“ಸ್ವಾತಂತ್ರ್ಯ ನಂತರ ಬಡಜನರ ಬದುಕು ಬದಲಾಯಿಸಿದಂತಹ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆದ ಪಂಚ ಗ್ಯಾರಂಟಿ ಯೋಜನೆಯ ಕ್ರಾಂತಿಕಾರಕ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.
ಗದಗ ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಬುಧವಾರ ಜರುಗಿದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸಮಾಜವನ್ನು ಸುಧಾರಿಸಿ, ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಪ್ರತಿ ತಿಂಗಳು ತಲುಪಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಿದ್ದೆವೆ. 1 ಕೋಟಿ 10 ಸಾವಿರ ಹಣ ಜನರ ಕೈಮುಟ್ಟಿದೆ” ಎಂದರು.
“ಬಡವರ ಅಭಿವೃದ್ಧಿ ಬಯಸದೆ ಇರುವವರು ಪಂಚ ಗ್ಯಾರಂಟಿ ಕುರಿತು ಅಪಸ್ವರ ಎತ್ತುವರು. ಪಂಚ ಗ್ಯಾರಂಟಿ ಹಣ ತಲುಪಿಸುವುದರಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೇ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಿದ್ದರ ಅಭಿಮಾನ ಹಾಗೂ ಸಾರ್ಥಕ ಭಾವನೆ ರಾಜ್ಯ ಸರಕಾರಕ್ಕಿದೆ” ಎಂದರು.
“ಪಂಚ ಗ್ಯಾರಂಟಿಗಳನ್ನು ಮಾನವ ಹಕ್ಕುಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಗದಗ ಜನತೆ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು ಜನಪ್ರತಿನಿಧಿಗಳು ಹಂಚುವವರಾಗಿದ್ದು ಬಡಜನರಿಗೆ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ” ಎಂದರು.
ಮಹಾತ್ಮಾ ಗಾಂಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ಜರುಗಿದ ಸಮೀಕ್ಷೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 93%, ಗೃಹಜ್ಯೋತಿ 86%, ಗೃಹಲಕ್ಷ್ಮಿ 95.4%, ಶಕ್ತಿ ಯೋಜನೆಯಡಿ 86% ಫಲಾನುಭವಿಗಳು ತೃಪ್ತ ಹಾಗೂ ಸ್ವಾವಲಂಭಿ ಜೀವನ ಸಾಗಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ” ಎಂದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಜಿ.ಎಸ್.ಪಾಟೀಲ ಅವರು ಮಾತನಾಡಿ, “ರಾಜ್ಯ ಸರಕಾರದ ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬವನ್ನು ತಲುಪಿರುವುದು ತೃಪ್ತಿಕರವಾಗಿದೆ” ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಎಚ್.ಎಂ.ರೇವಣ್ಣ ಅವರು ಮಾತನಾಡಿ, “ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಗಳು ಪ್ರತಿಯೊಬ್ಬ ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು” ಎಂದರು.
“ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಲಾಗಿದೆ. ನಮ್ಮ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಉಳುವವನೆ ಒಡೆಯ, ಬಂಗಾರಪ್ಪನವರ ಆಶ್ರಯ ಯೊಜನೆ, ರೈತರಿಗೆ ಉಚಿತ ವಿದ್ಯುತ್ , ವೀರಪ್ಪ ಮೊಯಲಿ ಅವರು ಸಿ.ಇ.ಟಿ. ಹಾಗೂ ಎಸ್.ಎಂ ಕೃಷ್ಣ ಅವರು ರಾಜ್ಯದ ಆರ್ಥಿಕತೆಗೆ ಒತ್ತು ನೀಡುವದರ ಮೂಲಕ ರಾಜ್ಯದ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದರು” ಎಂದು ಹೇಳಿದರು.
“ಇವೆಲ್ಲವನ್ನೂ ಮೀರಿ ಸಿದ್ದರಾಮಯ್ಯನವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ. ರಾಜ್ಯ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ತಲಾ ಆದಾಯವು ಹೆಚ್ಚಳವಾಗಿದೆ” ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ ಅವರು ಮಾತನಾಡಿ, “ಗದಗ ಜಿಲ್ಲೆಯ ಇವತ್ತಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರು ಸ್ವಾಭಿಮಾನದ ಜೀವನ ಸಾಗಿಸುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ” ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಬಿ.ಬಿ.ಅಸೂಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಕಬರಸಾಬ ಬಬರ್ಚಿ, ಉಪಾಧ್ಯಕ್ಷರು ನೀಲಮ್ಮ ಬೋಳನವರ, ದೀಪಕ ಜಿ ಲಮಾಣಿ, ಹೇಮಂತಗೌಡ ಪಾಟೀಲ, ಪಿ.ಬಿ.ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಾದಿಕಾರದ ಅಧ್ಯಕ್ಷರು ಅಶೋಕ ಮಂದಾಲಿ, ಸಂಗನಗೌಡ ಪಾಟೀಲ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ನಾಗರಾಜ ಶಿವಪ್ಪ ಮಡಿವಾಳರ, ಶರಣಪ್ಪ ಬೆಟಗೇರಿ, ವೀರಯ್ಯ ಮಠಪತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾದಿಕಾರದ ಸದಸ್ಯರುಗಳಾದ ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸಿಕಟ್ಟಿ, ಶರೀಫ್ ಬೆಳೆಯಲಿ, ರಾಜೀವ ಗೊಡಚಪ್ಪ ಕುಂಬಿ, ಶಿವನಗೌಡ ಪಾಟೀಲ, ಆರ್.ಆರ್.ಗಡ್ಡದ್ದೇವರಮಠ, ಗೀತಾ ಬೀರಣ್ಣವರ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಗಣ್ಯರು, ಮುಖಂಡರುಗಳು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.





