“ಸಿಕ್ಕ ನಿಧಿ ನಮ್ಮದಲ್ಲವೆಂದು ಸರಕಾರಕ್ಕೆ ನೀಡುವ ಪ್ರಜ್ವಲ್ ರಿತ್ತಿ ಹಾಗೂ ಅವರ ತಾಯಿ ಕಸ್ತೂರೆವ್ವಾ ರಿತ್ತಿ ಅವರ ಗುಣ ನಿಧಿಗಿಂತ ಹೆಚ್ಚು ಬೆಲೆ ಬಾಳುವಂತಹದ್ದು, ಅವರ ಪ್ರಾಮಾಣಿಕತೆಗೆ ಸಾಕ್ಷಿ ಆಗಿದ್ದು, ನಮ್ಮ ಗದಗ ಜಿಲ್ಲೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ” ಎಂದು ಸಚಿವ ಎಚ್ ಕೆ ಪಾಟೀಲ್ ಶ್ಲಾಘಿಸಿದರು.
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಅಡಿಪಾಯ ತಗೆಯುವಾಗ ಪತ್ತೆಯಾದ ನಿಧಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಎಚ್ ಕೆ ಪಾಟೀಲ್ ಭೇಟಿ ಪರಿಶೀಲಿಸಿ, ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
“ಈ ಗ್ರಾಮಸ್ಥರು, ಹಿರಿಯರು ‘ಈ ಕುಟುಂಬಕ್ಕೆ ಜಾಗ ಕೊಟ್ಟು ಮನೆ ಕಟ್ಟಿಸಿಕೊಡಬೇಕು. ಜೊತೆಗೆ ಬಾಲಕನ ತಾಯಿಗೆ ಉದ್ಯೋಗ ಕೊಡಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ” ಎಂದು ಹೇಳಿದರು.
ಈ ವಿಚಾರಗಳ ಕುರಿತು ನಾಳೆ ಮಾನ್ಯ ಮುಖ್ಯಮಂತ್ರಿಗಳ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಕಾನೂನು ಪ್ರಕಾರ ಪ್ರಜ್ವಲ್ ರಿತ್ತಿ, ಹಾಗೂ ಅವರ ತಾಯಿ ಕಸ್ತೂರೆವ್ವಾ ರಿತ್ತಿ ಕುಟುಂಬಕ್ಕೆ ಯಾವ ರೀತಿಯ ಗೌರವ ಮತ್ತು ನೆರವು ನೀಡಬೇಕು ಎಂಬ ನಿರ್ಧಾರವನ್ನು ಸಂಜೆಯೊಳಗೆ ಪ್ರಸ್ತಾಪ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಎರಡು ದಿನಗಳ ಹಿಂದೆ ಲಕ್ಕುಂಡಿಯಲ್ಲಿ 466 ಗ್ರಾಂ ಚಿನ್ನಾಭರಣಗಳು ಮತ್ತು 634 ಗ್ರಾಂ ತಾಮ್ರದ ತಂಬಿಗೆಯೊಳಗೆ ಸಂಗ್ರಹಿತ ನಿಧಿ ಪತ್ತೆಯಾಗಿತ್ತು. ಪತ್ತೆಯಾದ ಈ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾನೂನಿನ ಪ್ರಕಾರ ಪತ್ತೆಯಾದ ನಿಧಿಯನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಕುಂಡಿ ಪ್ರಾಧಿಕಾರ ಸದಸ್ಯ ಸಿದ್ದಲಿಂಗೇಶ ಪಾಟೀಲ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾದ್ಯಕ್ಷ ಬಿ ಬಿ ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೊಗೇರಿ ಹಾಗೂ ನಿಧಿ ಸಿಕ್ಕ ಸ್ಥಳದ ಮಾಲಕರು, ಗ್ರಾಮ ಪಂಚಾಯತ್ ಸದಸ್ಯರು, ಪುರಾತತ್ವ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





