“ಕಳೆದ ವಾರ ಮನೆ ಕಟ್ಟಲು ಅಡಿಪಾಯ ತಗೆಯುವಾಗ ಚಿನ್ನದ ನಿಧಿ ಸಿಕ್ಕಿದ್ದು, ಆ ಚಿನ್ನದ ನಿಧಿಯನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ನಿವೇಶನ ಉಚಿತ ಶಿಕ್ಷಣ ಹಾಗೂ ಉದ್ಯೋಗ ನೀಡಲು ವಿಶೇಷ ಗ್ರಾಮ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರಿ ನೇತೃತ್ವದಲ್ಲಿ ಇಂದು ಗ್ರಾಮದ ಜನರ ಸರ್ವಾನುಮತದಿಂದ ವಿಶೇಷ ಗ್ರಾಮಸಭೆಯಲ್ಲಿ ರಿತ್ತಿ ಕುಟುಂಬಕ್ಕೆ ನಿವೇಶನ ನೀಡಲು ನಿರ್ಧಾರ ಕೈಗೊಂಡಿದೆ.
ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡುವುದಾಗಿ ಹಾಗೂ ತಾಯಿ ಗಂಗಮ್ಮ ಅವರಿಗೆ ಉದ್ಯೋಗ ಕಲ್ಪಿಸುವುದಾಗಿ ಪಂಚಾಯತ್ ಭರವಸೆ ನೀಡಿದೆ.
“ಗ್ರಾಮಸಭೆಯ ನಿರ್ಣಯದ ಆಧಾರದಲ್ಲಿ, ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿವೇಶನ 30×40 ಜಾಗ ಹಂಚಿಕೆ ಕುರಿತು ಅಗತ್ಯ ಪರಿಶೀಲನೆ ನಡೆಸಿ, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವಂತೆ ಈ ಮೂಲಕ ಶಿಫಾರಸು ಮಾಡಲಾಗುತ್ತದೆ. ಈ ಪತ್ರದೊಂದಿಗೆ ವಿಶೇಷ ಗ್ರಾಮಸಭೆಯ ನಡಾವಳಿ ಪ್ರತಿಯೊಂದಿಗೆ ಸಂಬಂಧಿಸಿದ ದಾಖಲೆಗಳ ವಿವರವನ್ನು ಸಲ್ಲಿಸಲಾಗಿದೆ. ಮಾನ್ಯರು ದಯವಿಟ್ಟು ಸದರಿ ಕುಟುಂಬಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ವಿಶೇಷ ಗ್ರಾಮ ಸಭೆ ತಿಳಿಸಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು ಸಿದ್ದು ಪಾಟೀಲ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವರು ಎಚ್ ಕೆ ಪಾಟೀಲ್ ಅವರು ಪ್ರಾಮಾಣಿಕವಾಗಿ ನಿಧಿಯನ್ನು ಸರಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಹಾಗೂ ತಾಯಿ ಗಂಗವ್ವ (ಕಸ್ತೂರೆವಾ)ರಿತ್ತಿ ಕುಟುಂಬವನ್ನು ಭೇಟಿ ಮಾಡಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಅದೇ ರೀತಿಯಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ರಿತ್ತಿ ಕುಟುಂಬಕ್ಕೆ 30×40 ನಿವೇಶನ (ಸೈಟ್)ವನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
“ಈ ನಡಾವಳಿ ಪ್ರತಿಯನ್ನು ಇಓ ಅವರಿಗೆ ರವಾನಿಸಿ, ಮನೆ ನಿವೇಶನ ನೀಡಲು ಅಗತ್ಯ ಎಲ್ಲ ದಾಖಲಾತಿಗಳನ್ನು ತಯಾರಿಸಿ, ಜನವರಿ 26 ಗಣರಾಜ್ಯೋತ್ಸವದಂದು ಪ್ರಜ್ವಲ್ ರಿತ್ತಿ ಹಾಗೂ ತಾಯಿ ಗಂಗವ್ವ (ಕಸ್ತೂರೆವ್ವಾ)ರಿತ್ತಿ ಕುಟುಂಬಕ್ಕೆ ನಿವೇಶನ ಪ್ರಮಾಣ ಪತ್ರವನ್ನು ತಲುಪಿಸಲಾಗುತ್ತದೆ” ಎಂದು ತಿಳಿಸಿದರು.
ವಿಶೇಷ ಗ್ರಾಮಸಭೆಯಲ್ಲಿ ಪ್ರಜ್ವಲ್ ರಿತ್ತಿ ಹಾಗೂ ತಾಯಿ ಗಂಗವ್ವ ರಿತ್ತಿ ಕುಟುಂಬವನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.





