“ಜಾತ್ಯಾತೀತ ಪ್ರಜಾಸತ್ತಾತ್ಮಕ ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ. ಬಹುಸಂಖ್ಯಾತ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಾರಕವಾದ ಕೋಮುವಾದಿ ಆಡಳಿತ ಮುಕ್ತಗೊಳಿಸಿಬೇಕಿದೆ” ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಎಸ್ ಸುಂದರೇಶ ಹೇಳಿದರು.
ಗದಗ ನಗರದ ಗಾಂಧಿ ವೃತ್ತದಲ್ಲಿ ಸಮತಾ ರಾಜ್ಯದ ಕನಸುಗಳೊಂದಿಗೆ ಶ್ರಮ ಶಕ್ತಿಯ ಸಂಘರ್ಷದ ಶತಮಾನದ ಪಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
“ಭಾರತದ ಸಂವಿಧಾನಕ್ಕೆ ಪೂರಕವಾದ ಪ್ರಜಾಪ್ರಭುತ್ವ ಆಡಳಿತವನ್ನು ಪುನರ್ ಸ್ಥಾಪಿಸಲು ಜಾತ್ಯಾತೀತ ಶಕ್ತಿಗಳು ಇಂದು ಒಂದಾಗುವ ಕಾಲ ಸನ್ನಿತವಾಗಿದೆ. ದೇಶದ ಬಹುಸಂಖ್ಯಾತರ ಅಭಿವೃದ್ಧಿಗೆ ಮಾರಕವಾದ ಕೋಮುವಾದಿ ಸರಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಮತ್ತೊಮ್ಮೆ ೧೯೪೭ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಬೇಕು” ಎಂದು ಕರೆ ನೀಡಿದರು.
“ರಾಜ್ಯಾದ್ಯಂತ ಸಿಪಿಐ ಶತಮಾನೋತ್ಸವ ಜಾಥಾ ಸಂಚರಿಸುತ್ತಿದ್ದು ಇದೇ ತಿಂಗಳ ೨೩ಕ್ಕೆ ಜಾಥಾ ಬೆಂಗಳೂರನಲ್ಲಿ ಮುಕ್ತಾಯಗೊಳ್ಳಲಿದೆ. ರಾಜ್ಯಾದ್ಯಂತ ಜಾತ್ಯಾತೀತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿ ಕೋಮುವಾದ ಹಿಮ್ಮೆಟ್ಟಿಸುವ ಶಪಥ ಮಾಡಿದ್ದಾರೆ” ಎಂದು ತಿಳಿಸಿದರು.
“ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ದಲಿತ ಮುಖಂಡರು ವೆಂಕಟೇಶಯ್ಯ ಮಾತನಾಡಿ, “ಆರ್.ಎಸ್.ಎಸ್. ಹುನ್ನಾರದ ವಿರುದ್ಧ ನಾವೆಲ್ಲ ಹೋರಾಡೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಲಿತ ಮುಖಂಡರು ಸತೀಶ ಹುಲಿ, ರಮೇಶ ಬಾಳಮ್ಮನವರ, ನಾರಾಯಣಸ್ವಾಮಿ, ಎಐಸಿಯುಟಿ ನವಲೂರ, ಸಿಪಿಐನ ಷಣ್ಮುಖಸ್ವಾಮಿ, ಸತೀಶ ಪಾಸಿ, ವಾಸುದೇವ ಹುಣಸಿಮರದ, ಬಸವರಾಜ ಪೂಜಾರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಕಲಾಮಂಡಳಿ ಹಾಗೂ ಸಿಪಿಐ ಕಲಾ ತಂಡದಿಂದ ಕ್ರಾಂತಿ ಗೀತೆ ಹಾಡುವ ಮೂಲಕ ಸಾರ್ವಜನಿಕರಿಗೆ ಕೋಮುವಾದಿಗಳ ಬಂಡವಾಳ ಏನೆಂದು ತಿಳಿಸಲಾಯಿತು.ಪ್ರಾರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಪ್ರತಿಮೆಗೆ ಹೂವಿನ ಅರ್ಪನೆ ಮಾಡಲಾಯಿತು. ನಂತರ ಹಿರಿಯ ಸಾಹಿತಿ ಬಿ. ಬಾಬು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.





