ಪ್ರಸಿದ್ಧ ಐತಿಹಾಸಿಕ ಸ್ಥಳ ಲಕ್ಕುಂಡಿ ಗ್ರಾಮದಲ್ಲಿನ ಉತ್ಖನನ ಕಾರ್ಯ ಆರನೇ ದಿನಕ್ಕೆ ಕಾಲಿಟ್ಟಿದ್ದು, ಐತಿಹಾಸಿಕ ಪಾಣಿಪೀಠ, ಮೂಳೆ ತುಂಡುಗಳು, ಮಣ್ಣಿನ ಬಿಲ್ಲೆ(ನಾಣ್ಯ) ಹಾಗೂ ಮಣ್ಣಿನ ಚೂರುಗಳು ಪತ್ತೆಯಾಗಿದ್ದು, ಮತ್ತಷ್ಟು ಇತಿಹಾಸಕ್ತರಿಗೆ ಕುತೂಹಲ ಮೂಡಿಸಿದೆ.
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರ ದೇವಾಲಯದ ಮುಂಭಾಗದ ಅವರಣದಲ್ಲಿ ಇಂದಿಗೆ ಆರು ದಿನಗಳಿಂದ ಉತ್ಖನನದ ಕಾರ್ಯ ಭರದಿಂದ ನಡೆದಿದೆ.
ಎರಡು ಮೂರನೇ ದಿನದ ಶಿವಲಿಂಗದ ಪಾಣಿಪೀಠ, ಕಲ್ಲಿನ ಗಂಟೆ, ನಾಗರಹಾವಿನ ಕಲ್ಲು ಹಾಗೂ ಈಶ್ವರ ಲಿಂಗ ಪತ್ತೆಯಾಗಿದ್ದವು. ನಾಲ್ಕನೇ ದಿನದ ಉತ್ಖನನದಲ್ಲಿ ಒಂದು ಕಲ್ಲಿನ ಕೊಡಲಿ ಹಾಗೂ ಇನ್ನೊಂದು ಕಟ್ಟಡದ ಮೇಲ್ಛಾವಣಿಗೆ ಬಳಸುವ ಕಲ್ಲಿನ ಬೋದಿ ಪತ್ತೆಯಾಗಿದ್ದವು.

ಐದನೇ ದಿನದ ಉತ್ಖನನದಲ್ಲಿ ಎರಡು ಅವಶೇಷಗಳು ಪತ್ತೆಯಾಗಿವೆ. ಒಡೆದ ಮಡಿಕೆ ಆಕೃತಿಯ ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಹಳೆಯ ಕಾಲದ್ದು ಎನ್ನಲಾಗಿದೆ. ಇನ್ನೊಂದು ಎರಡು ತುಂಡುಗಳಾಗಿರುವ ಸ್ಥಿತಿಯಲ್ಲಿ ಪಾಣಿಪೀಠ ಸಿಕ್ಕಿದ್ದು, ಜಿನ ಬಿಂಬವುಳ್ಳ ಪೀಠ (ತೃಟಿತ) ಅರ್ಧ ಭಾಗದ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಜಿನ ಬಿಂಬವುಳ್ಳ ಪೀಠದ ಒಂದು ಭಾಗದಲ್ಲಿ ಪದ್ಮಾಸನ ಭಂಗಿಯಲ್ಲಿ ಕೈಮುಗಿದು ಕುಳಿತ ರೂಪದ ಕಲಾಕೃತಿಯಿದೆ. ವೈಜ್ಞಾನಿಕವಾಗಿ ಜೋಡಿಸಿ ಮೂಲ ಸ್ವರೂಪಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ಖನನ ಕಾರ್ಯ ಇಂದು(ಬುಧವಾರ) ಆರನೇ ದಿನಕ್ಕೆ ಕಾಲಿಟ್ಟಿದ್ದು, ಮೂಳೆಯ ತುಂಡುಗಳು ಹಾಗೂ ಪ್ರಾಚೀನ ಕಾಲದ ಮಣ್ಣಿನ ಬಿಲ್ಲೆಗಳು ಹಾಗೂ ವಿಶಿಷ್ಟವಾದ ಮಡಿಕೆ ಚೂರುಗಳು (Pottery Shards) ಪತ್ತೆಯಾಗಿವೆ.

ಸಿಕ್ಕ ಐದಾರು ಚಿಕ್ಕ ಚಿಕ್ಕ ಮೂಳೆಯ ತುಂಡುಗಳು ಉತ್ಖನನ ಉಸ್ತುವಾರಿ ಸಿಬ್ಬಂದಿಗಳು ಸೂಕ್ಷ್ಮವಾಗಿ ಸಂಗ್ರಹಿಸುತ್ತಿದ್ದಾರೆ. ಈ ಮೂಳೆಗಳು ಪ್ರಾಣಿಗಳದ್ದಾ ಅಥವಾ ಮನುಷ್ಯರದ್ದ ಎನ್ನುವ ಮಾಹಿತಿ ಸಿಕ್ಕಿಲ್ಲ. ಪರೀಕ್ಷೆಗಳ ನಂತರ ಸ್ಪಷ್ಟನೆ ಸಿಗಲಿದೆ.
ಇನ್ನೂ ಪತ್ತೆಯಾದ ಮಣ್ಣಿನ ಬಿಲ್ಲೆ(ನಾಣ್ಯ) ಮತ್ತು ಮಡಿಕೆ ಚೂರುಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇವುಗಳ ಕಾಲಮಾನ ಮತ್ತು ಅಂದಿನ ಜನರ ಜೀವನಶೈಲಿಯ ಕುರಿತು ಹೆಚ್ಚಿನ ಅಧ್ಯಯನ ನಡೆಯಲಿದೆ.
ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಉತ್ಖನನ ನಡೆಯುತ್ತಿದೆ.





