ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಅವರು ಶಿರಹಟ್ಟಿ ಫಕೀರೇಶ್ವರ ಮಠದಿಂದ ಹೊರ ನಡೆಯುವಂತೆ ಆಗ್ರಹಿಸಿ ʼಗೋ ಬ್ಯಾಕ್ʼ ಅಭಿಯಾನ ಆರಂಭಿಸಲಾಗುವುದು ಎಂದು ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಮಠದ ಭಕ್ತರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ (ಏ.12) ಶಿರಹಟ್ಟಿಯಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಇರುವಂತೆ ಮಠಾಧೀಶರು ರಾಜಕೀಯ ಪ್ರವೇಶ ಮಾಡುವುದು ನಮ್ಮಲ್ಲಿ ನಿಷಿದ್ಧ. ರಾಜ್ಯದ ಮಠಾಧೀಶರು ಧರ್ಮ ಜಾಗೃತಿ ಮಾಡಿಕೊಂಡು ಇರಬೇಕು. ಒಂದು ವೇಳೆ ಅವರಿಗೆ ರಾಜಕೀಯ ಪ್ರವೇಶ ಮಾಡುವ ಇಚ್ಛೆ ಇದ್ದಲ್ಲಿ ಮಠ ಬಿಟ್ಟು ಹೊರನಡೆಯಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಶೇ.5ರಷ್ಟಿರುವ ಬ್ರಾಹ್ಮಣರು ನಮ್ಮನ್ನು ಆಳುತ್ತಾರೆಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಫಕೀರೇಶ್ವರ ಮಠ ಭಾವೈಕ್ಯದ ಮಠ. ಆದರೆ, ಆ ಮಠದ ಉತ್ತರಾಧಿಕಾರಿ ಆಗಿರುವ ದಿಂಗಾಲೇಶ್ವರ ಶ್ರೀಗಳು ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡುತ್ತಿದ್ದಾರೆ. ಬ್ರಾಹ್ಮಣರು ಶೇ. 5 ಅಥವಾ ಶೇ. 10ರಷ್ಟಾದರೂ ಇರಲಿ. ಬ್ರಾಹ್ಮಣರ ಬಗ್ಗೆ ಆ ರೀತಿ ಮಾತನಾಡುವುದೇ ಆದರೆ, ಅವರು ಖಾವಿ ತ್ಯಜಿಸಿ, ಖಾದಿ ಧರಿಸಿ ರಾಜಕೀಯ ಪ್ರವೇಶ ಮಾಡಲಿ ಎಂದು ಕಿಡಿಕಾರಿದರು.
ಫಕೀರೇಶ್ವರ ಮಠವನ್ನು ಸುತ್ತೂರು, ಸಿದ್ಧಗಂಗಾ ಮಠದಂತೆ ಶೈಕ್ಷಣಿಕವಾಗಿ ಉನ್ನತೀಕರಿಸುತ್ತಾರೆ ಎಂಬ ಆಶಯದಿಂದ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದೆವು. ಆದರೆ, ಅವರು ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿದ್ದಾರೆ. ಅವರು ತಮ್ಮ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡುತ್ತಾರೆ. ಮೋದಿ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಅವರಿಗೆ ನಾವು ಯಾವ ಲೆಕ್ಕ. ಏ.18ಕ್ಕೆ ಅವರು ಏನು ನಿರ್ಣಯ ತೆಗೆದು ಕೊಳ್ಳುತ್ತಾರೋ ಅದರ ಮೇಲೆ ಶಿರಹಟ್ಟಿ ಜನತೆ, ಮಠದ ಭಕ್ತರು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.





