“ಕಾನ್ಸಿರಾಂ ಸಾಹೇಬರ ಶ್ರಮ ಅರಿತುಕೊಂಡು ಅವರ ಹಾದಿಯಲ್ಲೇ ಸಾಗಬೇಕಾಗಿದೆ. ಅಕ್ಕ ಮಾಯಾವತಿ ಜೀ ಅವರನ್ನು ಈ ಮುಂದಿನ ಚುನಾವಣೆಯಲ್ಲಿ ಬಹುಜನರು ಒಟ್ಟಾಗಿ ಪ್ರಧಾನಮಂತ್ರಿಯನ್ನಾಗಿ ಮಾಡಲು ಪ್ರತಿ ಗ್ರಾಮೀಣ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಬೇಕು. ಅವರಿಗೆ ಮತ ಹಾಕಿಸಿ ಗೆಲ್ಲಿಸಿ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ಶ್ರಮಿಸಬೇಕು” ಎಂದು ರಾಜ್ಯ ಕಾರ್ಯದರ್ಶಿ ಯಲ್ಲಪ್ಪ ಸಂಕೆಣ್ಣವರ ಹೇಳಿದರು.
ಗದಗ ಪಟ್ಟಣದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಮಾನ್ಯವಾರ್ ಕಾನ್ಸಿರಾಂ ನಾಯಕರ ೧೯ನೇ ಪರಿನಿಬ್ಬಾಣ ಆಚರಣೆ ಮತ್ತು ಬಹುಜನ ಸಮಾಜ ಕಾರ್ಯಾಲಯ ಆರಂಭದೊಂದಿಗೆ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯ ಸಮಿತಿ ನಾಯಕರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಎಂ. ಬಿ. ಸಿದಗೋಣಿ ಮಾತನಾಡಿ, “ಬಹುಜನಗಳಾದ ನಾವೆಲ್ಲರೂ ಒಂದಾಗಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯದ ಭಾರತವನ್ನು ನಿರ್ಮಿಸುವಲ್ಲಿ ಈಗಿನ ಬಿಜೆಪಿ ಕಾಂಗ್ರೆಸ್ ವಿಫಲವಾಗಿವೆ. ಬಿಜೆಪಿ ಸರ್ಕಾರವೂ ಖಾಸಗೀಕರಣಗೊಳಿಸಿ ಬಹುಜನರನ್ನು ಮೋಸಗೊಳಿಸುತ್ತಿದ್ದಾರೆ” ಎಂದರು.
ನೂತನ ಅಧ್ಯಕ್ಷರು ಗುಡದಪ್ಪ ಕೆಂಚಪ್ಪ ತಳಗೇರಿ ಮಾತನಾಡಿ, “ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿದಂತೆ ವಿವಿಧ ಜನರ ಬಳಿ ಹೋಗಿ ಪಕ್ಷದ ಸಿದ್ಧಾಂತ ತಿಳಿಸಿ, ಸಂವಿಧಾನ ಆಶಯಗಳನ್ನು ಹೊಂದಿರುವ ಬಿ ಎಸ್ ಪಿ ಪಕ್ಷವನ್ನು ಬೆಂಬಲಿಸಲಿ. ಸೈದ್ದಾಂತಿಕವಾಗಿ ಭ್ರಷ್ಟತೆ ಇಲ್ಲದೇ ಡಂಬಚಾರ ರಾಜಕೀಯ ಮಾಡದಿರುವ ಏಕೈಕ ಪಕ್ಷ ಬಿ ಎಸ್ ಪಿ ಆಗಿದೆ. ಮುಂದಿನ ದಿನಗಳಲ್ಲಿ ಅಕ್ಕ ಮಾಯಾವತಿ ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಿ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ಕಾರ್ಯಕರ್ತರು ಪಣತೊಟ್ಟು ನಿಲ್ಲಬೇಕಾಗಿದೆ” ಎಂದರು.
ಇದನ್ನು ಓದಿದ್ದೀರಾ? ಗದಗ | ರಾಜ್ಯೋತ್ಸವ ಪ್ರಶಸ್ತಿ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಕ ಮಾಡಲು ಆಗ್ರಹ
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ನಾಯಕರ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಹನುಮಂತ ಮಾದರ, ಖಜಾಂಚಿ ಮಂಜುನಾಥ ಎಸ್, ಆಕಾಶ್ ಎಸ್ ಆಯ್ಕೆಯಾದರು. ರಾಜ್ಯ ಸಮಿತಿ ನಾಯಕರು, ಗದಗ ಜಿಲ್ಲೆಯ ವಿವಿಧ ತಾಲೂಕಿನ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.





