2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಕ ಮಾಡುವಂತೆ ಆಗ್ರಹಿಸಿ ಮಂಗಳವಾರ ಬಯಲಾಟ ಕಲಾವಿದರು ಗದಗ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಸುತಾರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಶೋಕ ಸುತಾರ ಮಾತನಾಡಿ, “ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಸಲಹಾ ಸಮಿತಿ ರಚಿಸಲಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯದ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸಾಹಿತಿಗಳು ಹಾಗೂ ಜಾನಪದ, ರಂಗಭೂಮಿ, ಮಾಧ್ಯಮ ವಿಭಾಗ, ವೈದ್ಯಕೀಯ, ಸಂಗೀತ ನೃತ್ಯ, ಚಿತ್ರಕಲೆ, ನ್ಯಾಯಾಂಗ, ಕಿರುತೆರೆ, ಚಲನಚಿತ್ರ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪದನಿಮಿತ್ಯ ಸದಸ್ಯರನ್ನು ಒಳಗೊಂಡಂತೆ ಎಲ್ಲ ವಿಭಾಗದ ತಜ್ಞರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
“ಆದರೆ, ಉತ್ತರ ಕರ್ನಾಟಕದ ಗಂಡು ಕಲೆಯಾಗಿರುವ ಬಯಲಾಟಕ್ಕೆ ಸಂಬಂಧಿಸಿದಂತೆ ಯಾವೊಬ್ಬ ತಜ್ಞರು ಅಥವಾ ಬಯಲಾಟ ಅಕಾಡೆಮಿಯ ಅಧ್ಯಕ್ಷರನ್ನು 2024-25 ಹಾಗೂ 2025-26ನೇ ಸಾಲಿನಲ್ಲಿ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಲ್ಲ. ಇದರಿಂದ ಉತ್ತರ ಕರ್ನಾಟಕದ ಗಂಡು ಕಲೆಯಾದ ಬಯಲಾಟ ಕಲೆಗೆ ಹಾಗೂ ಕಲಾವಿದರಿಗೆ ಅವಮಾನಿಸಿದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಕ್ಷಣವೇ ಈ ಲೋಪ ಸರಿಪಡಿಸಿ, ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ ಅವರನ್ನು ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಬೀದರ್ ಜಿಲ್ಲೆಗೆ 14 ಕೆಪಿಎಸ್ ಶಾಲೆ ಮಂಜೂರು
ಮನವಿ ಸಂದರ್ಭದಲ್ಲಿ ಬಯಲಾಟ ಕಲಾವಿದರು ರಾಮಚಂದ್ರ ಅರ್ಕಸಾಲಿ, ಮನೋಜ್‌ಕುಮಾರ ಸುತಾರ, ಮಲ್ಲೇಶಗೌಡ ತಿಮ್ಮನಗೌಡ್ರ, ಶಂಕರಪ್ಪ ವಿ. ಬಡಿಗೇರ, ಸುಭಾಸ ಮಳಗಿ, ಸಿದ್ಧಲಿಂಗೇಶ್ವರ ಮುಳ್ಳಾಳ, ನಿಖಿತಾ ಸುತಾರ, ಸುಭಾಷ ಕದಡಿ, ರಂಗಪ್ಪ ಮಡ್ಡಿಕಾರ, ಬಾಳಪ್ಪ ಮನಗೂಳಿ, ಪ್ರಕಾಶ ಬೆಣಕಲ್ಲ, ಖಾಜೇಸಾಬ ನಾರಾಯಣಕೇರಿ, ವಿರುಪಾಕ್ಷಪ್ಪ ಕ್ಷೇತ್ರಿ, ಉಮೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





