ಮುಳುಗುಂದ ಸಮೀಪದ ಕುರ್ತಕೋಟಿ ಗ್ರಾಮದಲ್ಲಿ ಅಂದಾಜು ₹1 ಕೋಟಿ 70 ಲಕ್ಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಯನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾಮಗಾರಿ ವೀಕ್ಷಿಸಿ ಹಾಜರಿದ್ದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಕಾಮಗಾರಿಯ ಪ್ರಗತಿ ಕುರಿತು ವಿವರಗಳನ್ನು ಪಡೆದುಕೊಂಡು ಸಚಿವ ಎಚ್ ಕೆ ಪಾಟೀಲ್ ಮಾತನಾಡಿದರು.
ಗ್ರಾಮದ ಆಡಳಿತದ ಕೇಂದ್ರವಾಗಿರುವ ಈ ಗ್ರಾಪಂ ಕಟ್ಟಡವು ರಾಜ್ಯದಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ನಿರ್ಮಾಣವಾಗಬೇಕು. ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸುವಂತೆ ಸ್ಪಷ್ಟ ಸೂಚನೆ ನೀಡಿದರು.
“ಕುರ್ತಕೋಟಿ ಗ್ರಾಮವು ಅಭಿವೃದ್ಧಿ ವಿಚಾರದಲ್ಲಿ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಕೈಗೊಳ್ಳಲಾಗಿರುವ ಪ್ರತಿಯೊಂದು ಅಭಿವೃದ್ಧಿ ಕಾರ್ಯವೂ ಮಾದರಿಯಾಗಿವೆ. ಜನೋಪಯೋಗಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಕೆಲಸಗಳು ಶ್ಲಾಘನೀಯವಾಗಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರ್ತಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ, ರವಿ ಮೂಲಿಮನಿ, ಗಿರೀಶ ಡವಾಲಿ, ಭಕ್ಷಿಸಾಬ ತಹಶೀಲ್ದಾರ, ಶೇಖರಯ್ಯ ಹೊಸಮಠ, ಶಿವಣ್ಣ ಗಾಡರಡ್ಡಿ, ಜಿ.ಎನ್. ಪಾಟೀಲ, ಮಲ್ಲಪ್ಪ ಇನಾಮತಿ, ರಾಜೇಸಾಬ ತಹಶೀಲ್ದಾರ, ಶೇಖಪ್ಪ ಈಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು





