ಗದಗ | ನಿರ್ಲಕ್ಷ್ಯಕ್ಕೆ ಬಲಿಯಾದ ಮೊರಾರ್ಜಿ ವಸತಿ ಶಾಲೆ; ಸೌಲಭ್ಯಗಳಿಲ್ಲ, ಸುರಕ್ಷತೆಯೂ ಇಲ್ಲ!

Date:

ಸರ್ಕಾರಿ ಶಾಲೆಗಳು, ವಸತಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚುತ್ತಿರುವ ದಿನಗಳಿವು. ಮೊದಲೇ ಮೂಲ ಸೌಕರ್ಯ, ಶಿಕ್ಷಕರ ಕೊರತೆ ಅನುಭವಿಸುತ್ತಿರುವ ಶಾಲೆಗಳ ಪಟ್ಟಿಗೆ ಇದೀಗ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಮೊರಾರ್ಜಿ ವಸತಿ ಶಾಲೆ ಸೇರ್ಪಡೆಯಾಗಿದೆ. ನಿಲಯದಲ್ಲಿ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯಗಳ ಅಸಮರ್ಪಕ ನಿರ್ವಹಣೆ, ಪಠ್ಯ ಪುಸ್ತಕ, ಶೂ-ಸಾಕ್ಸ್, ಸ್ಪೋರ್ಟ್ಸ್ ಸಾಮಗ್ರಿಗಳ ಕೊರತೆ ಸೇರಿದಂತೆ ಅಗತ್ಯವಾಗಿ ಇರಬೇಕಾದ ಯಾವ ಸೌಕರ್ಯವೂ ಈ ಶಾಲೆಯಲ್ಲಿ ಇಲ್ಲ. ಸರ್ಕಾರಿ ಶಾಲೆಗಳನ್ನು ಮುನ್ನಡೆಸಬೇಕಾದ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪವಿದೆ.

ಈ ಮೊರಾರ್ಜಿ ವಸತಿ ಶಾಲೆಯಲ್ಲಿ ಸುಮಾರು 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು ದೊರಕದ ಸ್ಥಿತಿ ನಿರ್ಮಾಣವಾಗಿದೆ. ವಸತಿ ಕೊಠಡಿಗಳಲ್ಲಿನ ಫ್ಯಾನ್‌, ಕಿಟಕಿ, ಹಾಸಿಗೆ ಮುಂತಾದ ಮೂಲ ಸೌಲಭ್ಯಗಳೂ ತೃಪ್ತಿಕರವಾಗಿಲ್ಲ. ಕ್ರೀಡಾ ಸಾಮಗ್ರಿಗಳ ಕೊರತೆಯಿಂದ ಮಕ್ಕಳಿಗೆ ಹೊರಚಟುವಟಿಕೆಗಳ ಅವಕಾಶ ಕೂಡ ಕಡಿಮೆಯಾಗಿದೆ. ಡೈನಿಂಗ್ ಹಾಲ್‌ನಲ್ಲೂ ಅಗತ್ಯ ಪರಿಕರಗಳ ಕೊರತೆಯಿಂದ ಊಟದ ವ್ಯವಸ್ಥೆ ಸಮಸ್ಯೆಯಾಗಿದೆ. ಈ ಎಲ್ಲಾ ತೊಂದರೆಗಳು ವಿದ್ಯಾರ್ಥಿಗಳ ಓದು ಮತ್ತು ಮನೋಬಲದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಹಲವು ಬಾರಿ ಆಡಳಿತ ಮಂಡಳಿಗೆ ತಿಳಿಸಿದರೂ ಸ್ಪಂದನೆ ಇಲ್ಲವೆಂಬ ಅಳಲನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಇದು ಅಪಾಯಕಾರಿಯಾಗಿದೆ ಎಂಬ ಆತಂಕ ಪೋಷಕರಲ್ಲೂ ಹೆಚ್ಚಾಗಿದೆ. ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕಾಗಿದೆ.

WhatsApp Image 2025 11 21 at 11.41.48 AM

ವಸತಿ ನಿಲಯದ ಕಟ್ಟಡವು ಕಳಪೆ ಕಾಮಗಾರಿಯಿಂದ ನಿರ್ಮಾಣಗೊಂಡಿರುವುದರಿಂದ ಈಗ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಕೊಠಡಿಗಳೊಳಗೆ ನೀರು ಸೋರುತ್ತದೆ. ಇದರಿಂದ ವಿದ್ಯಾರ್ಥಿಗಳು ದಿನನಿತ್ಯ ತೊಂದರೆ ಅನುಭವಿಸಿ ಅಭ್ಯಾಸಕ್ಕೆ ಕಷ್ಟವಾಗುತ್ತಿದೆ. ಕೊಠಡಿಗಳಲ್ಲಿ ಅಳವಡಿಸಿರುವ ಕೆಲವು ಫ್ಯಾನ್‌ಗಳು ಕಾರ್ಯನಿರ್ವಹಿಸದ ಸ್ಥಿತಿಯಲ್ಲಿವೆ. ಬೇಸಿಗೆಯಲ್ಲಿ ಸಹಿಸಲಸಾಧ್ಯ ಪರಿಸ್ಥಿತಿ. ಅಲ್ಲದೆ ವಿದ್ಯುತ್‌ ವೈರ್‌ಗಳು ಅಲ್ಲಲ್ಲಿ ತುಂಡಾಗಿ ಬಿದ್ದಿವೆ. ಯಾವ ಕ್ಷಣದಲ್ಲಿಯಾದರೂ ಅಪಘಾತ ಸಂಭವಿಸುವ ಭೀತಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಮನೆಮಾಡಿದೆ. ಆತಂಕದ ದಿನಚರಿಯ ನಡುವೆ ಅವರು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ತೊಂದರೆಗಳನ್ನು ತಕ್ಷಣ ಸರಿಪಡಿಸಬೇಕೆಂದು ಎಸ್‌ಎಫ್‌ಐ ಸಂಘಟನೆ ಆಗ್ರಹಿಸಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸೌಲಭ್ಯಗಳ ಕಡೆ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿದ್ಯಾರ್ಥಿಗಳಿಗೆ ಪಾಠ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಆಟಗಳಲ್ಲಿ ಭಾಗವಹಿಸುವುದೂ ಮುಖ್ಯ ಆಗಿರುತ್ತದೆ. ಆದರೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಆಟದ ಸಾಮಗ್ರಿಗಳೇ ಇಲ್ಲ. ಬ್ಯಾಗ್, 9ನೇ ತರಗತಿ ಪಠ್ಯ ಪುಸ್ತಕ, ಶೂ-ಸಾಕ್ಸ್ , ಸಮವಸ್ತ್ರ , ಐಡಿ ಕಾರ್ಡ್ ನೀಡಿಲ್ಲ. ಟೇಲಿಫೋನ್ ರಿಚಾರ್ಜ್ ಮಾಡಲು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಕುರಿತು ಎಸ್ಎಫ್ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, “ಪರೀಕ್ಷೆ ದಿನಾಂಕ ನಿಗದಿಯಾದರೂ ಕೂಡ ಈವರೆಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯ ಪುಸ್ತಕ ನೀಡಿರುವುದಿಲ್ಲ. ಸೋಪ್ ಕೀಟ್, ಸಮವಸ್ತ್ರ, ಕಾಟ್‌-ಬೆಡ್ ಕಲ್ಪಿಸಿರುವುದಿಲ್ಲ. ಅದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು, ಶಾಲೆಯ ಮುಖ್ಯೋಪಾಧ್ಯಾಯರು ಈವರೆಗೂ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸದೆ ಮೌನ ವಹಿಸಿದ್ದಾರೆ. ಅಂಥವರ ಮೇಲೆ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿಕ್ರಿಯಿಸಿ, “ವಿದ್ಯಾರ್ಥಿಗಳ ಸಮಸ್ಯೆ ಸರ್ಕಾರದ ಮಟ್ಟದಲ್ಲಿದೆ. ಜಂಟಿ ನಿರ್ದೇಶಕರ ಸೂಚನೆ ಮೇರೆಗೆ ವಾರ್ಡನ್, ಮುಖ್ಯೋಪಾಧ್ಯಾಯರು ಕೆಲವು ಬೇಡಿಕೆಗಳನ್ನು ತಕ್ಷಣಕ್ಕೆ ಬಗೆಹರಿಸಿದ್ದೇವೆ. ಇನ್ನೂ ಕೆಲವು ಬೇಡಿಕೆಗಳನ್ನು 15 ದಿನದ ಒಳಗಡೆ ಸರಿಪಡಿಸುತ್ತೇವೆಂದು ಲಿಖಿತ ರೂಪದಲ್ಲಿ ಭರವಸೆ ನೀಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಗದಗ | ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಲು ರೈತರು ಧರಣಿ

ವಿದ್ಯಾರ್ಥಿಗಳ ಭವಿಷ್ಯ ಕಟ್ಟಬೇಕಾದ ಸ್ಥಳದಲ್ಲಿ ಮೂಲಸೌಕರ್ಯಗಳಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಿಸುತ್ತಿರುವುದು ನೋವಿನ ಸಂಗತಿ. ಪಠ್ಯಪುಸ್ತಕದಿಂದ ಹಿಡಿದು ಹಾಸಿಗೆ, ಕ್ರೀಡಾ ಸಾಮರ್ಗಿಗಳವರೆಗೆ ಎಲ್ಲವನ್ನೂ ಕೊರತೆಯ ಪಟ್ಟಿಯಲ್ಲಿ ಸೇರಿಸಿರುವುದು ಸರ್ಕಾರದ ಹಾಗೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಪ್ರತಿರೂಪವಾಗಿದೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡ, ಕಿರಿಕಿರಿ ಮಾಡುವ ಫ್ಯಾನ್‌ಗಳು, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್‌ ವೈರ್‌ಗಳು ಎಲ್ಲಾ ಸೇರಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ಶೈಕ್ಷಣಿಕ ಸ್ಥಿತಿಗೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತಿವೆ.

ವಿದ್ಯಾರ್ಥಿ ಸಂಘನೆಗಳ ಒತ್ತಾಯ, ಪೋಷಕರ ಆತಂಕ ಹಾಗೂ ವಿದ್ಯಾರ್ಥಿಗಳ ಅಳಲು ಎಲ್ಲವೂ ಅಧಿಕಾರಿಗಳ ಹೊಣೆಗಾರಿಕೆಗೆ ತುರ್ತು ಕರೆ ನೀಡಿವೆ. ಮುಖ್ಯೋಪಾಧ್ಯಾಯರ ಭರವಸೆ ಸರಿಯಾದ ದಿಕ್ಕಿಗೆ ಚಲಿಸಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಭವಿಷ್ಯ ರೂಪಿಸುವ ಪೂರಕ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಹಾಗೂ ಕರ್ತವ್ಯ ಇಲಾಖೆ ಮತ್ತು ಅಧಿಕಾರಿಗಳ ಮೇಲಿದೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...