ಇನಾಮ್ ವೀರಾಪುರ ಗ್ರಾಮದಲ್ಲಿ ದಲಿತ ಯುವಕ ವಿವೇಕಾನಂದ ಹರಿಜನ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿ ಗರ್ಭಿಣಿಯಾದ ಮಾನ್ಯ ಪಾಟೀಲ ಯುವತಿಯ ಮರ್ಯಾದೆ ಹತ್ಯೆ ಖಂಡಿಸಿ, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ವಿವಿಧ ಜನಪರ ಸಂಘಟನೆಗಳ ಒಕ್ಕೂಟದಿಂದ ಶಿವಾಜಿ ವೃತ್ತದಲ್ಲಿ ಹುಬ್ಬಳ್ಳಿ- ಸೊಲ್ಲಾಪುರ್ ರಾಷ್ಟ್ರಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರು ಮತ್ತು ವಸಂತ ಜೋಗಣ್ಣವರ ಮಾತನಾಡಿ, “ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ತುಂಬಾ ಇದೆ. ಇಂತಹ ಮರ್ಯಾದೆ ಹತ್ಯೆಯನ್ನು ಖಂಡಿಸಲು ಕಾನೂನನ್ನು ಗಟ್ಟಿಗೊಳಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಡಿಎಸ್ಎಸ್ ತಾಲ್ಲೂಕು ಸಂಚಾಲಕರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ಜಾತಿ ಇಲ್ಲ, ಜಾತಿ ಬೇಡ, ಜಾತಿಯಿಂದ ಆಚೆ ಬನ್ನಿ ಹೀಗೆ ಬೇರೆ ವರ್ಗದವರು ಮತ್ತು ಇತ್ತೀಚೆಗೆ ನಮ್ಮವರು ಹೇಳುವುದು ಸಾಮಾನ್ಯವಾಗಿದೆ. ಆದರೆ ಅದನ್ನು ಯಾರು ಪಾಲಿಸುತ್ತಿಲ್ಲ. ತಂದೆಯೇ ತನ್ನ ಸ್ವಂತ ಮಗಳನ್ನೇ ಕೊಲೆ ಮಾಡುವಂತಹ ಮನಸ್ಥಿತಿಯನ್ನು ಪ್ರೇರೇಪಿಸಿದ್ದು ಜಾತಿಯಲ್ಲವೇ? ಈ ಜಾತಿಗಳ ಮೂಲ ಬೇರು ವರ್ಣಾಶ್ರಮದ ಆಚರಣೆಯಲ್ಲವೇ? ಮಗಳನ್ನು ಕೊಂದ ತಂದೆಯ ಜಾತಿಯವರು ಇದರಿಂದ ನೊಂದುಕೊಂಡಿದ್ದಾರೋ ಅಥವಾ ಖುಷಿಯಾಗಿದ್ದರೋ ಗೊತ್ತಿಲ್ಲ. ಆದರೆ ನಮಗಂತೂ ಪ್ರಪಂಚವನ್ನೇ ಕಾಣದ ಪುಟ್ಟ ಮಗುವಿನ ಗರ್ಭಿಣಿಯನ್ನು ಸಾಯಿಸಿದ್ದು ಹೇಯ ಕೃತ್ಯ ಅನ್ನಿಸಿದೆ” ಎಂದು ಆಕ್ರೋಶ ವ್ಯಕ್ತಪಡಸಿದರು.
ಯುವ ಹೋರಾಟಗಾರರು ವಿಜಯ ಛಲವಾದಿ ಮಾತನಾಡಿ, “ದಲಿತ ಸಮುದಾಯದವರ ಜೊತೆ ಸಂಬಂಧ ಮಾಡಿಕೊಂಡರೆ ಈ ತರಹ ವಿಕೃತ ಹಂತಕ್ಕೆ ಯೋಚಿಸುತ್ತಾರೆಂಬ ನೋವು ಕಾಡುತ್ತದೆ. ಇಂತಹ ಘಟನೆಗಳು ನಿಲ್ಲಬೇಕು. ಇಲ್ಲದಿದ್ದರೇ ಮನುಕುಲಕ್ಕೆ ಅವಮಾನ” ಎಂದು ವಿಷಾದ ವ್ಯಕ್ತಪಡಿಸಿದರು.
ದಲಿತ ಯುವ ಮುಖಂಡರು ಗುರುನಾಥ ಕೆಂಗಾರಕರ ಮಾತನಾಡಿ, “ಬುದ್ಧ ಬಸವ ಅಂಬೇಡ್ಕರ್ ಅವರು ಸಮಾನತೆಗೆ ಹೋರಾಡಿದ ನಾಯಕರು. ಅವರ ನಾಡಲ್ಲಿ ಈ ರೀತಿಯ ವಿಕೃತಿ ಅವರ ಆಶಯ ತತ್ವಗಳಿಗೆ ವಿರುದ್ಧವಾಗಿದೆ. ಇಂತಹ ಮನ ಕಲಕುವ ಘಟನೆಯನ್ನು ಮಾಡಿದ ಆರೋಪಿಗಳನ್ನು ಮರಣದಂಡೆಗೆ ವಿಧಿಸಬೇಕು” ಎಂದು ಸರಕಾರಕ್ಕೆ ಒತ್ತಾಯ ಮಾಡಿದರು
ಪ್ರತಿಭಟನೆಯಲ್ಲಿ ಎಫ್ ವೈ ದೊಡ್ಡಮನಿ, ಡಾ. ಮುತ್ತು ಸುರಕೋಡ ಮಾತನಾಡಿದರು. ಪ್ರತಿಭಟನೆಯಲ್ಲಿ ಯಶವಂತ್ ಚಲವಾದಿ, ದುರಗಪ್ಪ ಜೋಗಣ್ಣವರ, ಸಣ್ಣದುರ್ಗಪ್ಪ ದಂಡಾಪುರ, ಪುನೀತ ಜೋಗಣ್ಣವರ, ವಿಕ್ರಂ ಹೊನ್ನಕೇರಿ, ಪ್ರಶಾಂತ್ ತಡಸಿ, ಕಿರಣ ಜೋಗಣ್ಣವರ, ನಬಿಸಬಾ ಕಿಲ್ಲದಾರ, ವಿಜಯ್ ಬಡಿಗೇರ, ಶರಣು ಛಲವಾದಿ, ಖಾಜು ಕಿಲ್ಲದಾರ್, ನವೀನ್ ಜೋಗನ್ನವರ, ಮಾಂತೇಶ ಪೂಜಾರ, ಸಿದ್ದು ಕೆಲಗೇರಿ, ಮುತ್ತು ಪೂಜಾರ, ಪ್ರವೀಣ ಬಾಂಗಿ,ರವಿ ಚಿಂತಾಲ್, ಹಸನ ಮೇಸ್ತ್ರಿ, ಶ್ರೀಕಾಂತ ಜೋಗಣ್ಣವರ, ಅರ್ಜುನ ಮಾದರ ಇನ್ನೂ ಅನೇಕರು ಉಪಸ್ಥಿತರಿದ್ದರು
ವರದಿ: ಗುರುನಾಥ ಬ ಕೆಂಗಾರಕರ, ಸಿಟಿಜನ್ ಜರ್ನಲಿಸ್ಟ್ ನರಗುಂದ





