“ನಮ್ಮ ಜಿಲ್ಲೆಯನ್ನು ನಶಾಮುಕ್ತ ಗದಗ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲ ಪಣ ತೊಡಬೇಕಿದೆ. ರಾಜ್ಯಾದ್ಯಂತ ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಕಾನೂನು ಹಾಗೂ ಸಂಸದಿಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.
ಗದಗ ಪಟ್ಟಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಅದರ ಅಂಗ ಸಂಸ್ಥೆಗಳಾದ ಗದಗ ಜಿಲ್ಲೆಯ ಮೆಡಿಕಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಂಗಾಂಗದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಶೇ 10ರಷ್ಟು ಯುವ ಜನಾಂಗ ನಶೆಯ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕಳವಳಕಾರಿ. ಇದು ಒಬ್ಬ ವಿದ್ಯಾರ್ಥಿಯನ್ನು ಮಾತ್ರವಲ್ಲ, ಅವನ ಕುಟುಂಬ, ಸಮಾಜ ಹಾಗೂ ಇಡೀ ದೇಶವನ್ನೇ ಸಂಕಷ್ಟಕ್ಕೆ ದೂಡುವಂತಹ ಸಂಗತಿ. ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ವಿರುದ್ಧ ಹೋರಾಡಬೇಕಿದೆ” ಎಂದು ಅವರು ಅಭಿಪ್ರಾಯಪಟ್ಟರು.
“ಇಂದು ಇಲ್ಲಿ ನೆರೆದಿರುವಂತಹ ಎಲ್ಲ ವಿದ್ಯಾರ್ಥಿಗಳು, ಯುವ ಜನರು, ಪೋಷಕರು ಹಾಗೂ ಅಧ್ಯಾಪಕ ವರ್ಗದವರು ‘ನಾನು ನಶೆಯ ಗುಲಾಮನಾಗುವುದಿಲ್ಲ’ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಹಾಗೆಯೇ ಸ್ನೇಹಿತರನ್ನು, ಬಂಧುಗಳನ್ನು ನಶೆಯ ಜಗತ್ತಿಗೆ ಪ್ರವೇಶಿಸದಂತೆ ತಡೆಯಬೇಕು. ದುಶ್ಚಟಗಳ ಬಳಿ ಸಾರದಂತೆ ಸ್ನೇಹಿತರನ್ನು ತಡೆಯುವುದು ಅಥವಾ ದುಶ್ಚಟಗಳಿಂದ ಅವರನ್ನು ಮುಕ್ತಗೊಳಿಸುವುದು ಸ್ನೇಹಿತರಿಗೆ ನೀವು ಕೊಡುವ ಬಹುದೊಡ್ಡ ಉಡುಗೊರೆ” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಆತ್ಮನಿರ್ಭರ, ನಶಾ ಮುಕ್ತ ಭಾರತಕ್ಕೆ ಸಂಕಲ್ಪ: ಸಂಸದ ಬಸವರಾಜ ಬೊಮ್ಮಾಯಿ
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಕೆ.ಎಚ್. ಪಾಟೀಲ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಎಚ್. ಕೆ. ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಎಲ್. ಬುರಬುರೆ ,ಗದಗ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಎಸ್. ಎಸ್. ನೀಲಗುಂದ , ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕಿರಣ ಕುಳಗೇರಿ, ಡಾ. ಜೀವನ್ನವರ್, ಸೆನೆಟ್ ಸದಸ್ಯರಾದ ಡಾ. ವಿರೇಶ ಹಂಚಿನಾಳ, ಡಾ. ಜಗದೀಶ ಕೋನರೆಡ್ಡಿ, ಡಾ. ಸಂಕನಗೌಡ ಪಾಟೀಲ್, ಡಾ. ಸಂತೋಷ ಇಂಡಿ ಹಾಜರಿದ್ದರು. ಗದಗ ಜಿಲ್ಲೆಯ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು, ಅದ್ಯಾಪಕರು ಹಾಗೂ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.





