“ಕುವೆಂಪು ಅವರು ಹೇಳಿದಂತೆ ಗದಗ ಸರ್ವ ಜನಾಂಗದ ಶಾಂತಿಯ ತೋಟ ಎಂಬುದಕ್ಕೆ ಸಾಕ್ಷಿಯಾಗಿದ್ದು ಕಲೆ ಎಂಬುದನ್ನು ಗದಗ ಜನರಿಂದ ತಿಳಿದುಕೊಳ್ಳಬಹುದಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಹೇಳಿದರು.
ಗದಗ ಪಟ್ಟಣದ ಬೀಷ್ಮಕೆರೆ ಆವರಣದಲ್ಲಿ ಸೋಮವಾರ ಸಾಯಂಕಾಲ ಜರುಗಿದ ಗಣರಾಜ್ಯೋತ್ಸ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಜಿಲ್ಲೆಯಲ್ಲಿ ಅನೇಕ ಕಲಾವಿದರಿದ್ದು ಅದನ್ನು ಅಭಿವ್ಯಕ್ತ ಪಡಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಜಿಲ್ಲೆಯ ಕಲಾವಿದರು ಇದರ ಸದುಪಯೋಗ ಪಡಿಸಿಕೊಂಡು ಗದಗ ಜಿಲ್ಲೆಯ ಹೆಸರನ್ನು ನಾಡಿನಾದ್ಯಂತ ಪಸರಿಸಲು” ಎಚ್ ಕೆ ಪಾಟೀಲ ಕರೆ ನೀಡಿದರು.
“ನಗರದಲ್ಲಿನ ಭೀಷ್ಮ ಕೆರೆ ಪ್ರವಾಸಿ ತಾಣವಾಗಿದ್ದು, ಕಪ್ಪತಗುಡ್ಡದಲ್ಲಿ ಸಫಾರಿ ವ್ಯವಸ್ಥೆ ಮಾಡಲಾಗಿದ್ದು ಪಾಲಕರು ತಮ್ಮ ಮಕ್ಕಳನ್ನು ಪರಿಸರದ ಅರಿವು ಮೂಡಿಸುವ ಉದ್ದೇಶದೊಂದಿಗೆ ಒಮ್ಮೆಯಾದರು ಭೇಟಿ ನೀಡಲು ತಿಳಿಸಿದ ಅವರು, ಲಕ್ಕುಂಡಿಯಲ್ಲಿ ಸಧ್ಯ ಚಿನ್ನ ದೊರೆಯುತ್ತಿದ್ದು ಚಿನ್ನಕ್ಕಿಂತ ಹೆಚ್ಚಿನ ಬೆಲೆಯ ಅಲ್ಲಿನ ಶಿಲ್ಪಕಲೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.
“ಇಂದು ಜರುಗಿದ ಚಿತ್ರಕಲಾ ಶಿಕ್ಷಕರ ಸಂಘದಿಂದ ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ಮನಸೂರೆಗೊಂಡಿದ್ದು, ಚಿತ್ರಕಲೆಯನ್ನು ಅಭಿವ್ಯಕ್ತ ಪಡಿಸಿದ ಚಿತ್ರಕಲಾ ಶಿಕ್ಷಕರ ಸಂಘಕ್ಕೆ ಒಂದೂವರೆ ಲಕ್ಷಗಳ ಅನುದಾನವನ್ನು ಪ್ರೋತ್ಸಾಹ ಧನವನ್ನಾಗಿ ಒದಗಿಸಲು” ಸಚಿವ ಎಚ್ ಕೆ ಪಾಟೀಲ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್ ಎಸ್ ಬುರುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಡಾ. ಬಸವರಾಜ ಬಳ್ಳಾರಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೆಶಕ ಡಾ. ಶರಣು ಗೊಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ವಿಧ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸರ್ವರನ್ನೂ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ ವಿಧ್ಯಾರ್ಥಿಗಳು ಹಾಗೂ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.





