“2012ರಲ್ಲಿ ಇಡೀ ರಾಜ್ಯವೇ ಬೆಚ್ಚಿಬಿದ್ದ, ಧರ್ಮಸ್ಥಳದ ಸಮೀಪದ ಉಜಿರೆಯ ಸುತ್ತಮುತ್ತ ನೂರಾರು ಅಸಹಜ ಸಾವುಗಳು ಸಂಭವಿಸುತ್ತಿರುವ ಕುರಿತು ವರದಿಯಾಗಿದ್ದಾವು. ಅದರಲ್ಲಿ ಉಜಿರೆ ಸಮೀಪದ ಪಾಂಗಳದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ, ಅದನ್ನು ಮುಚ್ಚಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನಗಳು ಮರೆಯಲಾರದ ಸಂಗತಿಗಳು” ಎಂದು ಸಿ.ಪಿ.ಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಒತ್ತಾಯಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, “ಈ ಪ್ರಕರಣದಲ್ಲಿ ಅಮಾಯಕನೊಬ್ಬನನ್ನು ಆರೋಪಿಯೆಂದು ಹೆಸರಿಸಿ ಜೈಲಿಗೆ ಹಾಕಿಸಿದ್ದರು. ದುರುದ್ದೇಶಪೂರ್ವಕವಾಗಿ ಸಾಕ್ಷಿ ನಾಶ ಮಾಡಿದ್ದರ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ನಂತರ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿ, ತನಿಖೆ ನಡೆದು ಸಿ.ಬಿ.ಐ ನ್ಯಾಯಾಲಯದ ತೀರ್ಪು ಕೂಡ ಬಂದಿದೆ. ತೀರ್ಪಿನ ಅನುಸಾರವಾಗಿ ಅಮಾಯಕನೆಂದು ಇಡೀ ರಾಜ್ಯ ಗಟ್ಟಿ ಧ್ವನಿಯಲ್ಲಿ ಹೇಳಿದ ವ್ಯಕ್ತಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ” ಎಂದರು.
“ಅದೇ ವೇಳೆಗೆ ಪ್ರಾಥಮಿಕ ಹಂತದಲ್ಲಿ ತನಿಖಾಧಿಕಾರಿಗಳು, ಶವಪರೀಕ್ಷೆ ಮಾಡಿದ ವೈದ್ಯಾಧಿಕಾರಿಗಳು ಉದ್ದೇಶಪೂರ್ವಕವಾಗಿ ಸಾಕ್ಷಿ ನಾಶಮಾಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸಿ.ಬಿ.ಐ.ನ್ಯಾಯಾಲಯ ಸೂಚನೆ ನೀಡಿತ್ತು. ಇಡೀ ಪ್ರಕರಣದಲ್ಲಿ ಈ ಮೊದಲೇ ಸಾಮಾಜಿಕ ಕಳಕಳಿಯ ಸಂಘಟನೆಗಳು, ವ್ಯಕ್ತಿಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರವಾಗಿದೆ. ಆದರೆ, ಸಾಕ್ಷಿ ದೂರುದಾರನ ಹೇಳಿಕೆಯ ನಂತರ ಕ್ಷಿಪ್ರಗತಿಯಲ್ಲಿ ಸರಕಾರವೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ” ಎಂದರು.
“ಎಲ್ಲ ಪ್ರಕರಣಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಮರು ತನಿಖೆ ಮಾಡಬೇಕು. ತನಿಖೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆದು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.





