“ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಜನರಿಗೆ ನೇರವಾಗಿ ಉಪಯುಕ್ತವಾಗುವ ಅನೇಕ ಆಸ್ತಿಗಳನ್ನು ಸೃಷ್ಟಿಸಲಾಗಿದೆ” ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾಮಗಾರಿ ವೀಕ್ಷಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು “ಅಂಗನವಾಡಿ ಕಟ್ಟಡ, ಗ್ರಂಥಾಲಯ, ಶಾಲಾ ಮೈದಾನ, ಕೆರೆ ನಿರ್ಮಾಣ, ರೈತರಿಗೆ ಅಗತ್ಯವಾದ ಬದು, ಕೃಷಿ ಹೊಂಡಗಳ ನಿರ್ಮಾಣ, ಸಸಿ ನೆಡುವಿಕೆ, ಗ್ರಾಮ ಸ್ವಚ್ಛತೆ, ಚರಂಡಿ ನಿರ್ಮಾಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಈ ಯೋಜನೆಯಡಿ ಜಾರಿಯಾಗಿದ್ದು ಜನರಿಗೆ ಆಸರೆಯಾಗಿವೆ” ಎಂದರು.
“ಇಂತಹ ಜನಪರ ಯೋಜನೆಗಳನ್ನು ತಡೆದು ರೈತಪರ ಯೋಜನೆಗಳನ್ನು ಕಾರ್ಪೋರೆಟ್ ಸಂಸ್ಥೆಗಳ ಕೈಗೆ ಒಪ್ಪಿಸುವ ಪ್ರಯತ್ನ ಖಂಡನೀಯವಾಗಿದ್ದು, ಇದು ಜನವಿರೋಧಿ ನೀತಿಯಾಗಿದೆ” ಎಂದರು.
“ಇಂತಹ ಕ್ರಮಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು. ಜೊತೆಗೆ ಕಾಂಗ್ರೆಸ್ ಪಕ್ಷವು ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಹೋರಾಟ ರೂಪಿಸಿ, ನರೇಗಾ ಯೋಜನೆ ರದ್ದುಪಡಿಸುವ ಪ್ರಯತ್ನಗಳನ್ನು ತಡೆಯಲು ಮುಂದಾಗಲಿದೆ” ಎಂದು ಸಚಿವರು ತಿಳಿಸಿದರು.





