ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ, ರಾಜ್ಯ ಸರ್ಕಾರವೇ ಗದಗ ಜಿಲ್ಲೆಯ ಗ್ರಾಮವೊಂದರಲ್ಲಿ ಸಲೂನ್ ಆರಂಭಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.
ಗದಗ ಜಿಲ್ಲೆಯಲ್ಲಿ ಶಿಂಗಟಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡದಂತೆ ಕ್ಷೌರಿಕರಿಗೆ ಪ್ರಬಲ ಜಾತಿಗೆ ಸೇರಿದವರು ತಾಕೀತು ಮಾಡಿದ್ದರು. ಪರಿಣಾಮ, ಗ್ರಾಮದ ದಲಿತರು ಕ್ಷೌರ ಮಾಡಿಸಿಕೊಳ್ಳಲು ನೆರೆಯ ಹಳ್ಳಿಗಳಿಗೆ ಹೋಗಬೇಕಾಗಿತ್ತು ಎಂದು ವರದಿಯಾಗಿತ್ತು.
ದಲಿತ ನಿವಾಸಿಗಳ ಮನವಿಯ ಮೇರೆಗೆ, ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ್ದಾರೆ. ಸರ್ಕಾರದಿಂದಲೇ ಕ್ಷೌರದ ಅಂಗಡಿಯನ್ನು ತೆರೆದಿದ್ದಾರೆ. ಅಂಗಡಿಯನ್ನು ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಈ ಕ್ಷೌರದ ಅಂಗಡಿಗೆ ನೆರೆಯ ತಿಪ್ಪಾಪುರ ಗ್ರಾಮದ ಬಸವರಾಜ ಹಡಪದ ಅವರನ್ನು ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಎಪ್‌ಸ್ಟೀನ್ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ
“ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಮತ್ತು ಮೂಲಭೂತ ಸೇವೆಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡಲು, ಅಸ್ಪೃಶ್ಯತೆ ನಿವಾರಣಾ ಜಾಗೃತಿ ಮತ್ತು ಸಾಮರಸ್ಯದ ಜೀವನ ಕಾರ್ಯಕ್ರಮದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸಮಾನ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಪ್ರತಿ ವರ್ಷ ಮಹಾನವಮಿಯ ಸಮಯದಲ್ಲಿ ವೀರಭದ್ರೇಶ್ವರ ಸ್ವಾಮಿಯು ಹಡಪದ ಸಮುದಾಯದವರ ಮನೆಗಳಿಗೆ ಭೇಟಿ ನೀಡುತ್ತಾರೆ. ಆ ಸಮಯದಲ್ಲಿ ದಲಿತರ ಕೂದಲು ಕತ್ತರಿಸುವುದು ಅಶುಭವೆಂಬ ಮೌಢ್ಯವು ಗ್ರಾಮದ ಜನರಲ್ಲಿದೆ. ಈ ಮೂಢನಂಬಿಕೆಯ ಕಾರಣದಿಂದಲೇ ಕೆಲವರು ದಲಿತರಿಗೆ ಕ್ಷೌರ ಮಾಡುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದರು.




