ಸಂವಿಧಾನದ ಆಶಯದಂತೆ ತಪ್ಪದೇ ಮತದಾನ ಮಾಡುವ ಮೂಲಕ ಎಲ್ಲರೂ ಜವಾಬ್ದಾರಿ ಮೆರೆಯುವುದು ಅತ್ಯವಶ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯುವ ಬೇಜವಾಬ್ದಾರಿ ತೋರದೆ ತಪ್ಪದೇ ನಿಮಗೆ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಹಾಕುವುದು ಜವಾಬ್ದಾರಿ ಎನಿಸಿಕೊಳ್ಳುತ್ತದೆ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದಿರುವ ಗ್ರಾಮ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಪಂ.ರಾಜ್) ಪ್ರವೀಣ ಗೋಣೆಮ್ಮನವರ ಮಾತನಾಡಿ, ಮತದಾನ ಸಂವಿಧಾನಾತ್ಮಕ ಹಕ್ಕು. ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಮೇ ಏಳರಂದು ಲೋಕಸಭೆ ಚುನಾವಣೆಗೆ ಮತದಾನ ನಿಗದಿ ಪಡಿಸಲಾಗಿದೆ ಎಲ್ಲರೂ ತಪ್ಪದೇ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಬೇಕು ಎಂದರು.
ಪಿಡಿಒ ಮಹೇಶ ಅಲ್ಲೀಪುರ ಮಾತನಾಡಿ ಈಗ ಬೇಸಿಗೆ ಅವಧಿ ಶುರುವಾಗಿದೆ. ಹೆಚ್ಚೆಚ್ಚು ಕೆಲಸ ಒದಗಿಸಲು ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳು ಆರಂಭವಾಗಿವೆ. ಕೆಲಸದ ಜೊತೆಗೆ ಮತದಾನ ಮಾಡುವುದು ಸಹ ನಮ್ಮ ಕರ್ತವ್ಯ ಎಂದರು.
ಇದೇ ವೇಳೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಟಿಎಇ ಜ್ಯೋತಿ ಕೆಲೂರ್ ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.





