“ಫಾತಿಮಾ ಶೇಖ್ ೧೯ನೇ ಶತಮಾನದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ಪ್ರವರ್ತಕರು ಮತ್ತು ಸಮಾಜ ಸುಧಾರಕರು. ಪುಲೆ ದಂಪತಿಗಳೊಂದಿಗೆ ಸೇರಿ ದೇಶದ ಮೊದಲು ಬಾಲಕಿಯರ ಶಾಲೆಗಳನ್ನು ಸ್ಥಾಪಿಸಿದರು. ಶಿಕ್ಷಣದ ಕ್ರಾಂತಿಯನ್ನು ನಡೆಸಿ ಅಕ್ಷರದ ಬೆಳಕಿಗಾಗಿ ಹೋರಾಡಿದ ಫಾತಿಮಾ ಶೇಖ್ ಅವರು ಭಾರತದ ಮೊದಲು ಮುಸ್ಲಿಂ ಶಿಕ್ಷಕಿಯಾಗಿದ್ದಾರೆ” ಎಂದು ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ್ ಹೇಳಿದರು.
ಗದಗ ಪಟ್ಟಣದ ರಾಚೋಟೇಶ್ವರ ನಗರ ಸ್ಲಂ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಮಾತೆ ಫಾತಿಮಾ ಶೇಖ್ ಅವರ ೧೯೫ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು.
“ಸಮಾಜದಲ್ಲಿ ಅಜ್ಞಾನ, ಅಂಧಕಾರ, ಮೂಢನಂಬಿಕೆ ತುಂಬಿ ತುಳುಕುತ್ತಿದ್ದ ಕಾಲದಲ್ಲಿ ಸಂಪ್ರದಾಯಗಳನ್ನು ಮೆಟ್ಟಿ ನಿಂತ ದಿಟ್ಟೆ ಫಾತಿಮಾ ಶೇಖ್. ಅವರು ವಂಚಿತ ಸಮುದಾಯಗಳ ಶಿಕ್ಷಣಕ್ಕಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಮಾತೆ ಸಾವಿತ್ರಿಬಾ ಪುಲೆ ಹಾಗೂ ಫಾತಿಮಾ ಶೇಖ್ ಅವರ ಶೈಕ್ಷಣಿಕ ಕ್ರಾಂತಿಯನ್ನು ನಾವು ಅರಿತುಕೊಂಡು ಇವರ ಹೋರಾಟದ ಹೆಜ್ಜೆಗಳಲ್ಲಿ ನಮ್ಮ ಮಹಿಳಾ ಸಮಿತಿಯನ್ನು ನಡೆಸಬೇಕು” ಎಂದು ತಿಳಿಸಿದರು.
“ಸ್ಲಂ ಸಮಿತಿ ಅಧ್ಯಕ್ಷರು ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ, “ಮಾತೆ ಸಾವಿತ್ರಿಬಾ ಪುಲೆ ಹಾಗೂ ಫಾತಿಮಾ ಶೇಖ್ ಅವರು ೧೯ನೇ ಶತಮಾನದಲ್ಲಿಯೇ ಸಮಾಜದಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದವರು. ಹಲವಾರು ವಿರೋಧಗಳನ್ನು ಎದುರಿಸಿದವರು. ಚರಿತ್ರೆಯಲ್ಲಿ ಮರೆಯಾದ ಫಾತಿಮಾ ಶೇಖ್ ಅವರ ಬಗ್ಗೆ ಅರಿತುಕೊಳ್ಳುವುದು ಮತ್ತು ಶೋಧಿಸುವುದು ಇವತ್ತಿನ ಸಂದರ್ಭದಲ್ಲಿ ಅಗತ್ಯವಾಗಿದೆ” ಎಂದರು.
“ಶೋಷಣೆಗೆ ಈಡಾದ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಉದ್ದೇಶದಿಂದ ಸಾವಿತ್ರಿಬಾ ಪುಲೆ ಮತ್ತು ಫಾತಿಮಾ ಶೇಖ್ ಅವರ ಕೊಡುಗೆ ಅಪಾರವಾದದ್ದು. ಇಂದು ಬೇಟಿ ಬಚಾವೋ ಬೇಟಿ ಪಢಾವೋ ಎನ್ನುವ ಈ ಘೋಷಣೆವಾಕ್ಯವನ್ನು ಸಾಕಾರಗೊಳಿಸಲು ೧೯ನೇ ಶತಮಾನದಲ್ಲಿಯೇ ಮಾತೆ ಸಾವಿತ್ರಿಬಾ ಪುಲೆ ಮತ್ತು ಫಾತಿಮಾ ಶೇಖ್ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ಲಂ ಸಮಿತಿ ಮುಖಂಡರು ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹರುನಿಸಾ ಢಾಲಾಯತ, ಮಲೇಶಪ್ಪ ಕಲಾಲ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಕೊಪ್ಪಣ ಕಲಾಲ, ಸಿಕಂದರ ಪಾಪಣ್ಣನವರ, ಸಲೀಂ ಹರಿಹರ, ಶಂಕ್ರಪ್ಪ ಹದ್ಲಿ, ಸಾಕ್ರುಬಾಯಿ ಗೋಸಾವಿ, ಮೈಮುನ ಬೈರಕದಾರ ಹಾಗೂ ನೂರಾರು ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು. ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಕಾರ್ಯಕ್ರಮ ನಿರೊಪಿಸಿ ವಂದಿಸಿದರು.





