ಕೋಮು ಪ್ರಚೋದನೆ ಮತ್ತು ದ್ವೇಷ ಭಾಷಣದಿಂದಲೇ ಕರಾವಳಿಯಲ್ಲಿ ಕುಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರನ್ನು ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕಳದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬಾತನಿಗೆ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಣ ಪಡೆದು, ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆ ಪ್ರಕರಣದಲ್ಲಿ ಆಕೆಯನ್ನೂ, ಆಕೆಯ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ತನಗೆ ಚೈತ್ರಾ ಕುಂದಾಪುರ ಮತ್ತು ಸಹಚರರು ನಾಲ್ಕು ಕೋಟಿ ರೂ. ವಂಚಿಸಿದ್ದಾರೆ ಎಂದು ಗೋವಿಂದ ಬಾಬು ಬರೆದಿದ್ದ ಪತ್ರವೊಂದು ಕಳೆದ ಕೆಲವು ತಿಂಗಳಿಂದ ವೈರಲ್ ಆಗಿತ್ತು. ಅಲ್ಲದೆ, ಚೈತ್ರಾ ಅವರು ವಿಶ್ವಾನಾಥ್ ಜೀ ಎಂಬಾತನ ಬಗ್ಗೆ ಮಾತನಾಡಿರುವ ಫೋನ್ ರೆಕಾರ್ಡಿಂಗ್ ಕೂಡ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಉದ್ಯಮಿಯಿಂದ ಒಟ್ಟು 7 ಕೋಟಿ ರೂ.ಗಳನ್ನು ಮೂರು ಹಂತದಲ್ಲಿ ಚೈತ್ರಾ ಮತ್ತು ಆಕೆಯ ಟೀಮ್ ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.
ಇದೀಗ, ಆಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಪ್ರಮುಖ ಆರೋಪಿಯಾಗಿದ್ದು, ಗಗನ್ ಕಡೂರು, ಶ್ರೀಕಾಂತ ನಾಯಕ್, ಪ್ರಸಾದ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿದ್ದಾರೆ.
ಕಳೆದ ಕೆಲ ದಿನಗಳಿಂದ ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದರು. ಮಂಗಳವಾರ, ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.




