“ರಾಜ್ಯ ಸರಕಾರವನ್ನು ಪ್ರತಿನಿಧಿಸುವ ರಾಜ್ಯಪಾಲರು ಸರಕಾರ ನಡೆಸುವ ಪ್ರತಿ ವರ್ಷದ ಮೊದಲ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ಮಂತ್ರಿಮಂಡಲ ಸಿದ್ಧಪಡಿಸಿದ ವರದಿ ಓದುವುದನ್ನು ಸಂವಿಧಾನದ ಕಲಂ 176 ವಿಧಿಸುತ್ತದೆ. ರಾಜ್ಯದ ರಾಜ್ಯಪಾಲರು ತಾವರಚಂದ್ ಗೆಹ್ಲಟ್ ಸಂವಿಧಾನದ ವಿಧಿಯಂತೆ ನಡೆದುಕೊಳ್ಳದೆ, ಜಂಟಿ ಸದನ ಅಧಿವೇಶನದಲ್ಲಿ ಸರಕಾರದ ಭಾಷಣ ಓದದೆ ತನ್ನದೆ ಮಾತುಗಳನ್ನಾಡಿ ನಿರ್ಗಮಿಸಿರುವುದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ) ಗದಗ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲು ರಾಠೋಡ ಖಂಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ರಾಜ್ಯಪಾಲರು, ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆ ಹೊರತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಂತ್ರಿಮಂಡಲದ ಮೇಲಿನ ಸೂಪರ್ ಮುಖ್ಯಮಂತ್ರಿಯಲ್ಲ! ರಾಜ್ಯಪಾಲರು ಕೇಂದ್ರ ಸರಕಾರದ ಮೂಲಕ ನೇಮಕಗೊಂಡವರು, ಚುನಾಯಿತ ಪ್ರತಿನಿಧಿಗಳು ಅಲ್ಲ. ಬದಲಿಗೆ ರಾಜ್ಯ ಸರಕಾರವು, ರಾಜ್ಯದ ಜನತೆಯ ಮತದಾನದ ಮೂಲಕ ಆಯ್ಕೆಯಾದ ಜನ ಪ್ರತಿನಿಧಿಗಳಾದ ಶಾಸಕರು, ಅದರಲ್ಲು ಬಹುಮತ ಪಡೆದ ಪಕ್ಷದ ಶಾಸಕರು ಸರಕಾರ ರಚನೆಗೆ ತನ್ನ ನಾಯಕನನ್ನು ಆಯ್ಕೆ ಮಾಡಿಕೊಂಡು ಸರಕಾರ ರಚಿಸಲು ಅವಕಾಶ ಮಾಡಿಕೊಡುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದದ್ದು ಎಂಬುದನ್ನು ಜನತೆ ಇಲ್ಲಿ ಗಮನಿಸಬೇಕಾಗಿದೆ” ಎಂದರು.
ಹೀಗಾಗಿ, ರಾಜ್ಯ ಸರಕಾರದ ಅಥವಾ ಮಂತ್ರಿಮಂಡಲ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು, ರಾಜ್ಯ ಸರಕಾರವನ್ನು ಪ್ರತಿನಿಧಿಸಿ ಜಂಟಿ ಸದನದಲ್ಲಿ ರಾಜ್ಯಪಾಲರು ಓದುವುದು ಅವರ ಕರ್ತವ್ಯವಾಗಿದೆ. ಅದನ್ನು ತಮ್ಮ ಮನಬಂದಂತೆ ತಿದ್ದುಪಡಿಗೆ ಕ್ರಮವಹಿಸುವುದುಕ್ಕೆ ಮತ್ತು ವ್ಯತಿರಿಕ್ತವಾಗಿ ತಮ್ಮದೆ ಭಾಷಣ ಮಾಡಲು ಅದು ರಾಜ್ಯಪಾಲರ ವೈಯ್ಯಕ್ತಿಕ ಭಾಷಣವಲ್ಲವೆಂಬುದನ್ನು ಇಲ್ಲಿ ಗಮನಿಸಬೇಕಾಗಿದೆ” ಎಂದು ಹೇಳಿದರು.
“ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆಂಬುದನ್ನು ಮರೆತು ಕೇಂದ್ರ ಸರಕಾರದ ಪ್ರತಿನಿಧಿಗಳೆಂಬಂತೆ ಅಥವಾ ರಾಜಕೀಯ ಪ್ರತಿನಿಧಿಗಳೆಂಬಂತೆ ವರ್ತಿಸುತ್ತಿರುವುದು, ರಾಜ್ಯ ಸರಕಾರಗಳ ಜತೆ ನಿತ್ಯ ತಿಕ್ಕಾಟಕ್ಕೆ ನಿಲ್ಲುವುದು ಕಂಡುಬಂದಿದೆ. ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ” ಎಂದರು.
“ದೇಶದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸಂಬಂಧಗಳನ್ನು ಬಲಗೊಳಿಸುವ ಬದಲು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ, ರಾಜ್ಯ ಸರಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ರಾಜ್ಯಪಾಲರ ಕಛೇರಿ ಹಾಗು ಸ್ಥಾನವನ್ನು ದುರುಪಯೋಗ ಮಾಡುತ್ತಿರುವುದನ್ನು ನಾವೀಗಾಗಲೇ ಗಮನಿಸಿದ್ದೇವೆ. ಜನತೆ ಇದನ್ನು ತಡೆಯಬೇಕಾಗಿದೆ.ರಾಜ್ಯ ಪಾಲರು ಸಂವಿಧಾನವನ್ನು ಗೌರವಿಸದೇ ಜಂಟಿ ಸದನದ ಅಧಿವೇಶನದಲ್ಲಿ ಸಾಂವಿಧಾನಿಕ ಕ್ರಮದಂತೆ ಸರಕಾರದಿಂದ ಸಿದ್ಧಪಡಿಸಿಕೊಟ್ಟ ಭಾಷಣ ಓದದೇ ನಾಲ್ಕು ವಾಕ್ಯಗಳನ್ನು ಹೇಳಿ ನಿರ್ಗಮಿಸಿದ್ದು ಸರಿಯಾದ ಕ್ರಮವಲ್ಲ” ಎಂದು ತಿಳಿಸಿದರು.
“ಇದೇ ವೇಳೆಗೆ ಅಧಿಕೃತ ವಿರೋಧ ಪಕ್ಷ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ.ಜೆ.ಪಿ. ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದೆ ಇದು ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ಇದನ್ನೂ ಸಿಪಿಐ(ಎಂ) ಖಂಡಿಸುತ್ತದೆ” ಎಂದರು.
“ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆಂಬುದನ್ನು ಮರೆತು ಕೇಂದ್ರ ಸರಕಾರದ ಪ್ರತಿನಿಧಿಗಳೆಂಬಂತೆ ಅಥವಾ ರಾಜಕೀಯ ಪ್ರತಿನಿಧಿಗಳೆಂಬಂತೆ ವರ್ತಿಸುತ್ತಿರುವುದು, ರಾಜ್ಯ ಸರಕಾರಗಳ ಜತೆ ನಿತ್ಯ ತಿಕ್ಕಾಟಕ್ಕೆ ನಿಲ್ಲುವುದು ಕಂಡುಬಂದಿದೆ. ಅದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು” ಸಿಪಿಐ(ಎಂ) ಅಭಿಪ್ರಾಯ ಪಡುತ್ತದೆ.





