“ಮಕ್ಕಳ ಹಕ್ಕುಗಳನ್ವಯ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣ ಮೊದಲ ಆದ್ಯತೆಯಾಗಬೇಕು. ಪ್ರತಿಯೊಬ್ಬ ತಂದೆ ತಾಯಿಗಳು ಬಾಲ್ಯದಲ್ಲಿದ್ದಾಗ ಈ ಎರಡು ವಿಷಯಗಳ ಬಗ್ಗೆ ಗಮನ ಹರಿಸಿ, ಮಕ್ಕಳನ್ನು ಪೋಷಿಸಿ ಬೆಳೆಸಿದರೆ, ಭವಿಷ್ಯದಲ್ಲಿ ಕುಟುಂಬದ ಜವಾಬ್ದಾರಿಯುತ ವ್ಯಕ್ತಿಯಾಗಿ, ನಾಡಿನ ಶಕ್ತಿಯಾಗಿ ಸಬಲರಾಗಿ ಬೆಳೆಯುತ್ತಾರೆ” ಎಂದು ಚಿಕ್ಕ ಮಕ್ಕಳ ತಜ್ಞವೈದ್ಯರಾದ ಡಾ. ಗೋಣೇಶ ಮೇವುಂಡಿ ಹೇಳಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಪಾಲಕ ಶಿಕ್ಷಕರ ಮಹಾ ಸಭೆ’ ಉದ್ಘಾಟಿಸಿ ಮಾತನಾಡುತ್ತಿದ್ದರು.
“ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಹಿರಿದಾಗಿದ್ದು, ಶಾಲಾ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮಕ್ಕಳು ಕಲಿಕೆಯಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು. ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ ಕೊಡಬೇಕು” ಎಂದರು.
ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, “ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ, ಮಕ್ಕಳ ನಿಯಮಿತ ಹಾಜರಾತಿ, ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು, ಮಕ್ಕಳ ಸ್ವಯಂ ಕಲಿಕೆಗೆ ಪೂರಕವಾಗಿ ಪಾಲಕರು, ಶಿಕ್ಷಕರು ಗಮನ ಹರಿಸುವಿಕೆಯ” ಕುರಿತು ವಿಸ್ತೃತವಾಗಿ ಮಾತನಾಡಿದರು.
ಶಾಲೆಯಲ್ಲಿ ಮಕ್ಕಳಿಗೆ ಅವರವರ ಆಸಕ್ತಿ ಅನುಭವಗಳಿಗೆ ಪೂರಕವಾಗಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿ ಕೊಡಬೇಕು. ಈ ಮೂಲಕ ಮಕ್ಕಳು ಸ್ಪೂರ್ತಿಯಿಂದ ಕಲಿಯುವಂತೆ ಪ್ರೇರೆಪಿಸುವ ಬಗ್ಗೆ ಪೋಷಕರಿಗೆ ತಿಳಿಸಿ. ಮಕ್ಕಳು ನಿಯಮಿತವಾಗಿ ಶಾಲೆಗೆ ಬರದಿದ್ದರೆ ಪಾಲಕರು, ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಶಿಕ್ಷಕ ಎಂ.ಆರ್. ಗುಗ್ಗರಿಯವರು ಇಲಾಖೆಯ ನಿರ್ದೇಶನದಂತೆ ಮಕ್ಕಳ ಕಲಿಕೆಯನ್ನು ಫಲಪ್ರದವಾಗುವಂತೆ ಮಾಡಲು ಶಾಲೆಯಲ್ಲಿ ಕೈಗೊಂಡಿರುವ ಎಲ್.ಬಿ.ಎ. ಆದಾರಿತ ಘಟಕವಾರು ಮೌಲ್ಯಾಂಕನ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಎಫ್. ಎಲ್. ಎನ್. ಆದರಿಸಿ ವಿಶೇಷ ತರಬೇತಿ ನೀಡುವುದರ ಕುರಿತು ಮಾಹಿತಿ ನೀಡಿದರು.
ಕಲಿಕೋಪಕರಣ ಪ್ರದರದಶನ: ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿರುವ ಕಲಿಕೋಪಕರಣಗಳು, ಕ್ರೀಡಾ ಸಾಧನ ಸಲಕರಣೆಗಳು, ವಿಜ್ಞಾನ ಮಾದರಿಗಳು, ಗಣಿತ ಸಾಮಗ್ರಿಗಳು, ಹಾಗೂ ವಾಚನಾಲಯದ ಮಕ್ಕಳ ಪುಸ್ತಕಗಳನ್ನು ಪಾಲಕ-ಪೋಷಕರು ವೀಕ್ಷಿಸಲು ನೆರವಾಗುವಂತೆ ತರಗತಿ ಕೋಣೆಗಳಲ್ಲಿ ಪ್ರದರ್ಶಿಸಲಾಗಿತ್ತು. ಮಕ್ಕಳ ಕಲಿಕಾ ಪ್ರಗತಿಯ ಕುರಿತೂ ಶಿಕ್ಷಕರೊಂದಿಗೆ ಪಾಲಕರು ಸಂವಾದ ನಡೆಸಿದರು.
ದೇಣಿಗೆ: ಇದೇ ಸಂದರ್ಭದಲ್ಲಿ ಶಿಕ್ಷಕ ಎಂ.ಆರ್. ಗುಗ್ಗರಿಯವರು ಶಾಲೆಗಳಿಗೆ ಮಕ್ಕಳ ಊಟಕ್ಕೆ ಅನುಕುಲವಾಗುವಂತೆ 50 ಸ್ಟೀಲ ತಟ್ಟೆಳನ್ನು ದಾನವಾಗಿ ನೀಡಿದರು. ಇದೇ ರೀತಿ ಮಕ್ಕಳ ವೈದ್ಯರಾದ ಡಾ. ಗೋಣೇಶ ಮೇವುಂಡಿಯವರು ಶಾಲಾ ಮಕ್ಕಳ ಕಲಿಕೆಗೆ ಆಧುನಿಕ ಸ್ಪರ್ಶ ನೀಡಲು ಮಲ್ಟಿ ಮಿಡಿಯಾ ತರಗತಿಗಳ ಕಲ್ಪನೆ ಸಾಕಾರಗೊಳಿಸಲು ಎರಡು ಟಿ.ವಿ. ಕೊಡಿಸುವ ವಾಗ್ದಾನ ಮಾಡಿದರು.
ಎಸ.ಡಿ. ಎಂ.ಸಿ. ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಬಸವರಾಜ ತಿಗರಿ, ಅಂದಪ್ಪ ಅಂಗಡಿ, ಮಹೇಶ ಬಾಗಳಿ, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಶ್ರೀಮತಿ ಮಂಗಳಾ ಕಾಶಪ್ಪ ಗೌಡರ, ಸದಸ್ಯರಾದ ಕೊಟೇಶ ಸುಣಗಾರ, ವಿಠಲ ಜಂಬಗಿ, ಪರಮೇಶ ದಂಡಿನ, ಲಕ್ಕಪ್ಪ ಗುಡಿ, ರಾಘವೇಂದ್ರ ಅಬ್ಬಿಗೇರಿ, ವೆಂಕಟೇಶ ಡೊಣ್ಣಿ, ವೆಂಕಟೇಶ ಗಾಳೆಪ್ಪನವರ, ಶಿಲ್ಪಾ ಫಕೀರೇಶ ಕಡೆಮನಿ, ಕಮಲಾಕ್ಷಿ ಯಮನಪ್ಪ ಹಿರೇಹೊಳಿ, ಸವಿತಾ ಅಣ್ಣಪ್ಪ ವಾಲಿಕಾರ, ಶಂಕ್ರವ್ವ ವೆಂಕಟೇಶ ಚೌಡಕಿ, ಶೋಭಾ ಪರಶುರಾಮ ಹೊಸಮನಿ, ರತ್ನವ್ವ ಕೊಳ್ಳಪ್ಪ ಸಂಗಟಿ, ಹಾಲಮ್ಮ ಜಿತೇಂದ್ರ ಬಾಗಳಿ, ಗಂಗಮ್ಮ ಯಲ್ಲಪ್ಪ ಸಜ್ಜೇರಿ, ಬಸವರಾಜ ಅಂಗಡಿ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಬಿ.ಎಚ್. ಹಲವಾಗಲಿ ಸ್ವಾಗತಿಸಿದರು. ಶ್ರೀಮತಿ ಪಿ.ಆರ್. ಗಾಡದ ವಂದಿಸಿದರು, ಪಿ.ಎಂ ಲಾಂಡೆ ಹಾಗೂ ಶಿವಲೀಲಾ ಅಬ್ಬಿಗೇರಿ ಕಾರ್ಯಕ್ರಮ ನಿರೂಪಿಸಿದರು.





