ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಬಡಗರಹಳ್ಳಿ ಗ್ರಾಮದ ತೋಟ ಸಾಲುಗಳಲ್ಲಿದ್ದ ಗಂಧದ ಮರಗಳನ್ನು ಕಡಿದು ಮಾರಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಎ.ಹೊಸಹಳ್ಳಿ ಗ್ರಾಮದ ನಿವಾಸಿ ಹನುಮಯ್ಯ (58), ಹೇಮಂತ್ (38) ಎಡೆಯೂರು ಹೋಬಳಿಯ ಚಾಕೇನಹಳ್ಳಿಯ ಮಂಜುನಾಥ್ (45) ಶಿರಾದ ಚಾದ್ರಿರೊಹುಲ್ಲಾ (58) ಬಂಧಿತ ಆರೋಪಿಗಳು
ತಾಲ್ಲೂಕಿನ ಬಡಗರಹಳ್ಳಿಯ ರವಿಕುಮಾರ್ ಅವರಿಗೆ ಸೇರಿದ ಸರ್ವೇ ನಂಬರ್ 51 ರಲ್ಲಿ ಇದ್ದ ದೊಡ್ಡ ಗಂಧದ ಮರವನ್ನು ಗರಗಸದಿಂದ ಆರೋಪಿಗಳು ಕುಯ್ದು ಅದರ ಮಧ್ಯಭಾಗದಲ್ಲಿನ ಸುಮಾರು ಎರಡೂವರೆ ಕೆ.ಜಿಯಷ್ಟು ಚೆಕ್ಕೆಯನ್ನು ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ಡಿ 14 ರಂದು ದೂರು ನೀಡಲಾಗಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮೂವರು ಆರೋಪಿಗಳು ಗಂಧದ ತುಂಡುಗಳನ್ನು ಶಿರಾ ಪಟ್ಟಣದ ರುಹುಲ್ಲಾನಿಗೆ ಮಾರುತ್ತಿದ್ದರೆಂದು ವಿಚಾರಣೆ ವೇಳೆ ಗೊತ್ತಾಗಿದೆ. ಮರ ಕಡಿದ ಮೂವರು ಮತ್ತು ಅಕ್ರಮವಾಗಿ ಗಂಧವನ್ನು ಖರೀದಿಸಿದ ಓರ್ವನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ ವೇಳೆ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಾರ್ಯಚರಣೆಯಲ್ಲಿ ಸಿಪಿಐ ಲೋಹಿತ್, ಪಿಎಸ್.ಐ ಗಳಾದ ಕೆ.ವಿ.ಮೂರ್ತಿ ಮತ್ತು ಡಿ.ಮೂರ್ತಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.





