ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಗಾಂಧಿ ಹುತಾತ್ಮ ದಿನದಂದು ಮೈಸೂರಿನಲ್ಲಿ ‘ಸೌಹಾರ್ದ ನಡಿಗೆ’, ಗೀತಗಾಯನ ನಡೆಯಿತು.
ಸಂತ ಫಿಲೋಮಿನಾ ಚರ್ಚ್ ಆವರಣದಿಂದ ಪ್ರಾರಂಭವಾದ ಸೌಹಾರ್ದ ನಡಿಗೆ, ಅಜ್ಜಾಮ್ ಮಸೀದಿ, ಅಶೋಕ ರಸ್ತೆ ಮೂಲಕ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಮಾರ್ಗವಾಗಿ ಚಿಕ್ಕ ಗಡಿಯಾರದ ಬಳಿ ಸೇರಿತು.
ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಪ್ರಗತಿಪರ ಸಂಘಟನೆಗಳು, ಕಾರ್ಮಿಕ ಸಂಘಟನೆ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಭಾರತ ವಿದ್ಯಾರ್ಥಿ ಫೆಡರೇಷನ್, ಹವ್ಯಾಸಿ ರಂಗ ತಂಡ ಹಾಗು ಕನ್ನಡಪರ ಸಂಘಟನೆಗಳು ಭಾಗಿಯಾಗಿದ್ದವು.

ಸಮಾಜದಲ್ಲಿ ಸಹಬಾಳ್ವೆ, ಸಮಾನತೆ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ‘ಸೌಹಾರ್ದ ಕರ್ನಾಟಕ’ ವತಿಯಿಂದ ಸೌಹಾರ್ದ ನಡಿಗೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಆದರ್ಶಗಳ ಪ್ರಸ್ತುತತೆಯ ಬಗ್ಗೆ ಬೆಳಕು ಚೆಲ್ಲಿದರು. ಸತ್ಯ, ಅಹಿಂಸೆ, ಶಾಂತಿಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತರ ನೆನೆವ ಸುಸಂದರ್ಭವಾಗಿತ್ತು.
ವೈವಿಧ್ಯತೆಯ ನಡುವೆ ಏಕತೆಯನ್ನು ಮೂಡಿಸುವಲ್ಲಿ, ಭಾರತದ ಸಮಗ್ರತೆ ಕಾಪಾಡುವಲ್ಲಿ ದೇಶದ ಪ್ರಜೆಗಳ ಆಧ್ಯ ಕರ್ತವ್ಯಗಳ ಅವಲೋಕನ ಕಂಡಿತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯದ ಅಗತ್ಯತೆಯನ್ನು ಗೀತಾಗಾಯನದ ಮೂಲಕ ಪ್ರಸ್ತುತ ಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಯಿದ್ ಖಾನ್ ಖುಲಾಸೆ; ಮೋದಿಯುಗದ ನಿರಾಧಾರ ಮುಸ್ಲಿಂ ದ್ವೇಷಕ್ಕೆ ಮತ್ತೊಂದು ಪುರಾವೆ

ಕಾರ್ಯಕ್ರಮದಲ್ಲಿ ಕಾಮ್ರೆಡ್ ಜಗದೀಶ್ ಸೂರ್ಯ, ಮಾಜಿ ರಂಗಾಯಣ ನಿರ್ದೇಶಕ ಜನಾರ್ಧನ (ಜನ್ನಿ), ವಿಶ್ರಾಂತ ಉಪ ಕುಲಪತಿ ಸಬೀಹಾ ಭೂಮಿಗೌಡ, ಸಾಮಾಜಿಕ ಹೋರಾಟಗಾರರಾದ ಸವಿತಾ ಪಾ ಮಲ್ಲೇಶ್, ಹೊಸಕೋಟೆ ಬಸವರಾಜು, ಚಂದ್ರಶೇಖರ್ ಮೇಟಿ, ಒಡನಾಡಿ ಸ್ಟ್ಯಾನ್ಲಿ, ಪರಶು, ಪಂಡಿತಾರಾಧ್ಯ, ನೂರ್ ಮರ್ಚೆಂಟ್ ಸೇರಿದಂತೆ ಹಲವರು ಇದ್ದರು.





