“ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಯೋಜನೆ ವರದಾನವಾಗಿದೆ. ಉದ್ಯೋಗ ಖಾತ್ರಿ ದಿನಕ್ಕೆ ₹ 370 ರೂ. ದುಡಿಯುವ ಕೈಗೆ ಕೆಲಸ, ಅಂತರ್ಜಲ ಮಟ್ಟ ಹೆಚ್ಚಳಕೆ ಪೂರಕವಾಗಿದೆ” ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರ ಗ್ರಾಮದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು.
“ಕೆರೆ ಹೂಳೆತ್ತುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಕೊಳವೆ ಬಾವಿಗಳಲ್ಲಿ ನೀರಿನ ಏರಿಕೆ ಆಗಲಿದೆ. ಗ್ರಾಮಸ್ಥರು ತಮ್ಮ ಗ್ರಾಮದ ಕೆರೆಯ ಸಂರಕ್ಷಣೆಗೆ ಒತ್ತು ಕೊಡಬೇಕು” ಎಂದು ಸಲಹೆ ನೀಡಿದರು.
“ನರೇಗಾ ಯೋಜನೆಯು ಗ್ರಾಮೀಣ ಜನರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಲ್ಲಿ ಕೆಲಸ ಒದಗಿಸಿ ಸ್ವಾವಲಂಬಿಗಳಾಗಿ ಮಾಡುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಜನರು ಕೂಲಿ ಕೆಲಸಕ್ಕಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಒದಗಿಸುವ ಕಾರ್ಯ ಮಾಡಲಾಗುತ್ತಿದೆ” ಎಂದು ಹೇಳಿದರು.
“ನರೇಗಾ ಯೋಜನೆ ಅಡಿಯಲ್ಲಿ ಬೇಸಿಗೆ ಅವಧಿಯಲ್ಲಿ 60 ದಿನಗಳ ಕಾಲ ಕೆಲಸ ಪಡೆದು ಗರಿಷ್ಠ 22,200 ರೂ. ಗಳಿಕೆ ಮಾಡಬಹುದು. ಇದರಿಂದ ರೈತರು ತಮ್ಮ ಕುಟುಂಬದ ಅಗತ್ಯಕ್ಕೆ ಬಳಕೆಗೆ ಅನುಕೂಲವಾಗಲಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಜನರು ಸ್ವಂತ ಊರಲ್ಲೇ ಕೂಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು
ಈ ಸಂದರ್ಭದಲ್ಲಿ ದೊಡ್ಡೂರ ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರ ಈಳಗೇರ, ಗ್ರಾಪಂ ಸದಸ್ಯರಾದ ಮಲ್ಲೇಶ ಮಣ್ಣಮ್ಮನವರ, ಪ್ರಮುಖರಾದ ನಾನಪ್ಪ ಲಮಾಣಿ, ಗ್ರಾಪಂ ಕಾರ್ಯದರ್ಶಿ ಆರ್.ಕೆ. ಗುರುವಿನ, ಬಿಎಫ್ಟಿ ತೀರಕಪ್ಪ ಲಮಾಣಿ, ಮಲ್ಲಿಕಾರ್ಜುನ ತಳವಾರ ಇತರರಿದ್ದರು.





