ಉತ್ತರ ಕರ್ನಾಟಕದ ರೈತರು ಒಳ್ಳೆಯ ಬೆಲೆ ಬರುತ್ತದೆ ಎಂದು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮೆಣಸಿನಕಾಯಿ ಈಗ ಕಂದು ಬಣ್ಣಕ್ಕೆ ತಿರುಗುತ್ತಿವೆ. ಇದರಿಂದ ರೈತರು ಮನೆಯಲ್ಲೂ ಇಟ್ಟುಕೊಳ್ಳಲಾಗದೆ, ಮಾರಾಟ ಮಾಡಲೂ ಆಗದೆ ಪರಿತಪಿಸುವಂತಾಗಿದೆ.
ಕಳೆದ ಬಾರಿ ಮೆಣಸಿನಕಾಯಿ ಉತ್ತಮ ಬೆಳೆ ಬಂದಿದ್ದರೂ ಕೂಡ, ಬೆಲೆ ಕುಸಿತದಿಂದಾಗಿ ಹಲವು ರೈತರು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ಉದ್ದೇಶದಿಂದ ಮನೆಗಳಲ್ಲಿ, ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಆದರೆ ಈಗಲೂ ಬೆಲೆ ಕುಸಿಯುತ್ತಿರುವುದರಿಂದ ರೈತರ ಮೇಲೆ ಬರೆ ಎಳೆದಂತಾಗಿದೆ.
ಗದಗ ಜಿಲ್ಲೆಯಾದ್ಯಂತ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿತ್ತು. ಉತ್ತಮ ಇಳುವರಿಯ ಬಂದಿದ್ದ ಮೆಣಸಿನಕಾಯಿ ಬೆಳೆಗೆ ರೈತರಿಗೆ ಜನವರಿಯಲ್ಲಿ ಗದಗ, ಬ್ಯಾಡಗಿ ಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ರೂ ಐವತ್ತು ಸಾವಿರದಿಂದ ಅರವತ್ತು ಸಾವಿರದವರೆಗೆ ಬೆಲೆ ಇತ್ತು. ನಂತರ ಫೆಬ್ರವರಿ ತಿಂಗಳಿಂದ ಇಲ್ಲಿಯವರೆಗೂ ಮೆಣಸಿನಕಾಯಿ ಬೆಲೆ ಕುಸಿತ ಕುಸಿತ ಕಂಡಿದೆ. ಸೂಕ್ತ ಬೆಲೆ ಸಿಗದ ಕಾರಣ ಮಾರಾಟಕ್ಕೆ ತೆಗೆದುಕೊಂಡು ಹೋಗಿದ್ದ ಸುಮಾರು ಹತ್ತರಿಂದ ಇಪ್ಪತ್ತು ಕ್ವಿಂಟಾಲ್ ಮೆಣಸಿನಕಾಯಿಯನ್ನು ಮರಳಿ ಮನೆಯಲ್ಲಿ ಸಂಗ್ರಹಣೆ ಮಾಡಿದ್ದಾರೆ.
ರೈತರು ಸಂಗ್ರಹಿಸಿಟ್ಟಿದ್ದ ಕೆಂಪು ಮೆಣಸಿನಕಾಯಿ ಕಂದು ಬಣ್ಣಕ್ಕೆ ತಿರುಗಿದೆ. ಬೆಲೆ ಕುಸಿತದ ನಡುವೆ ಈ ರೀತಿ ಬಣ್ಣ ಬದಲಾವಣೆಗೊಂಡಿರುವುದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಉತ್ತಮ ಬೆಲೆ ಬರುವ ನಿರೀಕ್ಷೆಯಲ್ಲಿ ರೈತರು ಸಂಗ್ರಹಣೆ ಮಾಡಿಟ್ಟಿದ್ದ ಮೆಣಸಿನಕಾಯಿ ಉಪಯೋಗಕ್ಕೆ ಬಾರದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಾದ್ಯಂತ ಮೆಣಸಿನಕಾಯಿ ಬೆಳೆದ ರೈತರ ಸ್ಥಿತಿ ಚಿಂತಾಜನಕವಾಗಿದೆ.
ಈ ಕುರಿತು ರೋಣ ತಾಲೂಕಿನ ಅರಹುಣಶಿ ಗ್ರಾಮದ ರೈತ ಮುತ್ತನಗೌಡ ಚೌಡರೆಡ್ಡಿ ಮಾತನಾಡಿ, “ಒಳ್ಳೆ ಬೆಲೆ ಬರುತ್ತದೆ ಎಂದು ಮನೆಯಲ್ಲಿ ಮೆಣಸಿನಕಾಯಿ ಸಂಗ್ರಹಣೆ ಮಾಡಿದ್ದೆ. ಈಗ ಬೆಲೆ ಏಳು ಎಂಟು ಸಾವಿರ ಕಡಿಮೆ ಆಗಿದ್ದರಿಂದ, ಏನ್ ಮಾಡಬೇಕು ಅಂತ ತಿಳಿಯುತ್ತಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.
ಈ ಕುರಿತು ರೋಣ ತಾಲೂಕಿನ ಕೌಜಗೇರಿ ಗ್ರಾಮದ, ಕೃಷಿಕ ಸಮಾಜ ಜಿಲ್ಲಾ ಅಧ್ಯಕ್ಷ ಬಸವರಾಜ್ ಸಜ್ಜನ ಮಾತನಾಡಿ, “ಜಿಲ್ಲೆಯ ಬಹುತೇಕ ಪ್ರತಿ ರೈತರ ಮನೆಗಳಲ್ಲಿ ಉತ್ತಮ ಬೆಲೆ ಬರುತ್ತೆ ಅಂತ ಕ್ವಿಂಟಾಲ್‌ಗಟ್ಟಲೆ ತೂಕದಷ್ಟು ಮೆಣಸಿನಕಾಯಿಯನ್ನು ಸಂಗ್ರಹಿಸಿಟ್ಟಿದ್ದಾರೆ. ಆದರೆ ಬೆಲೆಯೇ ಇಲ್ಲ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ರೈತರ ಮೆಣಸಿನಕಾಯಿಗೆ ಸರಕಾರ ಉತ್ತಮ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು ಎಂಬುದು ನಮ್ಮ ಆಗ್ರಹ” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




