅಗತ್ಯತೆಯೇ ಅರಿವು ಇದೆ.
ಆದರೇ, ಎಷ್ಟೇ ಸುಳ್ಳುಗಳನ್ನ ಬಿತ್ತಿ ಬೊಂಬಡ ಹೊಡೆದರು ಆ ಸಂಖ್ಯೆಯನ್ನು ಇದುವರೆಗೆ ತಲುಪಲು ಸಾಧ್ಯವಾಗಿಲ್ಲ. ಅದಕ್ಕಾಗಿಯೇ, ಹೊಸ ಸಂಸತ್, ಹೋಮ, ಹವನ ನಡೆಸಿ ಸೆಂಗೋಲ್ ತಂದಿಟ್ಟರು. ಆದರೇ, ಉದ್ದೇಶ ಈಡೇರಲಿಲ್ಲ. ಕೋಮುಗಲಭೆ ಎಬ್ಬಿಸುವುದು, ಪಕ್ಕದ ದೇಶದ ಕಾರಣವಿಟ್ಟು ಯುದ್ಧ ಮಾಡುವುದು, ಇನ್ನಿರದ ಸುಳ್ಳು ಹೇಳುವುದು, ಸೂಪರ್ ಪವರ್ ದೇಶ ಮಾಡುವುದಾಗಿ ಬೊಗಳೆ ಬಿಡುವುದು, ಇದನ್ನೆಲ್ಲಾ ಕಾಲಕ್ಕೆ ತಕ್ಕನಾಗಿ ಮಾಡಿ ಹೇಗೋ ಅಧಿಕಾರಕ್ಕೆ ಬಂದು ಕುಳಿತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನಾ ಗುಜರಾತ್ ಮಾದರಿ ಎಂದೇಳಿ ಚಾಲ್ತಿಗೆ ಬಂದ ಹೆಸರೇ ನರೇಂದ್ರ ಮೋದಿ. ಅಧಿಕಾರಕ್ಕೆ ಬಂದಾಯಿತು, ಮೂರು ಭಾರಿ ಪ್ರಧಾನಿ ಆಗಿದ್ದಾಯಿತು ಕೊಟ್ಟ ಭರವಸೆಯಂತೆ ಬ್ಯಾಂಕ್ ಖಾತೆಗೆ ದುಡ್ಡೆಲ್ಲಿ? ಉದ್ಯೋಗ ಸೃಷ್ಟಿ ಎಲ್ಲಿ? ಯಾವುದಕ್ಕೂ ಉತ್ತರವಿಲ್ಲ ದೇಶದಲ್ಲಿ ಹೋರಾಟ ಆರಂಭಗೊಂಡಿದೆ. ದೇಶದಲ್ಲಿ ಆತಂಕ ಸೃಷ್ಟಿ ಮಾಡುವುದು, ಪ್ರಬಲ ನಾಯಕ ಬೇಕು ಎನ್ನುವಂತೆ ಬಿಂಬಿಸುವುದು, ಅಧಿಕಾರಕ್ಕೆ ಬರುವುದು ಇದಿಷ್ಟೇ ಆಗಿದೆ.
ಇದೀಗ ಬಿಜೆಪಿಗರಿಗೆ ಮತ ಹಾಕದ ಮುಸ್ಲಿಮ್ ಸಮುದಾಯ ಗುರಿಯಾಗಿಸಿ ನಡೆಸಿದ ಯತ್ನಗಳು ವಿಫಲವಾಗಿವೆ. ಅಂದುಕೊಂಡ ಹಾಗೇ ಸಫಲತೆ ಕಂಡಿಲ್ಲ. ಬೀದಿಗೆ ಬಂದು ಹೋರಾಟಕ್ಕಿಳಿದು ಹಿಂದೂ-ಮುಸ್ಲಿಮ್ ನಡುವೆ ಗಲಾಟೆ ನಡೆಸುವಂತ ಹುನ್ನಾರಗಳು ಕೈಕೊಟ್ಟವು. ಮುಸ್ಲಿಮ್ ಸಮುದಾಯವು ಪ್ರಜ್ಞಾವಂತಿಕೆಯಿಂದ ನಡೆದುಕೊಂಡಿತು. ಇದಿಷ್ಟೇ ಅಲ್ಲ ದೇಶದಲ್ಲಿ ರೈತ ವಿರೋಧಿ ಮೂರು ಕಾಯ್ದೆ ತಂದರು. ಭಾರೀ ಆಕ್ರೋಶ ವ್ಯಕ್ತವಾಗಿ ದೆಹಲಿಯಲ್ಲಿ ಐತಿಹಾಸಿಕ ಹೋರಾಟ ನಡೆದಾಗ ನಡುಭಾಗಿಸಿ ಲಿಖಿತ ರೂಪದಲ್ಲಿ ಕಾಯ್ದೆ ವಾಪಸ್ ಪಡೆಯುವುದಾಗಿ ಬರೆದುಕೊಟ್ಟರು ಪ್ರಧಾನಿ ನರೇಂದ್ರ ಮೋದಿಯವರು.
ಬಿಜೆಪಿಯ ತಂತ್ರಗಳನ್ನು ಜನರು ಸೋಲಿಸುತ್ತಲೇ ಬಂದಿದ್ದಾರೆ. ಅವರು ಸಹ ಸಂವಿಧಾನ ವಿರೋಧಿಯಾಗಿ ಅಡ್ಡ ದಾರಿಯಲ್ಲಿ ದಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೂ, ದೇಶ ರಾಜ್ಯದಲ್ಲಿ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಸಂಯುಕ್ತ ಹೋರಾಟ ಬಿಜೆಪಿ ಸೋಲಿಸುವ ಸಂದೇಶ ಸಾರಿವೆ. ಅದೇ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು. ಕರ್ನಾಟಕದ ಫಲಿತಾಂಶದ ಮೇಲೆ ಪ್ರಭಾವ ಬೀರಿದ್ದು.

“ದೇಶದಲ್ಲಿ 79 ಕಡೆ ವೋಟ್ ಚೋರಿ ನಡೆದಿದೆ. ಕರ್ನಾಟಕದಲ್ಲಿ 6 ಕಡೆ. ಫ್ಯಾಸಿಸಂ ಶಕ್ತಿಯನ್ನು ಜನರು ಸೋಲಿಸಿದ್ದಾರೆ. ಆದರೂ ಚಿಂತೆಯಲ್ಲಿರುವ ಬಿಜೆಪಿ ಮುಂದಿನ ಯೋಚನೆಯಲ್ಲಿ ನಿರತವಾಗಿದೆ. ಮುಂದಿನ ಚುನಾವಣೆ ಗೆಲ್ಲುವುದಿಲ್ಲ ಎನ್ನುವ ಅರಿವಿನಿಂದ ಮಾಡಬಾರದ ಕೆಲಸಕ್ಕೆಲ್ಲ ಕೈಹಾಕಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಪ್ರಾಮಾಣಿಕ ನಾಯಕ, ಸರ್ಕಾರ ಅಧಿಕಾರಕ್ಕೆ ಬಂದರೆ ಬಿಜೆಪಿಯ ಅದೆಷ್ಟೋ ನಾಯಕರು ಜೈಲಿಗೆ ಹೋಗುತ್ತಾರೆ. ಅಂತಹ ಬದಲಾವಣೆ ದೇಶದಲ್ಲಿ ಘಟಿಸಬೇಕಿದೆ”.
ಎಸ್.ಐ.ಆರ್ ಇದರ ಭಾಗವಾಗಿಯೇ ದೇಶದಲ್ಲಿ ಜಾರಿ ಮಾಡಿರುವುದು. ಗುರಿಯನ್ನಾಗಿಸಿ ಹೇಗೆ ಬೇಕು ಹಾಗೇ ಮತದಾರರ ಪಟ್ಟಿಯಿಂದ ತೆಗೆದುಹಾಕುವುದು. ಅಂತಹ ಅಧಿಕಾರ ಸದ್ಯಕ್ಕೆ ಹೊಂದಿದ್ದಾರೆ. ಅದನ್ನ ಲಾಭವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಲ್ಲೆಲ್ಲಿ ಜಾತ್ಯತೀತ ಮತ ಕೇಂದ್ರಗಳು ಇದ್ದಾವೆ ಹುಡುಕುವುದು ಬಿಜೆಪಿಯೇತರ ಕಂಡುಬರುವಲ್ಲಿ ಮತದಾರ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಬಿಹಾರ.
ದೇಶದಲ್ಲಿ ವ್ಯವಸ್ಥಿತವಾಗಿ ಕಾನೂನಿನ ಅಸ್ತ್ರದ ಮೂಲಕ ಮತದಾನದ ಹಕ್ಕನ್ನು ಕಸಿಯುವ ತಂತ್ರಗಾರಿಕೆ ಹೆಚ್ಚಿದ್ದು, ದೇಶದ ಬದಲಾವಣೆ ಬಯಸುವ ಮನಸ್ಸುಗಳ ಮೇಲೆಯೂ ಮೊದಲ ಭಾಗವಾಗಿ ಹೇರಿಕೆಯಾಗಲಿದೆ. ಅಂತವರನ್ನೇ ಮತದಾನದಿಂದ ಹೊರಗೂಳಿಸುವ ಸಂಚಿದೆ. ಮತದಾರರ ಪಟ್ಟಿಯನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಲು ಎಸ್.ಐ.ಆರ್
ಬಳಕೆಯಾಗಲಿದೆ. ಎಸ್.ಐ.ಆರ್ ಸಂಪೂರ್ಣವಾಗಿ ದೇಶದಲ್ಲಿ ಜಾರಿ ಮಾಡಿದರೆ ಪ್ರಜಾತಂತ್ರ ವ್ಯವಸ್ಥೆ ಸಾಯಲಿದೆ. ದೇಶದಲ್ಲಿ ಮತದಾನದ ಹಕ್ಕು ಇಲ್ಲದಂತೆ ಆಗಲಿದೆ. 29 ರ ಚುನಾವಣೆ ಹೊತ್ತಿಗೆ ಅಧಿಕಾರಕ್ಕೆ ಬರಲು ಈ ಮಾರ್ಗ ತೆರೆದುಕೊಂಡಿದೆ.
ಇದನ್ನ ತಡೆಯುವುದಾದರು ಹೇಗೆ?. ವೋಟ್ ಚೋರಿ ನಡೆಯುತ್ತಾ ಇದ್ದರು ಕಾಂಗ್ರೆಸ್ ನಾಯಕರು ಬ್ಯುಸಿ ಇದ್ದಾರೆ. ಅರಿವಿಲ್ಲದ ನಡೆಯಲ್ಲಿ ಇದ್ದಾರೆ. ಇನ್ನೂ ಅರ್ಥ ಆಗದೇ ಇದ್ದರೆ, ದೇಶ ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹೋರಾಟಗಾರರೇ ಹೋರಾಟ ಮಾಡಿ ದೇಶ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
“ಜವಾಬ್ದಾರಿಯಿಂದ, ಭವಿಷ್ಯದ ಉಳಿವಿಗಾಗಿ ಬದ್ಧತೆಯಿಂದ ನಡೆಯಬೇಕಿದೆ. ಸಂವಿಧಾನ ಆಶಯ ಉಳಿಯಬೇಕಿದೆ. ಇದಕ್ಕಾಗಿ ಹೋರಾಟ ಮಾಡಬೇಕಾದ ಸಂದರ್ಭ. ಸಂಘರ್ಷದ ಮೂಲಕ ಮುಂದೊಂದು ದಿನ ಪರ್ಯಾಯ ಶಕ್ತಿ ನಿರ್ಮಾಣವಾಗಲಿದೆ. ಇಂತಹ ಸಂದರ್ಭದಲ್ಲಿ ದೇಶ ಒಂದೆರೆಡು ವರ್ಷಗಳಲ್ಲಿ ಹೋರಾಟ ರೂಪಿಸಬೇಕಿದೆ. ತುರ್ತಾಗಿ ಅಪಾಯದ ಪರಿಸ್ಥಿತಿ ಅರ್ಥ ಮಾಡಿಕೊಂಡು, ಹೋರಾಟದ ಸೇನಾನಿಗಳನ್ನು ಕಟ್ಟಬೇಕಿದೆ. ರಾಜ್ಯದಲ್ಲಿ ಸಂವಿಧಾನ ಸಂರಕ್ಷಣಾ ಪಡೆಯ ಭಾಗವಾಗಿ ಒಂದು ಲಕ್ಷ ಕಾರ್ಯಕರ್ತರ ಪಡೆಯನ್ನ ಸಿದ್ದಪಡಿಸಬೇಕಿದೆ”.
ಈ ಸುದ್ದಿ ಓದಿದ್ದೀರಾ? ಎಸ್.ಐ.ಆರ್: ಮೌನವಾಗಿ ಬೆನ್ನಿಗೆ ಇರಿದ ಸರ್ಕಾರ: ಚಿಂತಕ ಶಿವಸುಂದರ್
ದೇಶದ ಆಪತ್ತನ್ನು ಎದುರಿಸಲು ಸಜ್ಜಾಗಬೇಕು. ದೇಶದಲ್ಲಿ ಹುಳಿ ಹಿಂದಿದ್ದಾರೆ, ಅದನ್ನೆಲ್ಲ ಬದಿಗೆ ಸರಿಸಿ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ. ‘ಧರ್ಮ ಎಂದರೆ ನ್ಯಾಯ’. ಆದರೇ, ಬಿಜೆಪಿ ಮಾಡುವುದೆಲ್ಲ ಅದರ ವಿರುದ್ಧವಾದ ಕೆಲಸ. ಪ್ರಸ್ತುತ ಸಂದರ್ಭದಲ್ಲಿ ಎಲ್ಲರನ್ನು ಸಮಾನತೆಯಲ್ಲಿ ಕಾಣುವ ಬದ್ಧತೆ ಕಾಣಬೇಕಿದೆ. ಇದರ ಮೂಲಕ ಬೃಹತ್ ಜನಾಂದೋಲನ ಕಟ್ಟಬೇಕಿದೆ. ಜನ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಅಂತಹ ಬ್ರಿಟಿಷರನ್ನೇ ಬಿಡಲಿಲ್ಲ ಅನ್ನಕ್ಕೆ ಹೋಗಲಿ, ಶೌಚಕ್ಕೂ ಹೋಗಲಾರದ ಪರಿಸ್ಥಿತಿಗೆ ಜನ ತಂದರು. ದೇಶದಲ್ಲಿ ಇಂದಿರಗಾಂಧಿ ಅವರನ್ನು ಬಿಡಲಿಲ್ಲ. ಅಹಮ್ಮನ್ನು ಸೋಲಿಸುವುದರ ಮೂಲಕ ತೋರಿಸಿಕೊಟ್ಟರು. ಜನರ ಶಕ್ತಿ ಮುಂದೆ ಯಾವ ಶಕ್ತಿಯೂ ನಿಲ್ಲಲಾರದು.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಮಾದಾರಿ ಮಾದಯ್ಯ’: ವರ್ತಮಾನದ ಅವಶ್ಯ ರಂಗ ಪ್ರಯೋಗ
“ದೇಶ ಗರ್ಭ ಕಟ್ಟುವ ಸ್ಥಿತಿ ನಿರ್ಮಾಣವಾಗಬೇಕು; ಹೊಸ ಭಾರತದ ಜನನ ಆಗಲೇಬೇಕು” ಆ ನಿಟ್ಟಿನಲ್ಲಿ ಮುಂದಾಗೋಣ ಎಂದು ಕರೆ ನೀಡಿದರು.





